spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಭಾರತದ ಜನಸಂಖ್ಯಾ ಫಲವತ್ತತೆ ದರದಲ್ಲಿ ಕುಸಿತ: ಈ ಸಮಾಚಾರ ಒಳ್ಳೇದೋ ಅಥವಾ ಆತಂಕದ್ದೋ?

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್

ಮೊದಲ ಬಾರಿಗೆ ಭಾರತದ ಜನಸಂಖ್ಯೆಯು ಅದರ ಒಟ್ಟು ಫಲವತ್ತತೆ ದರ (ಟೋಟಲ್ ಫರ್ಟಿಲಿಟಿ ರೇಟ್) ಅಥವಾ ಮಹಿಳೆಯೊಬ್ಬಳಿಗೆ ತನ್ನ ಜೀವಿತಾವಧಿಯಲ್ಲಿ ಜನಿಸಿದ ಮಕ್ಕಳ ಸರಾಸರಿ ಸಂಖ್ಯೆಯು ಬದಲಿ ಫಲವತ್ತತೆ ಮಟ್ಟಕ್ಕಿಂತ ಕೆಳಗೆ ಕುಸಿದಿದೆ.

ಏನಿದು ಬದಲಿ ಫಲವತ್ತತೆ ಮಟ್ಟ ಅಥವಾ ರಿಪ್ಲೇಸ್ಮೆಂಟ್ ದರ? ಈ ಪದಪುಂಜವೇ ಹೇಳುವಂತೆ, ಈಗಿರುವ ಜನಸಂಖ್ಯೆ ಮರಣಕ್ಕೆ ಒಳಗಾಗುತ್ತ ಹೋದಂತೆ, ಒಟ್ಟಾರೆ ಜನಸಂಖ್ಯೆಯನ್ನು ಅದೇ ಸಂಖ್ಯೆಯಲ್ಲಿಡುವಷ್ಟರಮಟ್ಟಿಗೆ ಮಕ್ಕಳನ್ನು ಹಡೆಯಲಾಗುತ್ತಿದೆಯೇ ಎಂಬ ಲೆಕ್ಕಾಚಾರವಿದು. ದೇಶದ ಮಹಿಳೆ ಸರಾಸರಿ 2.1 ಮಕ್ಕಳನ್ನು ಹುಟ್ಟಿಸುತ್ತಿದ್ದರೆ ಬದಲಿ ವ್ಯವಸ್ಥೆ ಸರಿಯಾಗಿದೆ ಎಂಬುದು ಒಂದು ಮೇಲ್ಮೇಲಿನ ಲೆಕ್ಕಾಚಾರ. ಕೆಲವು ನಿಯಮಗಳಿಗೊಳಪಟ್ಟು ಇದರಲ್ಲಿ ಬದಲಾವಣೆಗಳಾಗುತ್ತವೆ. ಇದೇ ಮೊದಲ ಬಾರಿಗೆ, ಭಾರತದ ಜನಸಂಖ್ಯೆ ಫಲವತ್ತತೆ ದರವು, ಮರಣಕ್ಕೊಳಗಾಗುವವರ ಸಂಖ್ಯೆಗೆ ಬದಲಿ ಸಂಖ್ಯೆ ರೂಪಿಸಲಾಗದಂತೆ ಕೆಳಹೋಗಿದೆ ಎಂಬುದು ಸಮೀಕ್ಷೆಯ ತಾತ್ಪರ್ಯ.

ಇದು 2019-21ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ದತ್ತಾಂಶದಲ್ಲಿ ಬಹಿರಂಗವಾಗಿದೆ. ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ದತ್ತಾಂಶದಲ್ಲಿ ಒಟ್ಟು ಫಲವತ್ತತೆ ದರ ಈಗ 2 ಆಗಿದೆ. ಇದಕ್ಕೂ ಮೊದಲು ಇಂಥದೊಂದು ಸಮೀಕ್ಷೆ ಆಗಿದ್ದು 2015-16ರಲ್ಲಿ.

ಉತ್ತರ – ದಕ್ಷಿಣ ರಾಜ್ಯಗಳಲ್ಲಿ ಹೇಗಿದೆ ಏರಿಳಿತ?

