Sunday, March 7, 2021

Latest Posts

ಇಂಡೋ-ಪೆಸಿಫಿಕ್‌ನಲ್ಲಿ ಅಮೆರಿಕಕ್ಕೆ ಭಾರತ ನಿರ್ಣಾಯಕ ಸಹಭಾಗಿ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಮೆರಿಕದ ನೂತನ ಅಧ್ಯಕ್ಷ ಬೈಡೆನ್ ಆಡಳಿತವು ತನ್ನ ವಿದೇಶಾಂಗ ಮತ್ತು ರಾಷ್ಟ್ರೀಯ ರಕ್ಷಣಾ ನೀತಿಗೆ ರೂಪು ನೀಡುತ್ತಿದ್ದು, ಇಂಡೋ-ಪೆಸಿಫಿಕ್‌ನಲ್ಲಿ ಅಮೆರಿಕದ ವ್ಯೂಹಾತ್ಮಕ ಕಾರ್ಯತಂತ್ರಕ್ಕೆ ಭಾರತ ನಿರ್ಣಾಯಕ ಸಹಭಾಗಿ ಎಂಬುದಾಗಿ ತಜ್ಞರು ಮತ್ತು ಮಾಜಿ ರಾಜತಾಂತ್ರಿಕರು ಒತ್ತಿ ಹೇಳಿದ್ದಾರೆ.
ಪ್ರದೇಶದಲ್ಲಿ ಚೀನಾ ವಿಸ್ತರಣಾವಾದಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳು ಮುಕ್ತ ಮತ್ತು ತೆರೆದ ಮನಸ್ಸಿನಿಂದ ಸಮಾನ ವ್ಯೂಹಾತ್ಮಕ ದೃಷ್ಟಿಗಳನ್ನು ಹಂಚಿಕೊಳ್ಳಲು ಅವಕಾಶವಿದೆ ಎಂಬುದಾಗಿ ಈ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿನ ಹುಡ್ಸನ್ ಇನ್‌ಸ್ಟಿಟ್ಯೂಟ್‌ನ ಚಿಂತನ ಚಿಲುಮೆ ಆಯೋಜಿಸಿದ್ದ ವರ್ಚುವಲ್ ಪ್ಯಾನಲ್ ಚರ್ಚೆಯೊಂದರ ವೇಳೆ ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ಮತ್ತು ಚೀನಾ ಅನಾಲಿಸಿಸ್ ಅಂಡ್ ಸ್ಟ್ರಾಟಜಿಗಾಗಿ ಇರುವ ಕೇಂದ್ರದ ಅಧ್ಯಕ್ಷ ಜಯದೇವ ರಾನಡೆ ಅವರು ಕೂಡ ಇಂತಹುದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಭಾರತ ಮತ್ತು ಅಮೆರಿಕದ ನಡುವಣ ಸಂಬಂಧ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದ್ದಾರೆ.
ಉಭಯ ದೇಶಗಳ ಸಂಬಂಧ ವಿಸ್ತಾರವಾಗಿ ಮುಂದುವರಿಯುತ್ತಿದೆ. ಯಾಕೆಂದರೆ ವ್ಯೂಹಾತ್ಮಕ ಸಮಾನತೆಯೂ ಬೆಳೆಯುತ್ತಿದೆ . ಇದು ಹವಾಮಾನ ಬದಲಾವಣೆ ಇರಲಿ ಚೀನಾ ವಿಷಯವೇ ಇರಲಿ, ಇಂಡೋ-ಪೆಸಿಫಿಕ್ ಅಥವಾ ಸಾಗರ ರಕ್ಷಣೆಯೇ ಇರಲಿ , ಉಭಯ ದೇಶಗಳಲ್ಲಿ ಅನೇಕ ಸಮಾನತೆಗಳಿವೆ ಎಂದು ಮೆನನ್ ಹೇಳಿದರು.
ಅಮೆರಿಕ ನಮ್ಮ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿದ್ದು , ಭಿನ್ನಾಭಿಪ್ರಾಯಗಳನ್ನು ಹೇಗೆ ನಿರ್ವಹಿಸಬೇಕೆಂಬುದನ್ನು ನಾವು ಬಲ್ಲೆವು ಎಂದೂ ಅವರು ನುಡಿದರು.೨೦೧೨ರಿಂದ ಚೀನಾ ಪಾಕಿಸ್ತಾನದ ಬಲವಾದ ವ್ಯೂಹಾತ್ಮಕ ನೆರವನ್ನು ಒದಗಿಸುವ ಮೂಲಕ ಮತ್ತು ನೇಪಾಳ, ಶ್ರೀಲಂಕಾಗಳ ಆಂತರಿಕ ರಾಜಕೀಯದಲ್ಲಿ ಮೂಗು ತೂರಿಸುವ ಮೂಲಕ ಹಾಗೂ ಹಿಂದು ಮಹಾಸಾಗರದಲ್ಲಿ ಸೇನಾ ನೆಲೆಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ದಕ್ಷಿಣ ಏಶ್ಯಾದಲ್ಲಿ ಸಕ್ರಿಯ ಉಪಸ್ಥಿತಿ ಪ್ರದರ್ಶಿಸಲಾರಂಭಿಸಿತು. ಅಲ್ಲದೆ , ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ವಿಷಯ ಸೇರಿದಂತೆ ಭಾರತ ವಿರೋಧಿ ನಿಲುವನ್ನು ಬಹಿರಂಗವಾಗಿ ವ್ಯಕ್ತಪಡಿಸಲಾರಂಭಿಸಿದ್ದನ್ನು ಮೆನನ್ ಉಲ್ಲೇಖಿಸಿದರು.
ರಾನಡೆ ಅವರು ಮಾತನಾಡಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಅಮೆರಿಕವನ್ನು ಹಿಂದಿಕ್ಕಲಾಗದಿದ್ದಲ್ಲಿ, ಚೀನಾ ಕನಿಷ್ಠ ಏಶ್ಯಾ ಅಥವಾ ಇಂಡೋ-ಪೆಸಿಫಿಕ್ ಭಾಗದಲ್ಲಿ ಪಾರಮ್ಯ ಸಾಸಬೇಕೆಂಬ ಗುರಿ ಹೊಂದಿದೆ . ಇದಕ್ಕೆ ಚೀನಾ ಲಡಾಖ್‌ನಲ್ಲಿ ಕಳೆದ ವರ್ಷ ಸೇನಾಕ್ರಮಣಕ್ಕೆ ಯತ್ನಿಸಿದ್ದು ಒಂದು ನಿದರ್ಶನ ಮಾತ್ರ ಎಂದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss