ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಮಂಗಳವಾರ ಓರ್ವ ಉಗ್ರ, ಆತನ ಸಹಾಯಕರು ಸೇರಿದಂತೆ 6 ಮಂದಿಯನ್ನು ಬಂಧಿಸಿದ್ದಾರೆ.
ಇದರಲ್ಲಿ ಇಬ್ಬರು ಮಹಿಳೆಯರು ಮತ್ತು ಓರ್ವ ಯುವಕ ಕೂಡ ಇದ್ದಾನೆ. ಬಂಧಿತರಿಂದ ಹ್ಯಾಂಡ್ ಗ್ರೆನೇಡ್, ಪಿಸ್ತೂಲ್, ಮದ್ದುಗುಂಡುಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ಬಾರಾಮುಲ್ಲಾದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಪೊಲೀಸರು, ಬಾರಾಮುಲ್ಲಾ, ನಾಗ್ಪುರಿ, ಥಾಪರ್ಪಟ್ಟನ್ ಪ್ರದೇಶಗಳಲ್ಲಿ ಉಗ್ರ ಚಟುವಟಿಕೆ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಐವರನ್ನು ಬಂಧಿಸಲಾಗಿದೆ. ಇವರು ನಿಷೇಧಿತ ಉಗ್ರ ಸಂಘಟನೆಯಾದ ಲಷ್ಕರ್ ಎ ತೊಯ್ಬಾದ ಉಗ್ರರಿಗೆ ನೆರವು ನೀಡುತ್ತಿದ್ದರು. ಇವರಿಂದ ಶಸ್ತ್ರಾಸ್ತ್ರಗಳನ್ನೂ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಒರವಿಯಲ್ಲಿ ಇಬ್ಬರು ಶಂಕಿತ ಉಗ್ರರನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಐವರನ್ನು ಬಂಧಿಸಲಾಗಿದೆ. ಬಂಧಿತ ಭಯೋತ್ಪಾದಕ ಸಹಚರರಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಅಪ್ರಾಪ್ತನೂ ಇದ್ದಾನೆ. ಮನೆಗಳಿಂದ ಕಾಣೆಯಾಗಿದ್ದ ಇವರು, ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಎಲ್‌ಇಟಿ, ಟಿಆರ್ಎಫ್ಗೆ ಸೇರಿ ಉಗ್ರ ಚಟುವಟಿಕೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಬಂದಿತ್ತು.
ಬಂಧಿತರಿಂದ 2 ಪಿಸ್ತೂಲ್, 4 ಪಿಸ್ತೂಲ್ ಮ್ಯಾಗಜೀನ್, 2 ಪಿಸ್ತೂಲ್ ಸೈಲೆನ್ಸರ್, 5 ಚೈನೀಸ್ ಗ್ರೆನೇಡ್ ಹಾಗೂ 29 ಜೀವಂತ ಗುಂಡು, 4 ಹ್ಯಾಂಡ್ ಗ್ರೆನೇಡ್‌ಗಳು ಸೇರಿದಂತೆ ಹಲವಾರು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಉಗ್ರ ಮತ್ತು ಆತನ ಐವರು ಸಹಚರರೊಂದಿಗೆ ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳ ನೇತೃತ್ವದಲ್ಲಿ ಕೆಲಸ ಮಾಡುತ್ತಿದ್ದರು. ಮತ್ತಷ್ಟು ಭಯೋತ್ಪಾದಕರನ್ನು ನೇಮಿಸಿ ಬಾರಾಮುಲ್ಲಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸಲು ಯೋಜಿಸುತ್ತಿದ್ದ ಬಗ್ಗೆ ತನಿಖೆಯಿಂದ ತಿಳಿದುಬಂದಿತ್ತು.