ಕಟಕ್‌ ನಲ್ಲಿ ಇಂದು ಭಾರತ- ಸೌತ್‌ ಆಫ್ರಿಕಾ ದ್ವಿತೀಯ ಟಿ20: ಗೆಲುವಿನ ಹಾದಿಗೆ ಮರಳುವತ್ತ ಟೀಂ ಇಂಡಿಯಾ ಚಿತ್ತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಖಾಯಂ ನಾಯಕ ರೋಹಿತ್‌ ಶರ್ಮ ವಿಶ್ರಾಂತಿ, ಹಂಗಾಮಿ ನಾಯಕ ಕೆಎಲ್‌ ರಾಹುಲ್‌ ಗಾಯದ ಕಾರಣದಿಂದ ಹೊರಗುಳಿದಿದ್ದರಿಂದ ಆಕಸ್ಮಿಕ ನಾಯಕನಾದ ರಿಷಭ್‌ ಪಂತ್‌ ಗೆ ಇಂದು ಒಡಿಸ್ಸಾದ ಕಟಕ್‌ ನಲ್ಲಿ ಪ್ರವಾಸಿ ಆಫ್ರಿಕಾ ವಿರುದ್ಧ ನಡೆಯುವ ಎರಡನೇ ಟಿ20 ಪಂದ್ಯ ಅಗ್ನಿಪರೀಕ್ಷೆ ಒಡ್ಡಲಿದೆ.
ಮೂರು ದಿನಗಳ ಹಿಂದೆ ದೆಹಲಿಯ ಅರುನ್‌ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ಹೀನಾಯ ಸೋಲನ್ನನುಭವಿಸಿ 5 ಪಂದ್ಯದ ಸರಣಿಯಲ್ಲಿ 1.0 ಹಿನ್ನಡೆ ಅನುಭವಿಸಿತ್ತು. 210 ರನ್‌ ಗಳ ಬೃಹತ್ ಕಲೆಹಾಕಿಯೂ ಬೌಲರ್‌ ಗಳ ನೀರಸ ಪ್ರದರ್ಶನದಿಂದ  ತವರಿನಲ್ಲೇ ಪಂದ್ಯವನ್ನು ಕೈಚೆಲ್ಲುವಂತಾಗಿತ್ತು. ಭಾರತದ ಮೊನಚಿಲ್ಲದ ಬೌಲಿಂಗ್‌ ದಾಳಿಯನ್ನು ಸುಲಭವಾಗಿ ಚೆಂಡಾಡಿದ್ದ ಡೇವಿಡ್ ಮಿಲ್ಲರ್ ಮತ್ತು ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಅವರು 212 ರನ್‌ಗಳನ್ನು ಅತ್ಯಂತ ನಿರಾಯಾಸವಾಗಿ ಚೇಸ್‌ ಮಾಡಿದ್ದರು. ಈ ಪಂದ್ಯದಲ್ಲಿ ಭಾರತವು ಗೆಲುವಿನ ಹಾದಿಗೆ ಮರಳುವ ಗುರಿಯನ್ನು ಹೊಂದಿದೆ. ಕೋಚ್ ರಾಹುಲ್ ದ್ರಾವಿಡ್ ಬೌಲಿಂಗ್ ಲೈನ್-ಅಪ್‌ನಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡುವ ಸುಳಿವನ್ನು ನೀಡಿದ್ದಾರೆ.
ನಾಯಕ ರಿಷಬ್ ಪಂತ್‌ಗೆ ಉಳಿದ ನಾಲ್ಕು ಪಂದ್ಯಗಳು ದೊಡ್ಡ ಪರೀಕ್ಷೆಯಾಗಲಿವೆ. ಏಕೆಂದರೆ ಭಾರತದ ಭವಿಷ್ಯದ ನಾಯಕರ ರೇಸ್‌ ನಲ್ಲಿ ಪಂತ್‌ ಜೊತೆಗೆ ಸ್ಪರ್ಧಿಸುತ್ತಿರುವ ಹಾರ್ದಿಕ್‌ ಪಾಂಡ್ಯ ತಂಡದಲ್ಲಿದ್ದಾರೆ. ಪ್ರತಿಷ್ಠಿತ ಐಪಿಎಲ್‌ ಟ್ರೋಫಿ ಗೆದ್ದು ʼಸಾಮರ್ಥ್ಯʼ ಸಾಬೀತು ಪಡಿಸಿರುವ ಹಾರ್ದಿಕ್‌ ಪರ ಸಕಾರಾತ್ಮಕ ಮಾತುಗಳು ಕೇಳಿಬರುತ್ತಿರುವುದು ಪಂತ್‌ ಕ್ಯಾಪ್ಟನ್ಸಿಗೆ ಮುಳುವಾಗುವ ಸಾಧ್ಯತೆಗಳಿವೆ. ಎರಡೂ ತಂಡಗಳು ಗೆಲುವಿಗೆ ಎದುರು ನೋಡುತ್ತಿದ್ದು ಕಟಕ್‌ ನ ಬಾರಾಬತಿ ಕ್ರೀಡಾಂಗಣವು ಹೈವೋಲ್ಟೇಜ್‌ ಪಂದ್ಯಕ್ಕೆ ಸಾಕ್ಷಿಯಾಗಲಿದೆ.

ಸೌತ್‌ ಆಪ್ರಿಕಾ ಸಂಭಾವ್ಯ XI:
ಕ್ವಿಂಟನ್ ಡಿ ಕಾಕ್, ಟೆಂಬಾ ಬವುಮಾ (ಸಿ), ಡ್ವೈನ್ ಪ್ರಿಟೋರಿಯಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ, ಲುಂಗಿ ಎನ್‌ಗಿಡಿ, ತಬ್ರೈಜ್ ಶಮ್ಸಿ

ಭಾರತ ಸಂಭಾವ್ಯ XI:
ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಸಿ), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!