spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಭಾರತದ ಹಾಕಿ ವಿಕ್ರಮ: ನಾಲ್ಕು ದಶಕಗಳ ನಂತರ ಪದಕ ಸಂಭ್ರಮ

- Advertisement -Nitte

 

ಹೊಸದಿಗಂತ ಆನ್ ಲೈನ್ ಡೆಸ್ಕ್:

ಉಸಿರು ಬಿಗಿಹಿಡಿಯುವಂಥ ಪಂದ್ಯವೊಂದರಲ್ಲಿ ಜರ್ಮನಿ ವಿರುದ್ಧ 5-4ರ ಜಯ ಸಾಧಿಸಿದ ಭಾರತ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ತಂದಿದೆ. ಕಂಬ್ಯಾಕ್/ಮರುಆಘಾತ ಎಂದರೆ ಏನು ಹೇಗೆ ಕುಸ್ತಿಯಲ್ಲಿ ರವಿ ದಹಿಯಾ ತೋರಿಸಿದ್ದರು. ಅದನ್ನು ಹಾಕಿಯಲ್ಲಿ ಭಾರತದ ಪುರುಷರು ತೋರಿಸಿದರು. 

ಕೊನೆಯ ಆರು ಸೆಕೆಂಡಿನಲ್ಲಿ ಸಹ ಭಾರತದ ವಿರುದ್ಧ ಪೆನಾಲ್ಟಿ ಅವಕಾಶದ ಮೂಲಕ ಗೋಲಾಗುವ ಸಂಭವವಿದ್ದದ್ದನ್ನು ಶ್ರೀಜೇಶ್ ತಡೆದರು. ಅಷ್ಟರಮಟ್ಟಿಗೆ ಸೀಟಿನ ತುದಿಯಲ್ಲಿ ಕೂರಿಸಿತ್ತು ಈ ಪಂದ್ಯ.

ಒಲಿಂಪಿಕ್ಸ್ ಪುರುಷರ ಹಾಕಿಯಲ್ಲಿ ಕಂಚಿನ ಪದಕ್ಕಾಗಿ ನಡೆದ ಜಿದ್ದಾಜಿದ್ದಿ ಕದನದಲ್ಲಿ ಭಾರತದ ವಿರುದ್ಧ ಜರ್ಮನಿ ಆಟದ ಆರಂಭದಲ್ಲೇ ಒಂದು ಗೋಲ್ ಗಳಿಸಿತು. ಅತ್ಯಂತ ಆಕ್ರಮಣಕಾರಿ ನಡೆ ತೋರಿದ ಜರ್ಮನಿ ಮೊದಲ ಕ್ವಾರ್ಟರ್ ನಲ್ಲೇ ಹಲವು ಪೆನಾಲ್ಟಿ ಅವಕಾಶಗಳನ್ನು ಪಡೆಯಿತಾದಾರೂ ಅವೆಲ್ಲ ಗೋಲಾಗಿ ಪರಿವರ್ತನೆಯಾಗುವುದನ್ನು ಭಾರತದ ಗೋಲ್ಕೀಪರ್ ಶ್ರೀಜೇಶ್ ತಡೆದರು.

ಭಾರತಕ್ಕೆ ಸಮಬಲವನ್ನು ದೊರಕಿಸಿಕೊಟ್ಟಿದ್ದು ಸಮರಜೀತ್ ಸಿಂಗ್ ದಾಖಲಿಸಿದ ಗೋಲು. ಆದರೆ ಈ ನಿರಾಳತೆ ಹೆಚ್ಚು ಸಮಯ ಉಳಿಯಲಿಲ್ಲ. ಎರಡನೇ ಕ್ವಾರ್ಟರ್ ನಲ್ಲಿ ಮತ್ತೊಂದು ಗೋಲು ದಾಖಲಿಸಿದ ಜರ್ಮನಿ ಭಾರತದ ವಿರುದ್ಧ 2-1ರ ಮುನ್ನಡೆ ಕಾಯ್ದುಕೊಂಡಿತು. ಕೆಲಸಮಯದಲ್ಲೇ 3-1ರ ಹಿನ್ನಡೆ ಭಾರತಕ್ಕೆ ಎದುರಾಯಿತು. 

