Friday, March 1, 2024

ಕೊನೆಗೂ ಸಿಕ್ಕಿತು ಭಾರತದ ವೀಸಾ: ಇಂಗ್ಲೆಂಡ್ ತಂಡಕ್ಕೆ ಯುವ ಸ್ಪಿನ್ನರ್ ಬಲ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದ ಜನವರಿ 25 ರಿಂದ ಪ್ರಾರಂಭವಾಗಲಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂ ಸಜ್ಜಾಗಿದೆ.

ಇತ್ತ ಈ ಪಂದ್ಯಕ್ಕಾಗಿ ಇಂಗ್ಲೆಂಡ್ ತನ್ನ ತಂಡವನ್ನು ಪ್ರಕಟಿಸಿದೆ. ಆದ್ರೆ ವೀಸಾ ಸಮಸ್ಯೆಯಿಂದ ಭಾರತಕ್ಕೆ ಬರಲಾಗದೆ, ಇಂಗ್ಲೆಂಡ್​ಗೆ ವಾಪಸ್ಸಾಗಿದ್ದ ಯುವ ಸ್ಪಿನ್ನರ್ ಶೋಯಬ್ ಬಶೀರ್​ಗೆ (Shoaib Bashir) ಕೊನೆಗೂ ಭಾರತದ ವೀಸಾ (Visa) ಸಿಕ್ಕಿದೆ.

ಈ ಮಾಹಿತಿಯನ್ನು ಸ್ವತಃ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯೇ ನೀಡಿದೆ. ಆದರೆ ಈಗಾಗಲೇ ಮೊದಲ ಟೆಸ್ಟ್ ಪಂದ್ಯಕ್ಕೆ ತಂಡವನ್ನು ಪ್ರಕಟಿಸುವ ಕಾರಣ ಶೋಯಬ್ ಬಶೀರ್ ಮೊದಲ ಟೆಸ್ಟ್ ಪಂದ್ಯವನ್ನು ಆಡಲು ಸಾಧ್ಯವಿಲ್ಲ.

ಇಂಗ್ಲೆಂಡ್ ತಂಡ ಭಾರತಕ್ಕೆ ಬರುವ ಮುನ್ನೆ ಅಬುಧಾಬಿಗೆ ತೆರಳಿತ್ತು. ಅಲ್ಲಿ ಕೆಲವು ದಿನಗಳ ಕಾಲ ಅಭ್ಯಾಸ ನಡೆಸಿತ್ತು. ಆ ಬಳಿಕ ತಂಡ ಕಳೆದ ಭಾನುವಾರ ಅಬುಧಾಬಿಯಿಂದ ಮೊದಲ ಟೆಸ್ಟ್ ನಡೆಯುವ ಹೈದರಾಬಾದ್​ಗೆ ವಿಮಾನ ಹತ್ತಿತ್ತು. ಆದರೆ ಇಂಗ್ಲೆಂಡ್ ತಂಡದಲ್ಲಿ ಆಯ್ಕೆಯಾಗಿದ್ದ ಪಾಕಿಸ್ತಾನ ಮೂಲದ ಯುವ ಸ್ಪಿನ್ನರ್ ಶೋಯಬ್ ಬಶೀರ್​ಗೆ ಭಾರತಕ್ಕೆ ಬರಲು ವೀಸಾ ಅನುಮತಿ ಸಿಕ್ಕಿರಲಿಲ್ಲ.

ಇಂದು ತಂಡವನ್ನು ಪ್ರಕಟಿಸಿದ ಬಳಿಕ ಮಾತನಾಡಿದ್ದ ಸ್ಟೋಕ್ಸ್, ಶೋಯಬ್ ಬಶೀರ್​ಗೆ ವೀಸಾ ಸಿಕ್ಕಿಲ್ಲ. ಹೀಗಾಗಿ ಅವರು ಮೊದಲ ಟೆಸ್ಟ್ ಪಂದ್ಯವನ್ನು ಆಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಅವರು ದುಬೈನಿಂದ ಸೀದಾ ಮನೆಗೆ ವಾಪಸ್ಸಾಗಿದ್ದಾರೆ ಎಂಬ ಮಾಹಿತಿ ನೀಡಿದರು. ಆ ಬಳಿಕ ಬ್ರಿಟನ್ ಸರ್ಕಾರ ಕೂಡ ಈ ಬಗ್ಗೆ ಬೇಗನೆ ನಿರ್ಧಾರಕ್ಕೆ ಬರುವಂತೆ ಭಾರತ ಸರ್ಕಾರವನ್ನು ಕೇಳಿಕೊಂಡಿತ್ತು. ಅದರಂತೆ ಈಗ ಭಾರತದ ವೀಸಾ ಪಡೆದಿರುವ ಶೋಯಬ್ ಬಶೀರ್​ ಇಷ್ಟರಲ್ಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಇದೀಗ ಭಾರತದ ವೀಸಾ ಪಡೆದುಕೊಂಡಿರುವ ಶೋಯಬ್ ಬಶೀರ್​ ಕೌಂಟಿ ಕ್ರಿಕೆಟ್ ಕ್ಲಬ್ ಸೋಮರ್‌ಸೆಟ್‌ ಪರ ಆಡುತ್ತಿದ್ದಾರೆ. ಅವರು ಇದುವರೆಗೆ ಇಂಗ್ಲೆಂಡ್ ಪರ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ. ಶೋಯೆಬ್ ಬಶೀರ್ ಇಂಗ್ಲೆಂಡ್‌ನಲ್ಲಿ ಜನಿಸಿದ್ದರೂ, ಅವರ ಪೋಷಕರು ಪಾಕಿಸ್ತಾನಿ ಮೂಲದವರು ಹೀಗಾಗಿ ವೀಸಾ ನೀಡುವಲ್ಲಿ ವಿಳಂಬವಾಗಿತ್ತು.

ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ವೇಳಾಪಟ್ಟಿ
ಮೊದಲ ಟೆಸ್ಟ್: 25-29 ಜನವರಿ, ಹೈದರಾಬಾದ್
ಎರಡನೇ ಟೆಸ್ಟ್: 2-6 ಫೆಬ್ರವರಿ, ವಿಶಾಖಪಟ್ಟಣ
ಮೂರನೇ ಟೆಸ್ಟ್: 15-19 ಫೆಬ್ರವರಿ, ರಾಜ್ಕೋಟ್
ನಾಲ್ಕನೇ ಟೆಸ್ಟ್: 23-27 ಫೆಬ್ರವರಿ, ರಾಂಚಿ
5 ನೇ ಟೆಸ್ಟ್: 7-11 ಮಾರ್ಚ್, ಧರ್ಮಶಾಲಾ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!