ಹೊಸದಿಗಂತ ಡಿಜಿಟಲ್ ಡೆಸ್ಕ್:
ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ ಕೈವಾಡವಿದೆ ಎಂಬ ಕೆನಡಾ ಆರೋಪದ ಬೆನ್ನಲ್ಲೇ ಪಾಕ್ ಕೂಡ ನರಿ ಬುದ್ದಿ ತೋರಿದ್ದು, ತಮ್ಮ ದೇಶದಲ್ಲಿ ನಡೆದ ಬಾಂಬ್ ದಾಳಿಗೂ ಕೂಡ ಭಾರತವನ್ನೇ ಹೊಣೆ ಮಾಡಿದೆ. ಎರಡು ದಿನಗಳ ಹಿಂದೆ ತಮ್ಮ ದೇಶದಲ್ಲಿ ನಡೆದ ಆತ್ಮಾಹುತಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನದ ಸಚಿವ ಸರ್ಫರಾಜ್ ಬುಗ್ತಿ ಗಂಭೀರ ಆರೋಪ ಮಾಡಿದ್ದಾರೆ.
ಶುಕ್ರವಾರ ಬಲೂಚಿಸ್ತಾನದಲ್ಲಿ ನಡೆದ ಆತ್ಮಹತ್ಯಾ ದಾಳಿಯ ಹಿಂದೆ ಭಾರತದ ಗುಪ್ತಚರ ಸಂಸ್ಥೆಯ ಪಾತ್ರವಿದೆ ಎಂದು ಪಾಕಿಸ್ತಾನ ಸಚಿವ ಸರ್ಫರಾಜ್ ಬುಗ್ತಿ ಹೇಳಿದ್ದಾರೆ. ಆರೋಪಿಯ ಬಗ್ಗೆ ತಿಳಿದುಕೊಳ್ಳಲು ಡಿಎನ್‌ಎ ಪರೀಕ್ಷೆ ನಡೆಸಲಾಗುತ್ತಿದೆ ಎಂದ ಸಚಿವ, ಡಿಎನ್‌ಎ ಮಾದರಿಗಳನ್ನು ಪರೀಕ್ಷೆಗೆ ಲ್ಯಾಬ್‌ಗೆ ಕಳಿಸಿಕೊಟ್ಟಿರುವುದಾಗಿ ತಿಳಿಸಿದರು. ಇದುವರೆಗೂ ಯಾವುದೇ ಭಯೋತ್ಪಾದನೆ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
ಈ ಆರೋಪಗಳ ಹಿನ್ನೆಲೆಯಲ್ಲಿ ವಾಸ್ತವವಾಗಿ ತೀರಾ ಕಳಪೆಯಾಗಿರುವ ಪಾಕಿಸ್ತಾನ-ಭಾರತ ಸಂಬಂಧಗಳು ಮತ್ತಷ್ಟು ಹಾಳಾಗುವ ಸಾಧ್ಯತೆಗಳಿವೆ. ಈ ಆರೋಪಗಳಿಗೆ ಭಾರತ ಹೇಗೆ ಉತ್ತರಿಸುತ್ತದೆ ಎಂಬುದನ್ನು ಕಾದು ನೋಡಬೇಕು.
ಶುಕ್ರವಾರ ಬಲೂಚಿಸ್ತಾನ ಪ್ರಾಂತ್ಯದ ಮಸ್ತುಂಗ್ ಜಿಲ್ಲೆಯಲ್ಲಿ ಪ್ರವಾದಿ ಮೊಹಮ್ಮದ್ ಅವರ ಜನ್ಮದಿನವನ್ನು ಆಚರಿಸಲು ಭಕ್ತರು ಸಂತೋಷದಿಂದ ರ್ಯಾಲಿಗೆ ತಯಾರಿ ನಡೆಸುತ್ತಿದ್ದ ಸಮಯದಲ್ಲಿ, ವ್ಯಕ್ತಿಯೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡು ದಾಳಿ ಮಾಡಿದನು. ಈ ಘಟನೆಯಲ್ಲಿ 60ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.