ಪೂರ್ವಗಡಿಯಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಸಜ್ಜಾಗುತ್ತಿದೆ ಭಾರತ ಸೇನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪೂರ್ವದ ಅರುಣಾಚಲ ಪ್ರದೇಶದ ಚೀನಾ ಗಡಿಯಲ್ಲಿ ಕಾವಲು ಕಾಯುತ್ತಿರುವ ಭಾರತೀಯ ಸೇನೆಯನ್ನು ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಸಜ್ಜುಗೊಳಿಸಲಾಗುತ್ತಿದೆ. ಲಘು ಮೆಷಿನ್ ಗನ್‌ಗಳು, ಅಸಾಲ್ಟ್ ರೈಫಲ್‌ಗಳು, ರಾಕೆಟ್ ಲಾಂಚರ್‌ಗಳು, ಮಾನವರಹಿತ ವೈಮಾನಿಕ ವಾಹನಗಳು, ಎಲ್ಲಾ ಹವಾಮಾನಕ್ಕೆ ಹೊಂದಿಕೊಳ್ಳುವ ವಾಹನಗಳು, ಹೈಟೆಕ್‌ ಕಣ್ಗಾವಲು ಸಾಧನಗಳು ಹೀಗೆ ಸೇನೆಯ ಸಾಮರ್ಥ್ಯವನ್ನು ಆಧುನಿಕ ಶಸ್ತ್ರಸ್ತ್ರಗಳೊಂದಿಗೆ ಹೆಚ್ಚಿಸಲಾಗುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.

ಬಹು ಕಾರ್ಯಾಚರಣೆ ಸಾಮರ್ಥ್ಯವುಳ್ಳ ಚೀನೂಕ್‌ ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ಹೆಲಿಪ್ಯಾಡ್‌ಗಳು ಹಾಗೂ ಗಡಿಯುದ್ದಕ್ಕೂ ಹೊಸ ಉಪಗ್ರಹ ಟರ್ಮಿನಲ್‌ಗಳನ್ನು ನಿರ್ಮಿಸಲಾಗುತ್ತಿದ್ದು ಇವು ಸಂವಹನ ಸಾಮರ್ಥ್ಯವನ್ನು ಹೆಚ್ಚಿಸುವುದರೊಂದಿಗೆ ಸೂಕ್ಷ್ಮ ಪ್ರದೇಶಗಳಲ್ಲಿ ಸೈನಿಕರು ಮತ್ತು ಶಸ್ತ್ರಾಸ್ತ್ರಗಳ ವೇಗದ ನಿಯೋಜನೆಗೆ ಹಾಗೂ ಕಾರ್ಯಾಚರಣೆಗೆ ಸಹಾಯಕವಾಗಲಿವೆ.

ಇದಲ್ಲದೇ ಇಸ್ರೇಲಿ ಮೂಲದ ನೆಗೆವ್ ಲೈಟ್ ಮೆಷಿನ್ ಗನ್‌ಗಳು, ಯುಎಸ್‌ನಿಂದ ಸಿಗ್ ಸೌರ್ ಅಸಾಲ್ಟ್ ರೈಫಲ್‌ಗಳು, ಸ್ವೀಡಿಷ್ ಕಾರ್ಲ್ ಗುಸ್ಟಾವ್ ಎಂಕೆ-III ರಾಕೆಟ್ ಲಾಂಚರ್‌ಗಳು, ಸ್ಥಳೀಯ ಸ್ವಿಫ್ಟ್ ಮಾನವರಹಿತ ವೈಮಾನಿಕ ವಾಹನಗಳು, ಗುರಿಗಳನ್ನು ನಿಖರವಾಗಿ ಪತ್ತೆ ಹಚ್ಚಲು ಡಿಜಿಟಲ್ ಸ್ಪಾಟಿಂಗ್ ಸ್ಕೋಪ್‌ಗಳು ಮುಂತಾದ ಅತ್ಯಾಧುನಿಕ ಉಪಕರಣಗಳನ್ನೂ ಸೇರ್ಪಡೆ ಮಾಡಲಾಗುತ್ತಿದೆ.

ಈ ಕುರಿತು ಸೇನೆಯ ಮುಖ್ಯಸ್ಥರೊಬ್ಬರು ಮಾತನಾಡಿದ್ದು “ಸೇನಾ ಸಾಮರ್ಥ್ಯ ಅಭಿವೃದ್ಧಿ, ಮೂಲಸೌಕರ್ಯಗಳನ್ನು ನಿರ್ಮಿಸುವುದು ಮತ್ತು ನಿಯೋಜಿಸಲಾದ ಕಾರ್ಯಾಚರಣೆಯ ಪಾತ್ರವನ್ನು ನಿರ್ವಹಿಸಲು ಅಗತ್ಯವಿರುವ ತರಬೇತಿಗಳನ್ನು ನೀಡಲಾಗುತ್ತಿದೆ ಆ ಮೂಲಕ ಗಡಿಯಲ್ಲಿ ಸೇನೆಯ ದಕ್ಷತೆ ಹೆಚ್ಚಿಸುವತ್ತ ಗಮನ ಕೊಡಲಾಗುತ್ತಿದೆ” ಎಂದು ಸೇನಾ ಮುಖ್ಯಸ್ಥರೊಬ್ಬರು ಹೇಳಿದ್ದಾರೆ ಎಂದು ಮೂಲಗಳ ವರದಿ ತಿಳಿಸಿದೆ.

ಲಡಾಖ್‌ ಭಾಗದಲ್ಲಿ ಚೀನಾವು ಆಗಾಗ ಕ್ಯಾತೆ ತೆಗೆಯುತ್ತಿರುವುದರ ನಡುವೆಯೇ ಪೂರ್ವ ಭಾಗದಲ್ಲಿ ಸೇನೆಯ ಈ ಬೆಳವಣಿಗೆ ನಡೆದಿದ್ದು ದಶಕಗಳಿಂದ ಈಶಾನ್ಯದಲ್ಲಿ ಬಂಡಾಯ ನಿಗ್ರಹ ಕಾರ್ಯಾಚರಣೆಗಳ ಮೇಲೆ ಗಮನ ಕೇಂದ್ರೀಕರಿಸಿರುವ ಭಾರತೀಯ ಸೇನೆಯು ಚೀನಾದ ಗಡಿಯಲ್ಲಿನ ಸವಾಲುಗಳನ್ನು ಎದುರಿಸಲು ಪೂರ್ವ ವಲಯದಲ್ಲಿ ತನ್ನ ಪಡೆಗಳ ಪುನಶ್ಚೇತನವನ್ನು ನಡೆಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!