ಭಾರತದ ಮೊದಲ ಖಾಸಗಿ ರಾಕೆಟ್ ʼವಿಕ್ರಮ್-ಎಸ್ʼ ಯಶಸ್ವಿ ಉಡಾವಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾರತದ ಮೊದಲ ಖಾಸಗಿಯಾಗಿ ನಿರ್ಮಿಸಿದ ರಾಕೆಟ್ ʼವಿಕ್ರಮ್- ಸಬಾರ್ಬಿಟಲ್ʼ (VKS) ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ಯಶಸ್ವಿಯಾಗಿ ಉಡಾವಣೆಗೊಂಡಿದೆ.
ವಿಕ್ರಮ್-ಎಸ್ ರಾಕೆಟ್ ಅನ್ನು ಇಸ್ರೋ ಮತ್ತು ಇನ್-ಸ್ಪೇಸ್ ಬೆಂಬಲ ದೊಂದಿಗೆ ಹೈದರಾಬಾದ್ ಮೂಲದ ಸ್ಟಾರ್ಟ್-ಅಪ್ ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿದೆ. ಈ ರಾಕೆಟ್‌ಗೆ ಭಾರತದ ಬಾಹ್ಯಾಕಾಶ ಕ್ಷೇತ್ರದ ಪಿತಾಮಹ ವಿಕ್ರಮ್ ಸಾರಾಭಾಯ್ ಅವರ ಹೆಸರನ್ನೇ ಇಡಲಾಗಿದೆ. ಹೊಸ ಆರಂಭವನ್ನು ಸಂಕೇತಿಸುವ ಪ್ರಯತ್ನವಾಗಿ ಮಿಷನ್‌ಗೆ ‘ಪ್ರಾರಂಭ’ ಎಂದು ಹೆಸರಿಸಲಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಬೆಳಗ್ಗೆ 11.30ರ ಸುಮಾರಿಗೆ ಉಡಾವಣೆ ನಡೆದಿದೆ.
ಇದು ದಶಕಗಳಿಂದ ಸರ್ಕಾರಿ-ಇಸ್ರೋ ಪ್ರಾಬಲ್ಯ ಹೊಂದಿರುವ ದೇಶದ ಬಾಹ್ಯಾಕಾಶ ಉದ್ಯಮಕ್ಕೆ ಖಾಸಗಿ ವಲಯದ ಮುನ್ನುಗ್ಗುವಿಕೆಯನ್ನು ಗುರುತಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 2020 ರಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯ ಪ್ರವೇಶಿಸಲು ಅನುಮತಿಸಿದ್ದರು. ಆಂಧ್ರಪ್ರದೇಶ ಮೂಲದ ಎನ್ ಸ್ಪೇಸ್ ಟೆಕ್ ಇಂಡಿಯಾ, ಚೆನ್ನೈ ಮೂಲದ ಸ್ಟಾರ್ಟಪ್ ಸ್ಪೇಸ್ ಕಿಡ್ಸ್ ಮತ್ತು ಅರ್ಮೇನಿಯನ್ ಬಾಜೂಮ್ ಕ್ಯೂ ಸ್ಪೇಸ್ ರಿಸರ್ಚ್ ಲ್ಯಾಬ್ ನಿರ್ಮಿಸಿದ ಮೂರು ಪೇಲೋಡ್ ಗಳನ್ನು ರಾಕೆಟ್ ಹೊತ್ತೊಯ್ದಿದೆ.
“ಮಿಷನ್ ಪ್ರಾರಂಭ್ ಯಶಸ್ವಿಯಾಗಿ ನೆರವೇರಿದೆ. ಅಭಿನಂದನೆಗಳು” ಎಂದು ಇಸ್ರೋ ಟ್ವಿಟರ್‌ನಲ್ಲಿ ಪ್ರಕಟಿಸಿದೆ.
ಇನ್‌- ಸ್ಪೇಸ್‌ ಅಧ್ಯಕ್ಷ ಡಾ. ಪವನ್ ಕುಮಾರ್ ಗೋಯೆಂಕಾ, ಇದು ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ “ಮೈಲಿಗಲ್ಲು” ಮತ್ತು “ಹೊಸ ಯುಗ” ಎಂದು ಬಣ್ಣಿಸಿದ್ದಾರೆ. “ಇದು ಬಾಹ್ಯಾಕಾಶ ಕ್ಷೇತ್ರಕ್ಕೆ ಪ್ರವೇಶಿಸುವಲ್ಲಿ ಖಾಸಗಿ ವಲಯಕ್ಕೆ ಹೊಸ ಆರಂಭವಾಗಿದೆ” ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ರಾಕೆಟ್‌ ಅನ್ನು ಕೇವಲ ಎರಡು ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಗಿರವುದು ದಾಖಲೆಯಾಗಿದೆ. ʼವಿಕ್ರಮ್-ಎಸ್ʼ ಘನ ಇಂಧನ ಪ್ರೊಪಲ್ಷನ್, ಅತ್ಯಾಧುನಿಕ ಏವಿಯಾನಿಕ್ಸ್ ಮತ್ತು ಕಾರ್ಬನ್ ಫೈಬರ್ ಕೋರ್ ರಚನೆಯಿಂದ ಚಾಲಿತವಾಗುವ ಸಾಮರ್ಥ್ಯ ಹೊಂದಿದೆ.

ಆರು-ಮೀಟರ್ ಎತ್ತರದ ರಾಕೆಟ್ ತನ್ನ ಸ್ಥಿರತೆಗಾಗಿ 3D-ಮುದ್ರಿತ ಘನ ಥ್ರಸ್ಟರ್‌ಗಳನ್ನು ಹೊಂದಿರುವ ವಿಶ್ವದ ಮೊದಲ ಸಂಪೂರ್ಣ-ಸಂಯೋಜಿತ ರಾಕೆಟ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸ್ಕೈರೂಟ್ ಏರೋಸ್ಪೇಸ್ ಪ್ರಕಾರ, 545 ಕೆಜಿ ದ್ರವ್ಯರಾಶಿ, 6 ಮೀ ಉದ್ದ ಮತ್ತು 0.375 ಮೀಟರ್ ವ್ಯಾಸವನ್ನು ಹೊಂದಿರುವ ವಿಕ್ರಮ್-ಎಸ್ ಬಾಹ್ಯಾಕಾಶಕ್ಕೆ ವೇಗವಾಗಿ ಪ್ರಯಾಣಿಸಲು ತಕ್ಕಂತೆ ರೂಪಿಸಲಾಗಿಸದೆ.
ಈ ಐತಿಹಾಸಿಕ ಉಡಾವಣೆಯನ್ನು ವೀಕ್ಷಿಸಲು ಶ್ರೀಹರಿಕೋಟಾಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ರಾಕೆಟ್ ಉಡಾವಣೆಯು ಭಾರತೀಯ ಸ್ಟಾರ್ಟ್‌ಅಪ್‌ಗಳಿಗೆ ಮಹತ್ವದ ತಿರುವು ನೀಡಲಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!