ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಆಗಸ್ಟ್ ಅಂತ್ಯದಲ್ಲಿ ಪ್ರಕಟವಾದ ಈ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ದರ ಎರಡು ಬಗೆಯ ಚರ್ಚೆಗಳನ್ನು ಎಬ್ಬಿಸಿದೆ.
ಅರ್ಥವ್ಯವಸ್ಥೆ ಸುಧಾರಿಸಿಯೇಬಿಟ್ಟಿತು ಎಂಬಂತೆ ಸಂಭ್ರಮಿಸುವವರದ್ದು ಒಂದು ಪಡೆ. ಇನ್ನೊಂದು ಬಿಂದುವಿನಲ್ಲಿರುವವರು ಎದುರು ಇಡುತ್ತಿರುವ ವಾದವೆಂದರೆ- ಶೇ. 20ರ ಬೆಳವಣಿಗೆ ದರ ಓದುವುದಕ್ಕೆ ತುಂಬ ದೊಡ್ಡ ಸಂಖ್ಯೆಯಾಗಿ ಕಾಣಬಹುದು. ಆದರೆ ಹಿಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ದರ ಪಾತಾಳಕ್ಕೆ ಕುಸಿದಿದ್ದರಿಂದ ಅದಕ್ಕೆ ಹೋಲಿಸಿಕೊಂಡು ಹುಟ್ಟಿರುವ ಸಂಖ್ಯೆ ಇದಾಗಿರುವುದರಿಂದ ಸಹಜವಾಗಿಯೇ ದೊಡ್ಡದಾಗಿ ಕಾಣುತ್ತೆ. ಇನ್ನು ಭಾರತದಲ್ಲಿ ಶೇರು ಮಾರುಕಟ್ಟೆಯನ್ನು ಆರ್ಥಿಕ ಪ್ರಗತಿಗೆ ಸೂಚಕವಾಗಿ ನೋಡಲಾಗದು, ಏಕೆಂದರೆ ಅದರಲ್ಲಿ ಭಾಗವಹಿಸುವವರು ದೇಶದ ಜನಸಂಖ್ಯೆಗೆ ಹೋಲಿಸಿದರೆ ತುಂಬ ಕಡಿಮೆ.
ಹಾಗಾದರೆ ತ್ರೈಮಾಸಿಕ ಜಿಡಿಪಿ ದರ ಏನೂ ಅಲ್ಲವಾ?
ನಿಜ. ಶೇ. 20ರ ದರದಲ್ಲಿ ತ್ರೈಮಾಸಿಕ ಜಿಡಿಪಿ ಅಭಿವೃದ್ಧಿ ಅನ್ನೋದನ್ನು ಔನ್ನತ್ಯದ ಕ್ಷಣ ಎಂಬಂತೆ ನೋಡೋದಕ್ಕಾಗಲ್ಲ. ಏಕೆಂದರೆ ಕುಸಿದಿದ್ದ ವೇಗವೂ ಅಷ್ಟೇ ತೀವ್ರವಾಗಿದ್ದರಿಂದ ಅಲ್ಲೊಂದು ಬೇಸ್ ಎಫೆಕ್ಟ್ ಸೃಷ್ಟಿಯಾಗಿದೆ. ಹಾಗಂತ, ಕೊರೋನಾ ಎಂಬ ಸನ್ನಿವೇಶ ಜಾಗತಿಕವಾಗಿ ತಂದ ಸ್ಥಿತಿ ಎಂಥಾದ್ದು ಅಂದರೆ ಸರಾಗವಾಗಿ ಸಾಗಿಕೊಂಡಿದ್ದ ವ್ಯಕ್ತಿಗೆ ನಾಲ್ಕಾರು ಕಡೆಗಳಿಂದ ಹೊಡೆತಗಳು ಬಿದ್ದು ಹತ್ತೆಂಟು ಗಾಯಗಳನ್ನು ಮಾಡಿರುವಂಥ ಸ್ಥಿತಿ. ಹೀಗಾಗಿ ಪ್ರತಿ ಗಾಯ ಮಾಗುವುದೂ ಒಂದು ಪ್ರಗತಿಯ ಚಿಹ್ನೆಯೇ. ಹೀಗಾಗಿ ಈ ತ್ರೈಮಾಸಿಕದ ಜಿಡಿಪಿ ದರ ನಾವು ಏಣಿ ಹತ್ತುತ್ತಿದ್ದೇವೆ ಎಂಬ ಸೂಚನೆ ಖಂಡಿತ ಅಲ್ಲವಾದರೂ, ಪಾತಾಳದಿಂದ ನೆಲಕ್ಕೆ ಬಂದು ಸಾವರಿಸಿಕೊಳ್ಳುತ್ತಿದ್ದೇವೆ ಎಂಬ ಸಂಕೇತವಂತೂ ಹೌದು. ಹೀಗಾಗಿ ಸಂಭ್ರಮ ಅಲ್ಲದಿದ್ದರೂ ಅಷ್ಟರಮಟ್ಟಿಗೆ ನಿರಾಳರಾಗಬಹುದು, ಭರವಸೆ ಇಟ್ಟುಕೊಳ್ಳಬಹುದು.
ಜಿಡಿಪಿ ಸಂಖ್ಯೆಗಳೇ ಆರ್ಥಿಕ ಪ್ರಗತಿಗೆ ಸಂಕೇತವಾ ಎಂಬುದು ಪ್ರತ್ಯೇಕ ಚರ್ಚೆ. ಆದರೆ ಈ ಸಂಖ್ಯೆಯ ಅಂತರಾಳದಲ್ಲಿ ನಮ್ಮ ದೈನಂದಿನ ಬದುಕಿನಲ್ಲಿ ಗಮನಿಸಬಹುದಾದ ಕೆಲವು ವಿಶ್ವಾಸ ಹುಟ್ಟಿಸುವ ಸೂಚ್ಯಂಕಗಳಿವೆ.
ಆರ್ಥಿಕತೆಗೆ ವಿಶ್ವಾಸ ತುಂಬುತ್ತಿರುವ ಸೂಚ್ಯಂಕಗಳು
ಉದಾಹರಣೆಗೆ, ವಿದ್ಯುತ್ ಉಪಭೋಗದ ಪ್ರಮಾಣ. ವಿದ್ಯುತ್ ಕುರಿತ ಬೇಡಿಕೆ ಹೆಚ್ಚಿದ್ದರೆ ಅದರರ್ಥ ಹಲವು ವಹಿವಾಟುಗಳು ಕಾರ್ಯನಿರ್ವಹಿಸುತ್ತಿವೆ, ಅರ್ಥವ್ಯವಸ್ಥೆ ಚಟುವಟಿಕೆಯಿಂದಿದೆ ಅಂತ. ಆಗಸ್ಟ್ ಮೊದಲ ವಾರದಲ್ಲಿ ಆ ಹಿಂದಿನ ವರ್ಷದ ಅದೇ ಸಮಯಕ್ಕೆ ಹೋಲಿಸಿದರೆ ವಿದ್ಯುತ್ ಬೇಡಿಕೆ ಶೇ. 9.3ರ ಬೆಳವಣಿಗೆ ಕಂಡಿದೆ. 2020ರ ಆಗಸ್ಟ್ 1-7ರ ನಡುವೆ 26.59 ಬಿಲಿಯನ್ ಯುನಿಟ್ ಗಳ ಬಳಕೆ ಆಗಿದ್ದರೆ, ಇದೇ ಅವಧಿಯ ಈ ವರ್ಷದ ಆಗಸ್ಟಿನಲ್ಲಿ 28.08 ಬಿಲಿಯನ್ ಯುನಿಟ್ ಬಳಕೆ ಆಗಿದೆ.
