ಇಸ್ಲಾಮೊಫೋಬಿಯಾ ಪದ ಬಳಸಿ ‘ಹಿಂದುಫೋಬಿಯಾ’ ಕಡೆಗಣಿಸುತ್ತಿರೋದೇಕೆ?- ವಿಶ್ವಸಂಸ್ಥೆಯನ್ನು ಪ್ರಶ್ನಿಸಲಾರಂಭಿಸಿದೆ ಭಾರತ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ವಿಶ್ವಸಂಸ್ಥೆಯ ಇತ್ತೀಚಿಗಿನ ‘ಜಾಗತಿಕ ಭ್ರಷ್ಟಾಚಾರ ನಿಗ್ರಹ ಕಾರ್ಯತಂತ್ರ’ವನ್ನು ಭಾರತ ಪ್ರಶ್ನಿಸಿದೆ. ವಿಶ್ವಸಂಸ್ಥೆಯ ಭಾರತದ ರಾಯಭಾರಿ ಟಿ ಎಸ್ ತಿರುಮೂರ್ತಿ ಈ ನಿಟ್ಟಿನಲ್ಲಿ ಭಾರತದ ಆಕ್ಷೇಪವನ್ನು ಚರ್ಚೆಯೊಂದರಲ್ಲಿ ವಿವರಿಸಿದ್ದಾರೆ.  ಭಾರತದ ದೃಷ್ಟಿಕೋನವನ್ನು ಖಚಿತವಾಗಿ ಮಂಡಿಸಿದ್ದಾರೆ. ದೆಹಲಿಯ ಗ್ಲೋಬಲ್ ಕೌಂಟರ್ ಟೆರರಿಸಮ್ ಎಂಬ ಸಂಸ್ಥೆಯ ಕಾರ್ಯಕ್ರಮದಲ್ಲಿ ವಿಡಿಯೊ ಮುಖಾಂತರ ಮುಖ್ಯಭಾಷಣ ಮಾಡುವಾಗ ಹೇಳಿದ ವಿಷಯಗಳೀಗ ಪ್ರಾಮುಖ್ಯ ಪಡೆಯುತ್ತಿವೆ. ಏಕೆಂದರೆ ಅವರು ಈ ಮಾತುಗಳನ್ನು ಹೇಳಿದ್ದು ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿ ಹುದ್ದೆಯ ಬಲದಿಂದ.

ಭಾರತದ ಆಕ್ಷೇಪ ಏನು?

ಭಯೋತ್ಪಾದನೆ ನಿಗ್ರಹದ ಕುರಿತಾದ ಹೊಸ ಕಾರ್ಯತಂತ್ರ ದಾಖಲೆಯಲ್ಲಿ ‘ಬಲಪಂಥೀಯ ತೀವ್ರವಾದ’, ‘ಹಿಂಸಾತ್ಮಕ ರಾಷ್ಟ್ರೀಯವಾದ’ ಎಂಬೆಲ್ಲ ಪದಪುಂಜಗಳನ್ನು ಬಹಳಷ್ಟು ಬಾರಿ ಬಳಸಲಾಗಿದೆ. ಉಗ್ರವಾದದ ವಿರುದ್ಧ ಹೋರಾಟದಲ್ಲಿ ಕೆಲವೊಮ್ಮೆ ‘ಇಸ್ಲಾಮಾಫೊಬಿಯೊ’ ಕೆಲಸ ಮಾಡುತ್ತದೆ, ಅಂದರೆ ಮುಸ್ಲಿಂ ಎಂಬ ಕಾರಣಕ್ಕೆ ಅನುಮಾನಿಸಲಾಗುತ್ತದೆ ಎಂಬರ್ಥದ ಅಭಿಪ್ರಾಯಗಳನ್ನು ನೀಡಲಾಗಿದೆ. ಇದು ಚರ್ಚೆಯನ್ನು ರಾಜಕೀಯಗೊಳಿಸುತ್ತದೆ ಎಂಬ ನಿಲುವು ಭಾರತದ್ದು.

ಈ ಬಗೆಯ ಚರ್ಚೆ ಮಾಡುವುದೇ ಹೌದಾದರೆ, ಇಸ್ಲಾಮೊಫೋಬಿಯಾ ಎಂಬ ಪದ ಬಳಸಿದಂತೆಯೇ ‘ಹಿಂದುಫೋಬಿಯಾ’ ಎಂಬ ಪದವನ್ನೂ ಬಳಸಿ ಎನ್ನುವುದು ಭಾರತದ ಒತ್ತಾಯ. ಏಕೆಂದರೆ ಹಿಂದು, ಸಿಖ್, ಬೌದ್ಧ ಸಮುದಾಯಗಳಿಗೆ ಅವರು ಆ ನಂಬಿಕೆಗೆ ಸೇರಿದವರು ಎಂಬ ಕಾರಣಕ್ಕೆ ಜಗತ್ತಿನ ಹಲವೆಡೆ ಜನಾಂಗೀಯ ದ್ವೇಷದ ಪ್ರತಿಕ್ರಿಯೆಗಳನ್ನು ಎದುರಿಸಬೇಕಾಗಿ ಬರುತ್ತಿರುವುದು ಇವತ್ತಿನ ವಾಸ್ತವ. ಹೀಗಾಗಿ ಈ ದೌರ್ಜನ್ಯದ ಬಗ್ಗೆಯೂ ಗಮನಹರಿಸಿ, ವಿಶ್ವಸಂಸ್ಥೆಯ ದಾಖಲೆಯು ಹಿಂದುಫೋಬಿಯಾ ಎಂಬ ಶಬ್ದವನ್ನೂ ಒಳಗೊಳ್ಳಲಿ ಎಂಬ ನಿಲುವು ಭಾರತದ ವಿಶ್ವಸಂಸ್ಥೆ ರಾಯಭಾರಿಯದ್ದು.

ತಿರುಮೂರ್ತಿ ತಮ್ಮ ಭಾಷಣದಲ್ಲಿ ಹೇಳಿದ್ದು

“ಕಳೆದೆರಡು ವರ್ಷಗಳಲ್ಲಿ ತಮ್ಮ ರಾಜಕೀಯ ಕಾರ್ಯಸೂಚಿಗಳಿಂದ ಪ್ರೇರಿತವಾಗಿರುವ ಕೆಲವು ದೇಶಗಳು ಉಗ್ರವಾದವನ್ನು ಬೇರೆ ಬೇರೆ ವಿಭಾಗಗಳಲ್ಲಿಟ್ಟು ನೋಡುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಜನಾಂಗೀಯ ತೀವ್ರವಾದ, ಹಿಂಸಾತ್ಮಕ ರಾಷ್ಟ್ರೀಯವಾದ, ಬಲಪಂಥೀಯ ತೀವ್ರವಾದ ಎಂದೆಲ್ಲ ವಿಂಗಡಣೆ ಮಾಡುತ್ತಿರುವುದು ಅಭಾಸ ಹಾಗೂ ತಮಗೆ ಬೇಕಾದ್ದನ್ನಷ್ಟೇ ಎತ್ತಿಟ್ಟು ತೋರಿಸುವ ವರ್ತನೆಯಿಂದ ಕೂಡಿದೆ. 9/11ರ ನಂತರ ಜಗತ್ತು ಏಕಕಂಠದಿಂದ ಉಗ್ರವಾದವನ್ನು ವಿರೋಧಿಸುತ್ತ ಬಂದಿರುವ ಸ್ಥಿತಿಯಲ್ಲೇ ಇದು ಒಡಕು ತಂದುಬಿಡುತ್ತದೆ.”

“ಧಾರ್ಮಕ ಫೋಬಿಯಾ (ಒಂದು ನಿರ್ದಿಷ್ಟ ಧರ್ಮದ ವಿರುದ್ಧ ಭಯ) ವನ್ನು ಕೇವಲ ಅಬ್ರಾಹಮಿಕ್ ಮತಗಳಾದ ಇಸ್ಲಾಂ, ಕ್ರೈಸ್ತ ಹಾಗೂ ಜುಡಾಯಿಸಂ ವಿಷಯದಲ್ಲಿ ಅನ್ವಯಿಸಲಾಗುತ್ತದೆ. ಹಿಂದುಗಳು, ಸಿಖ್ಖರು, ಬೌದ್ಧರ ವಿರುದ್ಧ ಅಕಾರಣವಾಗಿ ಭಯಗೊಂಡು ಈ ಜನಾಂಗಗಳ ವಿರುದ್ಧ ಹಿಂಸಾತ್ಮಕವಾಗಿ ವರ್ತಿಸುವ ಉದಾಹರಣೆಗಳೂ ಸಾಕಷ್ಟಿವೆ. ವಿಶ್ವಸಂಸ್ಥೆ ಮತ್ತದರ ಎಲ್ಲ ಸದಸ್ಯರು ಈ ಆತಂಕವನ್ನೂ ಗಂಭೀರವಾಗಿ ಪರಿಗಣಿಸಬೇಕು.”

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!