ಸೇನಾ ಬತ್ತಳಿಕೆಗೆ ಸೇರಲಿದೆ ಬರೋಬ್ಬರಿ 84 ಸಾವಿರ ಕೋಟಿ ರೂ. ಮೌಲ್ಯದ ಹೊಸ ಶಸ್ತ್ರಾಸ್ತ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ತನ್ನ ಸಶಸ್ತ್ರ ಪಡೆಗಳಿಗೆ ಶಕ್ತಿ ತುಂಬುವ ಮೂಲಕ ಅವುಗಳನ್ನು ಸಜ್ಜುಗೊಳಿಸುವತ್ತ ಭಾರತವು ಪ್ರಾಮುಖ್ಯತೆ ನೀಡಿದ್ದು ಇದರ ಭಾಗವಾಗಿ 84 ಸಾವಿರ ಕೋಟಿ ರುಪಾಯಿ ಮೌಲ್ಯದ ಹೊಸ ಶಸ್ತ್ರಾಸ್ತ್ರಗಳ ಖರೀದಿಯ 24 ಪ್ರಸ್ತಾವನೆಗಳಿಗೆ ಒಪ್ಪಿಗೆ ಸೂಚಿಸಿದೆ. ಈ ಪ್ರಸ್ತಾವನೆಗಳ ಅಡಿಯಲ್ಲಿ ಲೈಟ್ ಟ್ಯಾಂಕ್‌ಗಳು, ಫ್ಯೂಚರಿಸ್ಟಿಕ್ ಪದಾತಿದಳದ ಯುದ್ಧ ವಾಹನಗಳು (ಎಫ್‌ಐಸಿವಿಗಳು), ಮೌಂಟೆಡ್ ಗನ್ ಸಿಸ್ಟಮ್‌ಗಳು, ಕ್ಷಿಪಣಿಗಳು ಮತ್ತು ಬಾಂಬ್‌ಗಳು ಸೇರಿದಂತೆ ಹೊಸ ಮಿಲಿಟರಿ ಯುದ್ಧೋಪಕರಣಗಳು ಸೇನಾ ಬತ್ತಳಿಕೆ ಸೇರಲಿವೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಡಿಫೆನ್ಸ್ ಅಕ್ವಿಸಿಷನ್ ಕೌನ್ಸಿಲ್ (ಡಿಎಸಿ) 22 ಡಿಸೆಂಬರ್ 2022 ರಂದು ನಡೆದ ಸಭೆಯಲ್ಲಿ 24 ಬಂಡವಾಳ ಸ್ವಾಧೀನ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ ಎಂದು ರಕ್ಷಣಾ ಸಚಿವಾಲಯ ಗುರುವಾರ ತಿಳಿಸಿದೆ. ಡಿಫೆನ್ಸ್ ಅಕ್ವಿಸಿಷನ್ ಕೌನ್ಸಿಲ್ (ಡಿಎಸಿ) ಎಂಬುದು ರಕ್ಷಣಾ ಸಚಿವಾಲಯದ ಉನ್ನತ ಖರೀದಿ ಸಂಸ್ಥೆಯಾಗಿದೆ. ಈ ಪ್ರಸ್ತಾವನೆಗಳಲ್ಲಿ ಭಾರತೀಯ ಸೇನೆಗೆ ಆರು, ಭಾರತೀಯ ವಾಯುಪಡೆಗೆ ಆರು, ಭಾರತೀಯ ನೌಕಾಪಡೆಗೆ 10 ಮತ್ತು ಭಾರತೀಯ ಕೋಸ್ಟ್ ಗಾರ್ಡ್‌ಗೆ ಎರಡು ಹೀಗೆ ಒಟ್ಟೂ 84,328 ಕೋಟಿ ರೂಪಾಯಿ ಮೌಲ್ಯದ ಪ್ರಸ್ತಾವನೆಗಳು ಸೇರಿವೆ. “ಆತ್ಮನಿರ್ಭರ್ ಭಾರತ್” ಉಪಕ್ರಮದ ಭಾಗವಾಗಿ ದೇಶೀಯ ರಕ್ಷಣಾ ಉದ್ಯಮಕ್ಕೆ ಉತ್ತೇಜನವನ್ನು ಒದಗಿಸುವ ನಿಟ್ಟಿನಲ್ಲಿ 24 ಪ್ರಸ್ತಾವನೆಗಳಲ್ಲಿ 82,127 ಕೋಟಿ ಮೌಲ್ಯದ 21 ಪ್ರಸ್ತಾವನೆಗಳನ್ನು ಸ್ಥಳೀಯ ಮೂಲಗಳಿಂದ ಸಂಗ್ರಹಿಸಲು ಅನುಮೋದಿಸಲಾಗಿದೆ.