ದೊಡ್ಡ ರಾಜ್ಯಗಳ ಪೈಕಿ ಕಡಿಮೆ ಫಲವತ್ತತೆ ದರ ಹೊಂದಿರುವುದು ಉತ್ತರ ಭಾರತದ ಜಮ್ಮು – ಕಾಶ್ಮೀರ (1.4). ಹಿಂದಿನ ಸಮೀಕ್ಷೆಗೆ ಹೋಲಿಸಿದರೆ ಗರಿಷ್ಠ (0.6) ಒಟ್ಟು ಫಲವತ್ತತೆ ದರ ಕುಸಿತ ದಾಖಲಿಸಿದ ರಾಜ್ಯವೂ ಇದಾಗಿದೆ. ಇದೇ ವೇಳೆ ದಕ್ಷಿಣ ಭಾರತದ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಟಿಎಫ್ಆರ್ ಸ್ವಲ್ಪಮಟ್ಟಿಗೆ ಏರಿಕೆಯಾಗಿದೆ. ಹೆಚ್ಚಳವಾದ ದರ ಕ್ರಮವಾಗಿ 0.2 ಮತ್ತು 0.1 ಆಗಿದೆ. ಸಿಕ್ಕಿಂ (1.1) ಅತೀ ಕಡಿಮೆ ಒಟ್ಟು ಫಲವತ್ತತೆ ದರ ಹೊಂದಿರುವ ರಾಜ್ಯ. ಇದು ಪ್ರಪಂಚದ ಕಡಿಮೆ ಫಲವತ್ತತೆ ದರ ಹೊಂದಿರುವ ದಕ್ಷಿಣ ಕೊರಿಯಾದ ಟಿಎಫ್ಆರ್ (1.1) ದರಕ್ಕೆ ಸಮಾನವಾಗಿದೆ.

ಈಗ ಭಾರತದಲ್ಲಿ ಏನಾಗಿದೆ?

ಭಾರತದ ದೊಡ್ಡರಾಜ್ಯಗಳಲ್ಲಿ ಬದಲಿ ಫಲವತ್ತತೆ ಮಟ್ಟಕ್ಕಿಂತ ಹೆಚ್ಚು ಒಟ್ಟು ಫಲವತ್ತತೆ ದರ ಹೊಂದಿರುವುದು ಕೇವಲ ಮೂರು ರಾಜ್ಯಗಳು ಮಾತ್ರ. ಬಿಹಾರ (3.0), ಉತ್ತರ ಪ್ರದೇಶ (2.4) ಮತ್ತು ಜಾರ್ಖಂಡ್ (2.3). ಚಿಕ್ಕ ರಾಜ್ಯಗಳ ಪೈಕಿ ಮೇಘಾಲಯ, ಮಣಿಪುರ ಮತ್ತು ಮಿಜೋರಾಂನಲ್ಲಿ ಮಾತ್ರ ಗ್ರಾಮೀಣ ಟಿಎಫ್ಆರ್ ಬದಲಿ ಮಟ್ಟಕ್ಕಿಂತ ಹೆಚ್ಚಾಗಿದೆ.

ಇದಕ್ಕೆ ಪ್ರಮುಖ ಕಾರಣವೇನು?

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2005-06ರಲ್ಲಿ ಭಾರತದ ಟಿಎಫ್ಆರ್ 2.7 ಆಗಿತ್ತು, 2015-16ರ ವೇಳೆಗೆ 2.2ಕ್ಕೆ ಇಳಿಯಿತು. ಕಳೆದ 15ವರ್ಷಗಳಲ್ಲಿ ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಬಿಹಾರದಂತಹ ಕೆಲವು ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳು ಟಿಎಫ್ಆರ್‌ನಲ್ಲಿ ಗಮನಾರ್ಹ ಕುಸಿತ ಕಂಡಿವೆ. ಇದು ಭಾರತದ ಬದಲಿ ಫಲವತ್ತತೆ ಮಟ್ಟಕ್ಕಿಂತ ಕೆಳಗೆ ಟಿಎಫ್ಆರ್‌ನ ಒಟ್ಟಾರೆ ದರ ಕುಸಿತಕ್ಕೆ ಕಾರಣವಾಗಿದೆ.

ಬೇರೆ ಬೇರೆ ದೇಶಗಳ ಟಿಎಫ್ಆರ್ ಹೇಗಿದೆ?

ವಿಶ್ವಸಂಸ್ಥೆಯ ಜನಸಂಖ್ಯೆಯ ಮಾಹಿತಿಯ ಪ್ರಕಾರ, ಪಶ್ಚಿಮ ಆಫ್ರಿಕಾದ ನೈಜರ್ (6.9) ಮತ್ತು ಪೂರ್ವ ಆಫ್ರಿಕಾದ ಸೊಮಾಲಿಯಾ (6.1)ದಲ್ಲಿ ಹೆಚ್ಚಿನ ಫಲವತ್ತತೆಯ ಪ್ರಮಾಣವಿದೆ. ಭಾರತದ ನೆರೆಯ ದೇಶಗಳಲ್ಲಿ ನೇಪಾಳವು (1.9) ಮತ್ತು ಬಾಂಗ್ಲಾದೇಶ (2) ಕಡಿಮೆ ಟಿಎಫ್ಆರ್ ಹೊಂದಿದೆ. ಆಫ್ರಿಕಾ (4.4) ಮತ್ತು ಓಷಿಯಾನಿಯಾ (2.4) ಹೊರತುಪಡಿಸಿ, ಎಲ್ಲ ಭೌಗೋಳಿಕ ಪ್ರದೇಶಗಳು 2.1 ಅಥವಾ ಅದಕ್ಕಿಂತ ಕಡಿಮೆ ಟಿಎಫ್ಆರ್ ಹೊಂದಿವೆ.

