Sunday, April 11, 2021

Latest Posts

ಭಾರತವನ್ನು ಮೇಲೆತ್ತಿದ ಪಂತ್, ವಾಷಿಂಗ್ಟನ್: ದಿನದಂತ್ಯಕ್ಕೆ 294/7

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ರಿಷಬ್ ಪಂತ್ ಅವರ ಅತ್ಯಾಕರ್ಷಕ ಶತಕ ಹಾಗೂ ವಾಷಿಂಗ್ಟನ್ ಸುಂದರ್ ಅವರ ಪ್ರಸಂಗವಧಾನತೆಯ ಅರ್ಧ ಶತಕದ ನೆರವಿನಿಂದ ಭಾರತವು ಕೊನೆಯ ಟೆಸ್ಟಿನ ಎರಡನೆ ದಿನಕ್ಕಾಗುವಾಗ ಇಂಗ್ಲೆಂಡಿನ ಮೇಲೆ ತುಸು ಮೇಲುಗೈ ಸಾಧಿಸಲು ಸಫಲವಾಗಿದೆ. ಎರಡನೆ ದಿನದಂತ್ಯಕ್ಕೆ 7 ವಿಕೆಟಿಗೆ 294 ರನ್ ಗಳಿಸಿರುವ ಭಾರತವು 89 ರನ್‌ಗಳ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ.
ಭಾರತದ ಪಾಲಿಗೆ ರಿಷಬ್ ಪಂತ್ ಮತ್ತು ವಾಷಿಂಗ್ಟನ್ ಸುಂದರ್ ಅಪದ್ಬಾಂಧವರಾಗಿ ಬಂದರು. ಅವರೊಳಗೆ 7ನೇ ವಿಕೆಟಿಗೆ ನಡೆದ 113 ರನ್‌ಗಳ ಜತೆಯಾಟವು ಭಾರತಕ್ಕೆ ಅಮೂಲ್ಯ ಮುನ್ನಡೆ ಒದಗಿಸಿಕೊಟ್ಟಿತು. ಅದಕ್ಕೆ ಮುನ್ನ ಎರಡು ಅವಧಿಗಳಲ್ಲಿ ಇಂಗ್ಲೆಂಡ್ ಬೌಲರುಗಳು ಭಾರತದ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಸಫಲರಾಗಿದ್ದರು.
ಪೂಜಾರ ಅವರ ವಿಕೆಟನ್ನು ಲೀಚ್ ಪಡೆದರೆ ಸ್ಟೋಕ್ಸ್ ಅವರು ಕೊಹ್ಲಿಯನ್ನು ಶೂನ್ಯ ರನ್‌ಗೆ ಪೆವಿಲಿಯನ್‌ಗೆ ಮರಳಿಸಿದರು. ರಹಾನೆ ಮತ್ತು ರೋಹಿತ್ ಶರ್ಮಾ ನಡುವಿನ ಜತೆಯಾಟವು ತುಸು ಚೇತರಿಕೆ ನೀಡಿತಾದರೂ ಅದು ದೀರ್ಘ ಕಾಲ ಬಾಳಲಿಲ್ಲ. ರಹಾನೆ 27 ರನ್ ಗಳಿಸಿ ಆಂಡರ್ಸನ್‌ಗೆ ವಿಕೆಟ್ ಒಪ್ಪಿಸಿದರು. 49 ರನ್ ಗಳಿಸಿದ ರೋಹಿತ್ ಶರ್ಮಾ ಕೂಡ ಔಟಾದಾಗ ಭಾರತವು ಇನ್ನಿಂಗ್ಸ್ ಮುನ್ನಡೆ ಪಡೆಯುವ ಸಾಧ್ಯತೆ ಕೂಡ ಕ್ಷೀಣಿಸಿದಂತೆ ಕಂಡುಬಂದಿತ್ತು.
ಆದರೆ ಆಸ್ಟ್ರೇಲಿಯಾ ಪ್ರವಾಸದಿಂದ ಆರಂಭಿಸಿ ಭಾರತದ ಮಧ್ಯಮ ಸರದಿಯ ಬೆನ್ನೆಲುಬಾಗಿ ಬೆಳೆಯುತ್ತಿರುವ ರಿಷಬ್ ಪಂತ್ ಇಲ್ಲಿಯೂ ಉತ್ಕೃಷ್ಟ ಆಟವನ್ನು ಪ್ರದರ್ಶಿಸಿದರು.
ಪಂತ್‌ರ ಹೊಡೆತಗಳಿಂದ ಇಂಗ್ಲೆಂಡ್‌ನ ವೇಗಿಗಳು ಜರ್ಜರಿತರಾದರು. ಪಂತ್ ಅವರ 101೧ ರನ್‌ಗಳಿಗೆ ಬಳಸಿದ್ದು ಕೇವಲ 118 ಎಸೆತಗಳನ್ನು. ಅದರಲ್ಲಿ 13 ಬೌಂಡರಿ ಹಾಗೂ 2 ಸಿಕ್ಸರ್‌ಗಳಿದ್ದವು.
ಪಂತ್‌ರ ಬ್ಯಾಟಿಂಗ್‌ನ ಜತೆಗೇ ವಾಷಿಂಗ್ಟನ್ ಸುಂದರ್ ಅವರ ಆಟವನ್ನೂ ಮರೆಯುವಂತಿಲ್ಲ. ಪಂತ್‌ಗೆ ಉತ್ತಮ ಸಾಥ್ ನೀಡಿದ ಸುಂದರ್ ತಾನು ಕೂಡ ಅರ್ಧ ಶತಕ ಬಾರಿಸಿದರಲ್ಲದೆ, 60 ರನ್‌ಗಳೊಂದಿಗೆ ಅಜೇಯರಾಗಿ ಉಳಿದು ಮರುದಿನಕ್ಕೆ ಆಟ ಕಾಯ್ದಿರಿಸಿಕೊಂಡರು.

ಭಾರತ ಪ್ರಥಮ ಇನ್ನಿಂಗ್ಸ್: 7 ವಿಕೆಟಿಗೆ 294  (ರೋಹಿತ್ ಶರ್ಮಾ 49, ಗಿಲ್ 0, ಪೂಜಾರ 17, ಕೊಹ್ಲಿ 0, ಅಜಿಂಕ್ಯ ರಹಾನೆ 27, ರಿಷಬ್ ಪಂತ್ 101, ಅಶ್ವಿನ್ 13, ವಾಷಿಂಗ್ಟನ್ ಸುಂದರ್ ಔಟಾಗದೆ 60, ಅಕ್ಸರ್ ಪಟೇಲ್ ಔಟಾಗದೆ 11. ಆಂಡರ್ಸನ್ 40ಕ್ಕೆ 3 ವಿಕೆಟ್, ಸ್ಟೋಕ್ಸ್ 73ಕ್ಕೆ 2, ಲೀಚ್ 66ಕ್ಕೆ 2).

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss