ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಅಗ್ ನೆಕ್ಸ್ಟ್ ಎಂಬುದು 2016ರಲ್ಲಿ ಪ್ರಾರಂಭಗೊಂಡ ನವೋದ್ದಿಮೆ. ದೊಡ್ಡ ಕಂಪನಿಗಳು ಕೃಷಿ ಉತ್ಪನ್ನಗಳನ್ನು ಖರೀದಿಸುವಾಗ ಅಲ್ಲಿ ಗುಣಮಟ್ಟ ನಿರ್ಧಾರ ಎಂಬುದು ಬಹಳ ದೊಡ್ಡ ಸಂಗತಿ. ಆದರೆ ಬಹಳ ದೊಡ್ಡ ಪ್ರಮಾಣದಲ್ಲಿ ಖರೀದಿಗಿಳಿಯುವಾಗ ಕೆಲವು ಸ್ಯಾಂಪಲ್ ಗಳ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಇವೆಲ್ಲ ಮಾನವಶ್ರಮದ ಕೆಲಸವಾದ್ದರಿಂದ ಸಮಯವೂ ಹಿಡಿಯುತ್ತದೆ. ಇಂಥ ಸಂದರ್ಭದಲ್ಲಿ ಇದಕ್ಕೆ ತಂತ್ರಜ್ಞಾನ ಬಳಸಿಕೊಂಡು ಪರಿಹಾರ ಸೂಚಿಸಿ, ಕೃಷಿ ವ್ಯವಹಾರದಲ್ಲಿ ಗುಣಮಟ್ಟ ನಿರ್ಧಾರ ಮಾಡುವ ಕೆಲಸವನ್ನು ಅಗ್ ನೆಕ್ಸ್ಟ್ ಎಂಬ ಉದ್ದಿಮೆ ಮಾಡಿಕೊಂಡು ಬರುತ್ತಿತ್ತು.
ಈಗ ಕೆಲವು ದಿನಗಳ ಹಿಂದೆ ಈ ಅಗ್ ನೆಕ್ಸ್ಟ್ ನವೋದ್ದಿಮೆ 21 ಮಿಲಿಯನ್ ಡಾಲರುಗಳ ಫಂಡಿಂಗ್ ಪಡೆಯುವಲ್ಲಿ ಸಫಲವಾಗಿದೆ. ಭಾರತದ ಕೃಷಿ ತಂತ್ರಜ್ಞಾನ ನವೋದ್ದಿಮೆಯೊಂದು ಪಡೆಯುತ್ತಿರುವ ಅತಿದೊಡ್ಡಮಟ್ಟದ ಫಂಡಿಂಗ್ ಇದಾಗಿದೆ. ಈಗ ಹರಿದುಬಂದಿರುವ ಬಂಡವಾಳವನ್ನು ಉಪಯೋಗಿಸಿಕೊಂಡು ಮಧ್ಯಪ್ರಾಚ್ಯ, ದಕ್ಷಿಣ ಏಷ್ಯ ಮತ್ತು ಯುರೋಪುಗಳಲ್ಲಿ ತನ್ನ ವ್ಯವಹಾರವನ್ನು ವಿಸ್ತರಿಸುವ ಗುರಿಯನ್ನು ಅಗ್ ನೆಕ್ಸ್ಟ್ ಹೊಂದಿದೆ.
ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ಡೇಟಾ ವಿಶ್ಲೇಷಣೆಗಳ ಸಂಕೀರ್ಣ ಮಿಶ್ರಣವನ್ನು ಉಪಯೋಗಿಸಿಕೊಂಡು ಈ ನವೋದ್ದಿಮೆ ಕೃಷಿ ಉತ್ಪನ್ನದ ಗುಣಮಟ್ಟ ಮೌಲ್ಯಮಾಪನ ಮಾಡುತ್ತದೆ. ನಾಲ್ಕು ವರ್ಷಗಳಲ್ಲಿ 20 ಲಕ್ಷ ಆಹಾರ ಮಾದರಿಗಳ ಡೇಟಾಬೇಸ್ ಹೊಂದಿರುವ ಇದು ಐಟಿಸಿ, ಗೋದ್ರೆಜ್, ನಫೇಡ್ ಇಂಥವರನ್ನೆಲ್ಲ ಗ್ರಾಹಕರನ್ನಾಗಿ ಹೊಂದಿದೆ.
ಹೊಸ ಫಂಡಿಂಗ್ ಹರಿದುಬಂದ ಸಂದರ್ಭದಲ್ಲಿ ಅಗ್ ನೆಕ್ಸ್ಟ್ ಗೆ ಪ್ರಾರಂಭಿಕವಾಗಿ ಬಂಡವಾಳ ಹಾಕಿದ್ದ ಸಂಸ್ಥೆ ಐದುಪಟ್ಟು ಮರುಗಳಿಕೆಯೊಂದಿಗೆ ಹೊರಬಿದ್ದಿದೆ ಎಂಬ ಅಂಶ ಗಮನಿಸಿದಾಗ, ಕೃಷಿ ವ್ಯವಹಾರಗಳ ತಂತ್ರಜ್ಞಾನ ಮಗ್ಗುಲು ಹೇಗೆಲ್ಲ ಬೆಳೆಯುತ್ತದೆ ಎಂಬುದರ ಅಂದಾಜಾದೀತು.