ಸಂಸ್ಕಾರಯುತ ಸಮಾಜದಿಂದ 10 ವರ್ಷಗಳಲ್ಲಿ ಜಗತ್ತಿಗೆ ಭಾರತದ ನೇತೃತ್ವ: ಸುರೇಶ್ ಜೈನ್

ಹೊಸದಿಗಂತ ವರದಿ, ಬೆಂಗಳೂರು:

ಶಾಲೆಯಲ್ಲಿ ಶಿಕ್ಷಕರು, ಮನೆಯಲ್ಲಿ ತಾಯಿ ಮಕ್ಕಳಿಗೆ ಸಂಸ್ಕಾರ ಕಲಿಸಿದರೆ ಉತ್ತಮ ಕುಟುಂಬ ರೂಪಿಸಬಹುದು. ಜ್ಞಾನದ ಜೊತೆಗೆ ಸಂಸ್ಕಾರ ಸಿಕ್ಕರೆ ಸಮಾಜ ಬದಲಾವಣೆಯಾಗಿ 10 ವರ್ಷಗಳಲ್ಲಿ ಭಾರತ ಜಗತ್ತಿನ ನೇತೃತ್ವ ವಹಿಸಲಿದೆ ಎಂದು ಭಾರತ ವಿಕಾಸ್ ಪರಿಷತ್ (ಬಿವಿಪಿ) ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸುರೇಶ್ ಜೈನ್ ಹೇಳಿದ್ದಾರೆ.

ಅವರು ಭಾನುವಾರ ಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತ ನೂತನ ಪದಾಧಿಕಾರಿಗಳ ದಾಯಿತ್ವ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಯಂದಿರು ಮಕ್ಕಳಿಗೆ ಸಂಸ್ಕಾರ ಕಲಿಸಿದರೆ ಸುಂದರ ಕುಟುಂಬ ನಿರ್ಮಾಣ ಸಾಧ್ಯ. ತಾಯಿಯಲ್ಲಿರುವ ಸಂವೇದನೆಯಿಂದ ಮಮತೆ ಹುಟ್ಟಿದೆ. ಸಮಾಜದಲ್ಲಿರುವ ಹಸಿದ, ಶೋಷಿತ, ಬಡ ವ್ಯಕ್ತಿಗಳ ಬಗ್ಗೆ ನಮ್ಮ ಮನಸ್ಸಿನಲ್ಲಿ ಸಂವೇದನೆ, ಮಮತೆ ಇದ್ದಾಗ ಮಾತ್ರ ನಾವು ಸೇವಾ ಕಾರ್ಯ ಮಾಡಬಹುದು. ಬಿವಿಪಿ ಸಮಾಜದಲ್ಲಿ ಸಂಸ್ಕಾರದ ಮೂಲಕ ಸೇವೆ ಮಾಡಿ, ಬದಲಾವಣೆ ತರಲು ಕೆಲಸ ಮಾಡುತ್ತಿದೆ. ಸಂಸ್ಕಾರ ಮೊದಲು ನಮ್ಮೊಳಗೆ, ಮನೆ ಮತ್ತು ಸಮಾಜದಲ್ಲಿ ತರಬೇಕು. ಇದರಿಂದ ಸಮಾಜದಲ್ಲಿ ಉತ್ತಮ ಚಿಂತನೆ ಮೂಡಿ, ಸಂಸ್ಕಾರಯುತ ಸಮಾಜ ರೂಪುಗೊಳ್ಳುತ್ತದೆ ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಮಾತನಾಡಿ, ನಮ್ಮ ದುಡಿಮೆಯ ಒಂದು ಭಾಗ ಸಮಾಜಕಾರ್ಯಕ್ಕಾಗಿ ಮೀಸಲಿಡಬೇಕು. ಇಲ್ಲದಿದ್ದರೆ ನಮ್ಮ ಬ್ಯಾಲೆನ್ಸ್ ಶೀಟ್ ಅಪೂರ್ಣವಾಗಿರುತ್ತದೆ. ನಾವು ಸಮಾಜದಿಂದ ಸೇವೆ ಪಡೆದುಕೊಂಡಿರುವಾಗ, ಅದನ್ನು ತೀರಿಸುವ ಕರ್ತವ್ಯದ ಭಾವನೆ ನಮ್ಮಲಿರಬೇಕು. ಅದಕ್ಕಾಗಿ ನಾವು ಕೂಡ ಸೇವಾ ಕೆಲಸ ಮಾಡಬೇಕು. ಸದೃಢ ಸಮಾಜ ನಿರ್ಮಾಣ ಮಾಡಲು ಅಲ್ಲಿರುವ ದುರ್ಬಲರನ್ನೂ ಸಬಲರನ್ನಾಗಿಸಬೇಕು ಎಂದರು.

ಅರುಣ್ ವಾಟ್ಗೆ, ಜಗದೀಶ್ ಬೊರಾನ ಅವರು ಕ್ರಮವಾಗಿ ಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಯಾಗಿ ದಾಯಿತ್ವ ಸ್ವೀಕಾರ ಮಾಡಿದರು.
ಬಿವಿಪಿ ಕ್ಷೇತ್ರೀಯ ಪೋಷಕ ಕೆ.ಜಿ. ಸುಬ್ಬರಾಮ ಶೆಟ್ಟಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿವಿಪಿ ದಕ್ಷಿಣ ಕ್ಷೇತ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಕೆ. ತಿಪ್ಪೇಸ್ವಾಮಿ ಸ್ವಾಗತಿಸಿದರು. ಭಾರ್ಗವ್ ಬಿವಿಪಿಯ ಪರಿಚಯ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!