ʼಮಂಕಡ್‌ ರನ್‌ ಔಟ್‌ʼ ಅವಕಾಶವಿದ್ದರೂ ಮಾಡದ ದೀಪಕ್‌ ಚಾಹರ್:‌ ಕೆಲವರ ಟೀಕೆ- ಕೆಲವರ ಬಹುಪರಾಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇತ್ತೀಚೆಗೆ ಇಂಗ್ಲೆಂಡ್‌ ನ ಲಾರ್ಡ್ಸ್‌ ನಲ್ಲಿ ನಡೆದ ಮಹಿಳಾ ಏಕದಿನ ಪಂದ್ಯದಲ್ಲಿ ಭಾರತದ ಬೌಲರ್ ದೀಪ್ತಿ ಶರ್ಮಾ ಇಂಗ್ಲೆಂಡ್‌ನ ಚಾರ್ಲಿ ಡೀನ್ ಅವರನ್ನು ನಾನ್ ಸ್ಟ್ರೈಕರ್ ಎಂಡ್‌ನಲ್ಲಿ ಔಟ್ (‌ಮೊದಲು ಮಂಕಡಿಂಗ್‌, ಈಗ ರನ್‌ ಔಟ್) ಮಾಡಿದ ಬಳಿಕ ಕ್ರಿಕೆಟ್ ವಲಯದಲ್ಲಿ ಬಿಸಿ ಬಿಸಿ ಚರ್ಚೆ ಏರ್ಪಟ್ಟಿತ್ತು.
ಹಲವರು ಈ ಔಟ್‌ ಅನ್ನು ಬೆಂಬಲಿಸಿದ್ದರೆ, ಇಂಗ್ಲಿಷ್‌ ಕ್ರಿಕೆಟಿಗರ ಮಾತ್ರ ಇದು ಕ್ರೀಡಾ ಸ್ಫೂರ್ತಿಗೆ ವಿರುದ್ಧವಾದದ್ದು, ಮೋಸ ಎಂದು ಹುಯಿಲೆಬ್ಬಿಸಿದ್ದರು.
ಆದರೆ, ಕೆಲ ದಿನಗಳ ಹಿಂದೆ ಘೋಷಿಸಲಾಗಿರುವ ಐಸಿಸಿಯ ಹೊಸ ನಿಯಮಾವಳಿಗಳಲ್ಲಿ ನಾನ್ ಸ್ಟ್ರೈಕರ್ ಬ್ಯಾಟರ್ ಕ್ರೀಸ್‌ನಿಂದ ಹೊರಗಿದ್ದರೆ ಬೌಲರ್ ಔಟ್‌ ಮಾಡಬಹುದು ಎಂದು ಸ್ಪಷ್ಟವಾಗಿ ನಿರ್ದೇಶನ ನೀಡಲಾಗಿದೆ. ನಿನ್ನೆ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟಿ 20 ಪಂದ್ಯದಲ್ಲಿ ಮಂಕಡಿಂಗ್‌ ರನ್‌ ಔಟ್‌ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ವೇಗಿ ದೀಪಕ್ ಚಹಾರ್ ದಕ್ಷಿಣ ಆಫ್ರಿಕಾದ ಟ್ರಿಸ್ಟಾನ್ ಸ್ಟಬ್ಸ್ ಅವರನ್ನು ನಾನ್ ಸ್ಟ್ರೈಕರ್ ಕೊನೆಯಲ್ಲಿ ರನ್ ಔಟ್ ಮಾಡುವ ಉತ್ತಮ ಅವಕಾಶವನ್ನು ಹೊಂದಿದ್ದರು. ಆದರೆ ಅವರು ಅದನ್ನು ಮಾಡದಿರಲು ನಿರ್ಧರಿಸಿದರು. 16 ನೇ ಓವರ್‌ನಲ್ಲಿ ಚಹರ್ ಮೊದಲ ಎಸೆತವನ್ನು ಬೌಲ್ ಮಾಡಲು ಮುಂದಾದಾಗ ಈ ಘಟನೆ ಸಂಭವಿಸಿತು. ಬಾಲ್‌ ಎಸೆಯಲು ಬಂದ ಚಾಹರ್‌ ಒಮ್ಮೆಲೆ ಆಕ್ಷನ್‌ ನಿಲ್ಲಿಸಿ ನಿಂತರು. ಅಷ್ಟರಲ್ಲಿ ಸ್ಟಬ್ಸ್‌ಗೆ ಕ್ರಿಸ್‌ ಬಿಟ್ಟು ಸಾಕಷ್ಟು ಮುಂದೆ ಸಾಗಿದ್ದರು. ದೀಪ್‌ ಚಾಹರ್‌ ನಗುತ್ತಲೇ ವಾರ್ನಿಂಗ್‌ ಕೊಟ್ಟು ಇನ್ನು ಮುಂದೆ ಇಂತಹ ತಪ್ಪು ಮಾಡಬೇಡ ಎಂದು ಸ್ಟಬ್ಸ್‌ ಗೆ ಎಚ್ಚರಿಕೆ ನೀಡಿದರು. ಪಂದ್ಯದ ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದೆ.

ಜೀವದಾನದ ಬಳಿಕ ಟ್ರಿಸ್ಟಾನ್ ಸ್ಟಬ್ಸ್ ಪಂದ್ಯದಲ್ಲಿ ಶತಕ ಸಿಡಿಸಿದ ರೊಸೊಗೆ ಉತ್ತಮ ಸಾಥ್ ನೀಡಿ 18 ಎಸೆತಗಳಲ್ಲಿ 23 ರನ್​ಗಳಿಸಿದರು. ನಿಯಮದ ಪ್ರಕಾರ ಔಟ್ ಗೆ ಅವಕಾಶವಿದ್ದರೂ ದೀಪಕ್ ಚಹರ್ ರನೌಟ್ ಮಾಡದೆ ಯಾರನ್ನು ಮೆಚ್ಚಿಸಲು ಹೊರಟಿದ್ದಾರೆ ಎಂದು ಕೆಲವರು ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಬ್ಯಾಟ್ಸ್‌ ಮನ್‌ ಮತ್ತೊಮ್ಮೆ ತಪ್ಪು ಮಾಡದಂತೆ ಎಚ್ಚರಿಸುವ ಮೂಲಕ ಚಾಹರ್‌ ಕ್ರೀಡಾಸ್ಪೂರ್ತಿ ಮೆರೆದಿದ್ದಾರೆ ಎಂದು ಮೆಚ್ಚಿಕೊಂಡಿದ್ದಾರೆ.

ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆದ ಮೂರನೇ ಟಿ20ಐ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿಗೆ ಶರಣಾಯಿತು. ದಕ್ಷಿಣ ಆಫ್ರಿಕಾ ನೀಡಿದ 227 ರನ್ ಬೆನ್ನತ್ತಿದ್ದ ಭಾರತ 178 ರನ್‌ಗಳಿಗೆ ಆಲೌಟ್ ಆಗಿ 49 ರನ್‌ಗಳಿಂದ ಸೋಲನುಭವಿಸಿತು. ಅಕ್ಟೋಬರ್ 6 ರಿಂದ ಪ್ರಾರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡು ತಂಡಗಳು ಭಾಗಿಯಾಗಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!