ಹೊಸದಿಗಂತ ಡಿಜಿಟಲ್ ಡೆಸ್ಕ್;
ಎಫ್‌ಐಎಚ್ ಹಾಕಿ ಪ್ರೊ ಲೀಗ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡವ ಐತಿಹಾಸಿಕ ಗೆಲುವು ಸಾಧಿಸಿದೆ. ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು ನೆದರ್ಲ್ಯಾಂಡ್ಸ್ ತಂಡವನ್ನು ಶೂಟೌಟ್‌ನಲ್ಲಿ 2-1 ಗೋಲುಗಳಿಂದ ಸೋಲಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ.
ಈ ಪಂದ್ಯದಲ್ಲಿ 4 ಕ್ವಾರ್ಟರ್‌ಗಳ ನಂತರ ಎರಡೂ ತಂಡಗಳು ತಲಾ 2 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಇದಾದ ನಂತರ, ಭಾರತ ಶೂಟೌಟ್ ಗೆದ್ದು ಬೋನಸ್ ಅಂಕಗಳನ್ನು ಪಡೆಯಿತು. ಒಂದು ಹಂತದಲ್ಲಿ ಭಾರತ ತಂಡ 0-2 ಅಂತರದಲ್ಲಿ ಹಿನ್ನಡೆಯಲ್ಲಿತ್ತು. ಆದರೆ ಮೂರನೇ ಕ್ವಾರ್ಟರ್‌ನಲ್ಲಿ ಎರಡು ಗೋಲುಗಳನ್ನು ಗಳಿಸುವ ಮೂಲಕ ಭಾರತ ಅದ್ಭುತ ಪುನರಾಗಮನ ಮಾಡಿತು. ಭಾರತದ ಪರ ದೀಪಿಕಾ ಮತ್ತು ಬಲ್ಜೀತ್ ಕೌರ್ ಗೋಲು ಗಳಿಸಿದರೆ, ನೆದರ್ಲ್ಯಾಂಡ್ಸ್ ನಾಯಕಿ ಪಿಯಾನ್ ಸ್ಯಾಂಡರ್ಸ್ ಮತ್ತು ಫಾಯೆ ವ್ಯಾನ್ ಡೆರ್ ಎಲ್ಸ್ಟ್ ಗೋಲು ಬಾರಿಸಿದರು.
ಬಹುಮಾನ ಘೋಷಿಸಿದ ಹಾಕಿ ಇಂಡಿಯಾ
ಇದೀಗ ಬಲಿಷ್ಠ ನೆದರ್ಲ್ಯಾಂಡ್ಸ್ ತಂಡವನ್ನು ಸೋಲಿಸಿರುವ ಭಾರತ ಮಹಿಳಾ ತಂಡದ ಪ್ರತಿಯೊಬ್ಬ ಆಟಗಾರ್ತಿಗೂ ತಲಾ 1 ಲಕ್ಷ ರೂ. ಮತ್ತು ಸಹಾಯಕ ಸಿಬ್ಬಂದಿಯ ಪ್ರತಿಯೊಬ್ಬ ಸದಸ್ಯರಿಗೆ 50,000 ರೂ. ನಗದು ಬಹುಮಾನವನ್ನು ಹಾಕಿ ಇಂಡಿಯಾ ಘೋಷಿಸಿದೆ.
35 ನೇ ನಿಮಿಷದಲ್ಲಿ ದೀಪಿಕಾ ಹಾಗೂ 43ನೇ ನಿಮಿಷದಲ್ಲಿ ಬಲ್ಜೀತ್ ಕೌರ್ ಭಾರತದ ಪರ ಅದ್ಭುತ ಗೋಲು ದಾಖಲಿಸಿ ಪಂದ್ಯದಲ್ಲಿ 2-2 ಗೋಲುಗಳಿಂದ ಸಮಬಲ ಸಾಧಿಸಿದರು. ಕೊನೆಯ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳು ಗೆಲುವಿನ ಹುಡುಕಾಟದಲ್ಲಿ ತಮ್ಮ ಕೈಲಾದಷ್ಟು ಪ್ರಯತ್ನಿಸಿದರೂ ಯಾರಿಗೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ನಂತರ ಭಾರತ ಶೂಟೌಟ್‌ನಲ್ಲಿ 2-1 ಅಂತರದಿಂದ ನೆದರ್ಲ್ಯಾಂಡ್ಸ್ ವಿರುದ್ಧ ಗೆಲುವು ಸಾಧಿಸಿತು.