ಹೊಸದಿಗಂತ ಆನ್ಲೈನ್ ಡೆಸ್ಕ್:
ಕೋವಿಡ್ ಲಸಿಕೆ ಅಭಿಯಾನದಲ್ಲಿ ಇಂದು ಭಾರತ ಮಹತ್ತರ ದಾಖಲೆ ನಿರ್ಮಿಸಲಿದೆ. ದೇಶದಲ್ಲಿ 100 ಕೋಟಿ ಡೋಸ್ ಲಸಿಕೆ ನೀಡಿಕೆ ಪೂರ್ಣಗೊಳ್ಳಲಿದ್ದು, ಸರ್ಕಾರ ಬೃಹತ್ ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದೆ.
ದೇಶದಲ್ಲಿ ಇಂದು 100 ಕೋಟಿ ಡೋಸ್ ಲಸಿಕೆ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ಪ್ರಧಾನಿ ಮೋದಿ ಅವರು ಇಂದು ದೆಹಲಿಯ ಆರ್.ಎಂ.ಎಲ್ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ.
ಆರೋಗ್ಯ ಕಾರ್ಯಕರ್ತರ ಜೊತೆಗೆ ಮಾತನಾಡಲಿದ್ದಾರೆ. 100 ಕೋಟಿ ಡೋಸ್ ಪೂರ್ಣಗೊಳ್ಳುವ ಹಿನ್ನೆಲೆ ಕೆಂಪು ಕೋಟೆಯ ಮೇಲೆ ಅತಿ ದೊಡ್ಡ ತ್ರಿವರ್ಣ ಧ್ವಜ ಪ್ರದರ್ಶನವಾಗಲಿದೆ ಜೊತೆಗೆ ಸಚಿವ ಮನ್ಸುಖ್ ಮಾಂಡವೀಯ ಅವರು ಗಾಯಕ ಕೈಲಾಶ್ ಖೇರ್ ಅವರ ಹಾಡು ಮತ್ತು ದೃಶ್ಯ-ಶ್ರವಣ ಫಿಲಂನ್ನು ಬಿಡುಗಡೆ ಮಾಡಲಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಅನ್ವಯ ನಿನ್ನೆ ತಡರಾತ್ರಿವರೆಗೆ ದೇಶದಲ್ಲಿ ಒಟ್ಟಾರೆ 99.85 ಕೋಟಿ ಜನರು ಲಸಿಕೆ ಪಡೆದಿದ್ದಾರೆ. ಕೋವಿಡ್ ಲಸಿಕೆ ಅಭಿಯಾನ ಆರಂಭವಾದ 9 ತಿಂಗಳ ನಂತರ ಇದೀಗ 100 ಕೋಟಿ ಡೋಸ್ಗಳನ್ನು ಪೂರ್ಣಗೊಳಿಸಲು ಸಜ್ಜಾಗಿದೆ. ವಿಶ್ವದಲ್ಲಿ ಚೀನಾ ಈಗಾಗಲೇ 100 ಕೋಟಿ ಮೈಲಿಗಲ್ಲು ಮುಟ್ಟಿದೆ. ಅದರ ನಂತರ ಈ ಮೈಲಿಗಲ್ಲು ದಾಟುತ್ತಿರುವ ದೇಶ ಭಾರತವಾಗಿದೆ.