ಮಾಧ್ಯಮಗಳ ಗ್ರಹಿಕೆ ಏನು? ಇಷ್ಟಕ್ಕೂ ಇದು ಗುಡ್ ನ್ಯೂಸಾ?

ಗುರುವಾರ ಈ ಮಾಹಿತಿಗಳು ಹೊರಬೀಳುತ್ತಿದ್ದಂತೆ ಆಂಗ್ಲ ಜಾಲತಾಣಗಳಲ್ಲಿ ಪ್ರಕಟವಾದ ವರದಿಗಳೆಲ್ಲ ಇದನ್ನು ಉತ್ತಮ ವಿದ್ಯಮಾನ ಎಂಬಂತೆಯೇ ನೋಡಿವೆ.

“ಬದಲಿ ಹಂತಕ್ಕಿಂತ ಕೆಳಗೆ ಕುಸಿದ ಜನಸಂಖ್ಯೆ ಫಲವತ್ತತೆ ದರ, ಜನಸಂಖ್ಯೆ ಸ್ಥಿರವಾಗುತ್ತಿರುವುದರ ಸೂಚನೆ- ಇಂಡಿಯನ್ ಎಕ್ಸ್ಪ್ರೆಸ್”

“2.1ಕ್ಕಿಂತ ಕೆಳಕ್ಕಿಳಿದ ಭಾರತದ ಫಲವತ್ತತೆ ದರ, ಗರ್ಭನಿರೋಧಕಗಳು ಕೆಲಸ ಮಾಡುತ್ತಿರುವುದು ಸೂಚನೆ- ಹಿಂದುಸ್ತಾನ್ ಟೈಮ್ಸ್”

ಈ ಶೀರ್ಷಿಕೆಗಳನ್ನು ಗಮನಿಸಿದರೆ, ಭಾರತದ ಜನಸಂಖ್ಯೆ ಕಡಿಮೆಯಾಗುತ್ತಿರುವುದರ ಬಗ್ಗೆ ನಿರಾಳತೆ ವ್ಯಕ್ತವಾಗುತ್ತಿರುವುದನ್ನು ಕಾಣಬಹುದು. ಆದರೆ, ಇದಕ್ಕೆ ಭಿನ್ನ ಹೊಳಹುಗಳೂ ಇವೆ.

ಜನಸಂಖ್ಯಾಸ್ಫೋಟವೇ ಭಾರತದ ಎಲ್ಲ ಸಮಸ್ಯೆಗಳಿಗೆ ಕಾರಣ ಎಂದು ಪಠ್ಯಪುಸ್ತಕಗಳಲ್ಲಿ ಢಾಳಾಗಿಯೇ ಹೇಳಿರುವುದರಿಂದ, ಫಲವತ್ತತೆ ದರ ಕುಸಿದಿರುವುದನ್ನು ಎಲ್ಲರೂ ಸ್ವಾಗತಿಸುವವರೇ. ಆದರೆ ಇದು ಒಳ್ಳೆಯದೋ, ಆತಂಕಕಾರಿಯೋ ಎಂದೆಲ್ಲ ಹೇಳುವುದಕ್ಕೆ ಹಲವು ಆಯಾಮಗಳನ್ನು ಗಮನಿಸಬೇಕು. ಭಾರತದಂಥ ದೇಶದಲ್ಲಿ ಯಾವ ಸಮುದಾಯದ ಜನಸಂಖ್ಯೆ ದರ ನಿಜಕ್ಕೂ ಕಡಿಮೆ ಆಗುತ್ತಿದೆ ಎಂಬ ಅಂಶ ದೇಶದ ವ್ಯವಸ್ಥೆಯನ್ನೇ ಬದಲಿಸುವ ಶಕ್ತಿ ಹೊಂದಿದೆ ಎಂಬುದನ್ನು ಮರೆಯುವಂತಿಲ್ಲ. ಸರಾಸರಿಯಾಗಿ ದೇಶ ಜನಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳುತ್ತಿದೆ ಎಂಬುದು ಮೇಲ್ನೋಟಕ್ಕೆ ಉತ್ತಮ ಸಂಗತಿಯೇ ಆದರೂ, ಈ ಪೈಕಿ ನಿಜಕ್ಕೂ ಮಕ್ಕಳನ್ನು ಬೆಳೆಸಬಲ್ಲ ಶಕ್ತಿ ಇರುವವರು, ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ತಾಕತ್ತಿರುವವರೇ ಮಕ್ಕಳನ್ನು ಮಾಡಿಕೊಳ್ಳುತ್ತಿಲ್ಲ ಎಂದಾದರೆ ಅದು ಖುಷಿಪಡುವ ವಿಷಯ ಖಂಡಿತ ಆಗಿರದು.

ಫಲವತ್ತತೆ ದರ ಕಡಿಮೆಯಾಗುವುದೆಂದರೆ, ಸಮುದಾಯವು ಒಂದೇ ಮಗುವನ್ನು ಅತ್ಯಂತ ರಕ್ಷಣಾತ್ಮಕವಾಗಿ ಬೆಳೆಸಲು ಆರಂಭಿಸಿದೆ ಎಂದೂ ಅರ್ಥಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಇದೇ ದಾರಿಯಲ್ಲಿ ಸಾಗಿದ ಚೀನಾದಲ್ಲಿ ಸೇನೆಗೆ ಸೇರುವುದಕ್ಕೆ ಜನರಿಲ್ಲದೇ ಬಲವಂತದ ನೇಮಕ ನಡೆಯುತ್ತಿರುವುದು, ಅಲ್ಲಿನ ಮಕ್ಕಳಲ್ಲಿ ಏಕಾಕಿತನದ ಭಾವ ಹಬ್ಬಿ ಹಲವು ಮನೋವೈಜ್ಞಾನಿಕ ಸಮಸ್ಯೆಗಳಿಗೆ ದಾರಿಯಾಗಿರುವುದು ಇವನ್ನೆಲ್ಲ ನೋಡುತ್ತಿದ್ದೇವೆ. ಮುಖ್ಯವಾಗಿ, ಜನಸಂಖ್ಯೆಯ ಭಾಗವೊಂದು ವೃದ್ಧಾಪ್ಯದಲ್ಲಿದ್ದಾಗ ಅದಕ್ಕೆ ಆರ್ಥಿಕ ಸಹಾಯಕ್ಕೆ ಯುವ ಜನಸಂಖ್ಯೆ ಇರದಿದ್ದರೆ ಯಾವುದೇ ದೇಶ ಸಂಕಷ್ಟಕ್ಕೆ ಸಿಲುಕುತ್ತದೆ. ಇವೆಲ್ಲ ಪ್ರತ್ಯೇಕ ಚರ್ಚೆಯ ವಿಷಯಗಳು. ಆದರೆ, ಫಲವತ್ತತೆ ದರ ಕುಸಿದು ಜನಸಂಖ್ಯೆಸ್ಫೋಟ ನಿಲ್ಲುತ್ತಿದೆ ಎಂದು ಸಂಭ್ರಮಿಸುವುದಕ್ಕೆ ಮೊದಲು ತಲೆಯಿಲ್ಲಿರಬೇಕಾದ ಆಯಾಮಗಳು ಇವೆಲ್ಲ.

 ಒಳ್ಳೆ ಸುದ್ದಿ ಅಂದ್ರೆ…

ಈಗ ಹೊರಬಿದ್ದಿರುವ ಮಾಹಿತಿಗಳಲ್ಲಿ ನಿಸ್ಸಂಶಯವಾಗಿ ಒಳ್ಳೆ ಬೆಳವಣಿಗೆ ಎಂದು ನಾವು ಹೇಳಬಹುದಾಗಿದ್ದು ಲಿಂಗಾನುಪಾತ ಉತ್ತಮಗೊಂಡಿರುವುದು. ಪ್ರತಿ ಸಾವಿರ ಗಂಡುಮಕ್ಕಳಿಗೆ 2015-2016ರ ಸಮೀಕ್ಷೆಯಲ್ಲಿ 991 ಹೆಣ್ಣುಮಕ್ಕಳಿದ್ದರು. ಈಗ ಆ ಸಂಖ್ಯೆ 1020ಕ್ಕೆ ಏರಿದೆ. ಮೋದಿ ಸರ್ಕಾರದ ಬೇಟಿ ಬಚಾವೊ, ಬೇಟಿ ಪಢಾವೊ ಯೋಜನೆ ದೊಡ್ಡ ಪರಿಣಾಮವನ್ನೇ ಉಂಟುಮಾಡಿದೆ ಎಂದು ಹೇಳಬಹುದು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss