ಈ ಹಣಕಾಸು ವರ್ಷದಲ್ಲಿ ಭಾರತ ಎರಡಂಕಿ ಜಿಡಿಪಿ ಬೆಳವಣಿಗೆ ದಾಖಲಿಸಲಿದೆ: ವಿಶ್ವಾಸ ವ್ಯಕ್ತಪಡಿಸಿದ ವಿತ್ತ ಸಚಿವರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಈ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು ಎರಡಂಕಿಯನ್ನು ದಾಖಲಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶನಿವಾರ ವ್ಯಕ್ತಪಡಿಸಿದ್ದಾರೆ. ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತವು ಬಲಿಷ್ಠವಾಗಿದೆ. ಕುಂಠಿತ ವಿಭಾಗಗಳು ಧನಾತ್ಮಕವಾಗಿ ಬೆಳವಣಿಗೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.

“ನಾವು (ಭಾರತ) ಆರ್ಥಿಕ ಹಿಂಜರಿತಕ್ಕೆ ಜಾರುವ ಸಂಭವ ತೀರಾ ಕಡಿಮೆ. ನಾವು ಎರಡಂಕಿಯ ಬೆಳವಣಿಗೆಯನ್ನು ಆಶಿಸುತ್ತೇನೆ ಮತ್ತು ಅದಕ್ಕಾಗಿ ಅಗತ್ಯ ಕೆಲಸ ಮಾಡುತ್ತೇನೆ” ಎಂದು ವಿತ್ತ ಸಚಿವರು ಉಲ್ಲೇಖಿಸಿದ್ದಾರೆ.

ವರದಿಗಳ ಪ್ರಕಾರ ಒಂದು ವರ್ಷದ ಅವಧಿಯಲ್ಲಿ ಭಾರತದ ಆರ್ಥಿಕತೆಯು ಅತ್ಯಂತ ವೇಗವಾಗಿ ವಿಸ್ತರಿಸಿದೆ. ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್‌-ಜೂನ್)‌ ಒಟ್ಟೂ ದೇಶೀಯ ಉತ್ಪನ್ನ (ಜಿಡಿಪಿ) 13.5ರಷ್ಟು ಏರಿಕೆಯಾಗಿದೆ.

“ಕಡಿಮೆ ಬೇಸ್‌ನಿಂದಾಗಿ ದೇಶವು ಹೆಚ್ಚಿನ ಬೆಳವಣಿಗೆ ದರವನ್ನು ವರದಿ ಮಾಡಿದೆ ಎಂದು ಕೆಲವರು ವಾದಿಸಬಹುದು, ಆದರೆ ಭಾರತವು ಅಕ್ಷರಶಃ ವೇಗವಾಗಿ ಬೆಳಯುತ್ತಿರುವ ಆರ್ಥಿಕತೆಯಾಗಿದೆ ಎಂದು ಸೀತಾರಾಮನ್ ಹೇಳಿದ್ದಾರೆ. ಈ ವೇಳೆ ವಿಶ್ವ ಬ್ಯಾಂಕ್ ಮತ್ತು IMF ವರದಿಗಳನ್ನು ಅವರು ಉಲ್ಲೇಖಿಸಿದ್ದು ಆ ವರದಿಗಳ ಪ್ರಕಾರ ಭಾರತಕ್ಕಿಂತ ಹೆಚ್ಚು ಅಭಿವೃದ್ಧಿ ಹೊಂದಿದ ಮತ್ತು ದೇಶದೊಂದಿಗೆ ಹೋಲಿಸಬಹುದಾದ ಆರ್ಥಿಕತೆಗಳು ಆರ್ಥಿಕ ಹಿಂಜರಿತದ ಅಂಚಿನಲ್ಲಿದೆ.

ಇನ್ನು ಉಚಿತ ಕೊಡುಗೆಗಳ ಬಗ್ಗೆ ನಿರ್ಮಲಾ ಸೀತಾರಾಮನ್‌ ಅವರ ಪ್ರತಿಕ್ರಿಯೆ ಹೀಗಿದೆ. “ನೀವು ಏನನ್ನಾದರೂ ಉಚಿತವಾಗಿ ನೀಡುತ್ತಿದ್ದರೆ, ಯಾರೋ ಒಬ್ಬರು ಅದಕ್ಕೆ ಪಾವತಿ ಮಾಡುತ್ತಿದ್ದಾರೆ ಎಂದರ್ಥ. ಉಚಿತ ವಿತರಣೆಯ ನಂತರ ಯಾವುದೇ ಸಮಸ್ಯೆ ಬಂದರೆ ಅದರ ಆರ್ಥಿಕ ಪರಿಸ್ಥಿತಿಯನ್ನು ನಿರ್ಣಯಿಸಬೇಕು ಮತ್ತು ಉಚಿತಗಳನ್ನು ನೀಡುವ ಮೊದಲು ನಿಬಂಧನೆಗಳನ್ನು ಮಾಡಬೇಕು.” ಎಂದು ಅವರು ಹೇಳಿದ್ದಾರೆ.

ಇವುಗಳ ನಡುವೆ, ಭಾರತವು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ವಾಣಿಜ್ಯ ಕಾರ್ಯದರ್ಶಿ ಬಿವಿಆರ್ ಸುಬ್ರಹ್ಮಣ್ಯಂ ಶನಿವಾರ ಹೇಳಿದ್ದಾರೆ. ಇನ್ನು ಕೆಲವೇ ವರ್ಷಗಳಲ್ಲಿ ಭಾರತವು ಜಾಗತಿಕವಾಗಿ ಅಗ್ರ ನಾಲ್ಕು ಆರ್ಥಿಕತೆಗಳಲ್ಲಿ ಒಂದಾಗಲಿದೆ ಮತ್ತು 2047 ರ ವೇಳೆಗೆ ಇದು ಪ್ರಧಾನಿ ನರೇಂದ್ರ ಮೋದಿ ಅವರು ರೂಪಿಸಿದ ದೂರದೃಷ್ಟಿಯ ಅಡಿಯಲ್ಲಿ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿಯ (IMF) ಅಂಕಿಅಂಶಗಳ ಪ್ರಕಾರ, ಈ ವರ್ಷ ಭಾರತವು ಯುಕೆಯನ್ನು ಹಿಂದಿಕ್ಕಿ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಯುನೈಟೆಡ್ ಸ್ಟೇಟ್ಸ್, ಚೀನಾ, ಜಪಾನ್ ಮತ್ತು ಜರ್ಮನಿ ಮಾತ್ರ ಭಾರತಕ್ಕಿಂತ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ರಾಷ್ಟ್ರಗಳಾಗಿವೆ. ಯುಕೆ ಪ್ರಸ್ತುತ ಆರನೇ ಸ್ಥಾನದಲ್ಲಿದೆ ಎಂದು ಉಲ್ಲೇಖಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!