ಜುಲೈನಲ್ಲಿ ಫಾಸ್ಟ್ ಟ್ಯಾಗ್ ಮೂಲಕ ಆದ ಶುಲ್ಕ ಸಂಗ್ರಹ ರು 2,976 ಕೋಟಿ. ಸರಿಸುಮಾರು ಕೋವಿಡ್ ಮೊದಲಿನಷ್ಟೇ ಸಂಗ್ರಹ. ಇದು ಏನನ್ನು ಸೂಚಿಸುತ್ತದೆ? ಟ್ರಕ್ಕು ಮತ್ತಿತರ ವಾಹನಗಳು ಸುಗಮ ಸಂಚಾರವನ್ನು ಪ್ರಾರಂಭಿಸಿವೆ. ಅರ್ಥಾತ್ ಆರ್ಥಿಕ ಚಟುವಟಿಕೆ ಮತ್ತೆ ಗರಿಗೆದರಿದೆ.
ಈ ವರ್ಷದ ಜುಲೈನಲ್ಲಿ ಟ್ರ್ಯಾಕ್ಟರ್ ಮಾರಾಟ ಶೇ 3.3ರ ಬೆಳವಣಿಗೆ ಕಂಡಿದೆ. ಜುಲೈ 2020ರಲ್ಲಿ 63,137 ಟ್ರ್ಯಾಕ್ಟರುಗಳು ಮಾರಾಟವಾಗಿದ್ದರೆ, ಜುಲೈ 2021ರಲ್ಲಿ 66, 217 ಟ್ರ್ಯಾಕ್ಟರುಗಳು ಮಾರಾಟವಾಗಿವೆ. ಭಾರತದ ಕೃಷಿವಲಯ ಮತ್ತಷ್ಟು ವಿಶ್ವಾಸದಿಂದ ಮುಂದೆ ಹೋಗ್ತಿದೆ ಅಲ್ಲಿನ ಆರ್ಥಿಕ ಚಟುವಟಿಕೆಗಳಿಗೆ ಕಸುವು ಬಂದಿದೆ ಎಂಬುದನ್ನು ಇದು ಸಾರುತ್ತಿದೆ.
ಇನ್ನು, ಉತ್ಪಾದನೆ ಮತ್ತು ಸೇವಾಕ್ಷೇತ್ರಗಳಲ್ಲಿ ಖರೀದಿ ಸಾಮರ್ಥ್ಯ ಬಿಂಬಿಸುವ ಸೂಚ್ಯಂಕವೊಂದಿದೆ. ಉತ್ಪಾದನಾ ಕ್ಷೇತ್ರದ ಆಗಸ್ಟ್ ತಿಂಗಳ ಪರ್ಚೆಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ 55.3. ಇದು ಈ ಹಿಂದಿನ ಮೂರು ತಿಂಗಳಲ್ಲಿ ಅಧಿಕ. ಸೇವಾಕ್ಷೇತ್ರದಲ್ಲಿ ಜುಲೈ 2021ಕ್ಕೆ ಇದು 45.4. ವರ್ಷದ ಹಿಂದೆ ಇದೇ ಸಮಯಕ್ಕೆ ಅದು 41.2 ಆಗಿತ್ತು.
ಈ ಎಲ್ಲ ಕಾರಣಗಳಿಂದ, ಈ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ದರವನ್ನು ನಾವು ನಮ್ಮ ಎದೆಯಲ್ಲಿ ವಿಶ್ವಾಸ ತುಂಬಿಕೊಳ್ಳಬಹುದಾದ ಒಂದು ಹಂತ ಅಂತ ನೋಡುವುದಕ್ಕೆ ಅವಕಾಶವಿದೆ. ಆದರೆ ಇದನ್ನು ಒಂದುಬಗೆಯ ವಿಜಯ ಅಂತ ಬೀಗುವುದು ಮೂರ್ಖತನವಾದೀತು.