ಭಾರತೀಯ ಸೇನೆಯ ಪ್ರಸ್ತಾವನೆಗಳು ಲೈಟ್ ಟ್ಯಾಂಕ್‌ಗಳು, ಫ್ಯೂಚರಿಸ್ಟಿಕ್ ಪದಾತಿದಳದ ಯುದ್ಧ ವಾಹನಗಳು (ಎಫ್‌ಐಸಿವಿಗಳು), ಮೌಂಟೆಡ್ ಗನ್ ಸಿಸ್ಟಮ್‌ಗಳು, ಕ್ಷಿಪಣಿಗಳು ಮತ್ತು ಬಾಂಬ್‌ಗಳು ಸೇರಿದಂತೆ ಸೈನಿಕರಿಗೆ ವರ್ಧಿತ ರಕ್ಷಣೆಯೊಂದಿಗೆ ಬ್ಯಾಲಿಸ್ಟಿಕ್ ಹೆಲ್ಮೆಟ್‌ಗಳ ಖರೀದಿಯನ್ನು ಒಳಗೊಂಡಿದೆ. ನೌಕಾ ಪಡೆಯ ಪ್ರಸ್ತಾವನೆಯು ಹಡಗುನಿರೋಧಕ ಕ್ಷಿಪಣಿಗಳು, ಬಹುಪಯೋಗಿ ಹಡಗುಗಳು, ಹೆಚ್ಚಿನ ಸಾಮರ್ಥ್ಯದ ಆಟೋನೋಮಸ್‌ ವಾಹನಗಳು ಇತ್ಯಾದಿಗಳನ್ನು ಒಳಗೊಂಡಿದ್ದು ಕಡಲ ರಕ್ಷಣೆಯಲ್ಲಿ ನೌಕಾಸೇನೆಗೆ ಇನ್ನಷ್ಟು ಬಲ ತುಂಬಲಿವೆ. ವಾಯುಪಡೆಯ ಪ್ರಸ್ತಾವನೆಗಳು ಹೊಸ ಶ್ರೇಣಿಯ ಕ್ಷಿಪಣಿ ವ್ಯವಸ್ಥೆಗಳು, ಲಾಂಗ್ ರೇಂಜ್ ಗೈಡೆಡ್ ಬಾಂಬ್‌ಗಳು, ರೇಂಜ್ ಆಗ್ಮೆಂಟೇಶನ್ ಕಿಟ್ ಮತ್ತು ಸುಧಾರಿತ ಕಣ್ಗಾವಲು ವ್ಯವಸ್ಥೆ ಇತ್ಯಾದಿಗಳನ್ನು ಒಳಗೊಂಡಿದೆ. ಇದಲ್ಲದೇ ಭಾರತೀಯ ಕೋಸ್ಟ್ ಗಾರ್ಡ್‌ಗಾಗಿ ಮುಂದಿನ ಪೀಳಿಗೆಯ ಕಡಲ ಗಸ್ತು ವಾಹನಗಳ ಖರೀದಿಗೆ ಅನುಮೋದನೆ ದೊರಕಿದ್ದು ಕರಾವಳಿ ಪ್ರದೇಶಗಳಲ್ಲಿ ಹೆಚ್ಚಿನ ಕಣ್ಗಾವಲಿಗೆ ಸಹಾಯಕವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!