ಆದರೆ ಇದಕ್ಕೆ ಪ್ರತಿ ಆಘಾತ ನೀಡಿದ ಭಾರತ ಮತ್ತೆರಡು ಕ್ವಾರ್ಟರ್ಸ್ ಬಾಕಿ ಇರುವಾಗ 2-3ಕ್ಕೆ ಅಂಕವನ್ನು ತಂದು ನಿಲ್ಲಿಸಿತು. ನೋಡನೋಡುತ್ತಲೇ ಕೈಜಾರುತ್ತಿದ್ದ ಪಂದ್ಯವನ್ನು ಸಮಸ್ಥಿತಿಗೆ ತರುವಲ್ಲಿ ಮತ್ತೊಂದು ಗೋಲು ದಾಖಲಿಸುವುದರಲ್ಲಿ ಭಾರತ ಯಶಸ್ವಿಯಾಗುವುದರೊಂದಿಗೆ ಸ್ಕೋರ್ 3-3 ಸಮಬಲವಾಯಿತು. 

ನಂತರ ಸಿಕ್ಕ ಪೆನಾಲ್ಟಿ ಅವಕಾಶವನ್ನು ಭಾರತದ ರುಪಿಂದರ್ ಪಾಲ್ ಸಿಂಗ್ ಗೋಲಾಗಿ ಪರಿವರ್ತಿಸಿದಾಗ ಮತ್ತೆ ಪಂದ್ಯವು ನಮ್ಮ ಕಡೆ ಹೊರಳಿಕೊಂಡಿತು, 4-3ರ ಸ್ಕೋರ್’ನೊಂದಿಗೆ. ಅದಾಗಿ ಕೆಲ ನಿಮಿಷಗಳಲ್ಲೇ ಭಾರತದಿಂದ ಮತ್ತೊಂದು ಗೋಲ್. ಈ ಪಂದ್ಯದಲ್ಲಿ ಸಮರಜೀತ್ ಸಿಂಗ್ ದಾಖಲಿಸಿದ ಎರಡನೇ ಗೋಲ್ ಆಗಿತ್ತದು. ಸ್ಕೋರ್ 5-3.

ಪ್ರಾರಂಭಿಕ ಹಂತದಲ್ಲಿ ಭಾರತವನ್ನು ಕಟ್ಟಿ ಹಾಕಿಯೇ ಬಿಟ್ಟೆವು ಅಂದುಕೊಂಡಿದ್ದ ಜರ್ಮನಿ ಭಾರತ ತಂಡದ ಮರುದಾಳಿಗೆ ಬೆಚ್ಚಿಬಿದ್ದಿದ್ದು ಸ್ಪಷ್ಟವಾಗಿತ್ತು ಎಂದೇ ಒಲಿಂಪಿಕ್ಸ್ ವೀಕ್ಷಕ ವಿವರಣೆಕಾರರೆಲ್ಲ ಕೊಂಡಾಡಿದರು. 

ನಾಲ್ಕನೇ ಕ್ವಾರ್ಟರ್ಸ್ ನಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಬಳಸಿಕೊಂಡ ಜರ್ಮನಿ ಭಾರತದ ವಿರುದ್ಧ ಗೋಲು ದಾಖಲಿಸಿತು. ಸ್ಕೋರ್ 5-4 ಆಯಿತು.

 ಇದರ ಬೆನ್ನಲ್ಲೇ ಅಸಮರ್ಪಕ ಆಕ್ರಮಣಶೀಲತೆ ತೋರಿದ ಜರ್ಮನಿ ನಾಯಕನಿಗೆ ತೀರ್ಪುಗಾರರು ಯೆಲ್ಲೊ ಕಾರ್ಡ್ ತೋರಿಸಿ ಐದು ನಿಮಿಷದ ಅವಧಿಗೆ ಹೊರಗೆ ಕಳುಹಿಸಿದರು. 

ನಂತರ ಜರ್ಮನಿಗೆ ಸಿಕ್ಕ ಪೆನಾಲ್ಟಿ ಅವಕಾಶವೊಂದನ್ನು ತಡೆಯುವಲ್ಲಿ ಭಾರತದ ಗೋಡೆ ಎಂದೇ ಖ್ಯಾತರಾದ ಶ್ರೀಜೇಶ್ ಸಫಲರಾದರು. 

ಭಾರತ 41 ವರ್ಷಗಳ ನಂತರ ಪದಕ ಗೆದ್ದು ಹೊಸ ಭರವಸೆಗಳ ಮುನ್ನುಡಿಯೊಂದನ್ನು ಬರೆದಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss