ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ 400 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿರುವ ಭಾರತ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದ್ದು, ಲಂಕನ್ನರಿಗೆ ಫಾಲೋ ಆನ್ ಹೇರಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ಕಲೆಹಾಕಿದ 574 ರನ್ ಗಳಿಗೆ ಪ್ರತ್ಯುತ್ತರವಾಗಿ ಪಂದ್ಯದ ಮೂರನೇದಿನ ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ಮೊದಲ ಇನಿಂಗ್ಸ್‌ನಲ್ಲಿ ಕೇವಲ 174 ರನ್ ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ ಭಾರತ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ. ಬ್ಯಾಟಿಂಗ್ ನಲ್ಲಿ ಭರ್ಜರಿ ಶತಕಸಿಡಿಸಿದ್ದ ಆಲ್‌ರೌಂಡರ್ ಜಡೇಜ ಬೌಲಿಂಗ್‌ನಲ್ಲೂ ಲಂಕನ್ನರನ್ನು ಕಾಡಿದರು. 13 ಓವರ್ ಎಸೆದು ಪ್ರಮುಖ 5 ವಿಕೆಟ್‌ಗಳನ್ನು ಉರುಳಿಸಿ, ಭಾರತ ಬೃಹತ್ ಮುನ್ನಡೆ ಸಾಧಿಸುವಂತೆ ಮಾಡಿದರು. ವೇಗಿ ಬೂಮ್ರಾ, ಸ್ಪಿನ್ನರ್ ಆರ್.ಅಶ್ವಿನ್ ತಲಾ ಎರಡು ವಿಕೆಟ್ ಪಡೆದರು. ಮತ್ತೊಂದು ವಿಕೆಟ್ ಮೊಹಮ್ಮದ್ ಶಮಿ ಪಾಲಾಯಿತು.
ಭಾರಿ ಮುನ್ನಡೆ ಸಾಧಿಸಿರುವ ಭಾರತ ಪ್ರವಾಸಿ ತಂಡಕ್ಕೆ ಫಾಲೋಆನ್ ಹೇರಿದೆ. ಎರಡನೇ ಇನಿಂಗ್ಸ್‌ನಲ್ಲೂ ಸಹ ಶ್ರೀಲಂಕನ್ನರು ಆರಂಭಿಕ ಆಘಾತ ಅನುಭವಿಸಿದ್ದಾರೆ. ಆರಂಭಿಕ ಲಹಿರು ತಿರುಮನ್ನೆ ಖಾತೆ ತೆರೆಯುವ ಮುನ್ನವೇ ವಿಕೆಟ್ ಕೈ ಚೆಲ್ಲಿದ್ದು, ಫಾತುಮ್ ನಿಶಾಂಕ 19 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಎರಡೂ ವಿಕೆಟ್ಗಳು ಅಶ್ವಿನ್ ಪಾಲಾಗಿವೆ. ಸದ್ಯ ಲಂಕನ್ನರು 2 ವಿಕೆಟ್ ನಷ್ಟಕ್ಕೆ 34 ರನ್ ಗಳಿಸಿದ್ದು, ಭಾರತದ ಮೊದಲ ಇನಿಂಗ್ಸ್ ಲೆಕ್ಕ ಚುಕ್ತಾ ಮಾಡಲು ಇನ್ನೂ 366 ರನ್ ಗಳಿಸಬೇಕಿದೆ.