329 ಮಿಲಿಯನ್‌ ಡಾಲರ್‌ ಕುಸಿದ ಭಾರತದ ವಿದೇಶಿ ವಿನಿಮಯ ಸಂಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಾರ್ಚ್‌ 31ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 329 ಮಿಲಿಯನ್ ಡಾಲರ್‌ ಕುಸಿದು 578.449 ಬಿಲಿಯನ್‌ ಡಾಲರ್‌ ಗೆ ತಲುಪಿದೆ ಎಂದು ಆರ್‌ಬಿಐ ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿಅಂಶಗಳು ತೋರಿಸಿವೆ. ಹಿಂದಿನ ಎರಡು ವಾರಗಳಲ್ಲಿ ತುಸು ಏರಿಕೆ ದಾಖಲಿಸಿದ್ದ ವಿದೇಶಿ ವಿನಿಮಯ ಸಂಗ್ರಹವು ಈ ವಾರದಲ್ಲಿ ಕುಸಿತ ದಾಖಲಿಸಿದೆ. ಮಾರ್ಚ್ 24 ಕ್ಕೆ ಕೊನೆಗೊಂಡ ವಾರಕ್ಕೆ 5.977 ಬಿಲಿಯನ್ ಡಾಲರ್‌ ಏರಿ 578.778 ಬಿಲಿಯನ್‌ ಡಾಲರ್‌ ಗೆ ತಲುಪಿತ್ತು.

2022-23 ರ ಸಂಪೂರ್ಣ ಹಣಕಾಸು ವರ್ಷದಲ್ಲಿ, ಒಟ್ಟಾರೆ ವಿದೇಶೀ ವಿನಿಮಯ ಸಂಗ್ರಹವು 28.86 ಬಿಲಿಯನ್‌ ಡಾಲರ್‌ ನಷ್ಟು ಕುಸಿದಿದೆ. ಅಕ್ಟೋಬರ್ 2021 ರಲ್ಲಿ ಭಾರತದ ವಿದೇಶಿ ವಿನಿಮಯ (ಫಾರೆಕ್ಸ್) ಸಾರ್ವಕಾಲಿಕ ಗರಿಷ್ಠಮಟ್ಟ 645 ಬಿಲಿಯನ್‌ ಡಾಲರ್‌ ಗೆ ತಲುಪಿತ್ತು. ಆದರೆ ನಂತರದ ಜಾಗತಿಕ ಬೆಳವಣಿಗೆಗಳಿಂದ ಉಂಟಾದ ಒತ್ತಡಗಳ ನಡುವೆ ಕೇಂದ್ರ ಬ್ಯಾಂಕ್ ರೂಪಾಯಿಯನ್ನು ರಕ್ಷಿಸಲು ಡಾಲರ್‌ ಮಾರಾಟ ಮಾಡಿದ ಪರಿಣಾಮ ನಿರಂತರವಾಗಿ ಕುಸಿತ ದಾಖಲಾಗಿದೆ.

ಚಿನ್ನದ ಸಂಗ್ರಹವು 279 ಮಿಲಿಯನ್ ಡಾಲರ್‌ ಇಳಿಕೆಯಾಗಿ 45.20 ಬಿಲಿಯನ್ ಡಾಲರ್‌ಗೆ ಕುಸಿದಿದೆ ಎಂದು ಆರ್‌ಬಿಐ ತಿಳಿಸಿದೆ. ಇದಲ್ಲದೇ ಮಾ.31 ರಂದು ಕೊನೆಗೊಂಡ ವಾರದಲ್ಲಿ IMF ನೊಂದಿಗೆ ದೇಶದ ಮೀಸಲು ಸ್ಥಾನವು 14 ಮಿಲಿಯನ್‌ ಡಾಲರ್‌ ಏರಿಕೆಯಾಗಿ 5.165 ಬಿಲಿಯನ್‌ ಡಾಲರ್‌ ಗೆ ತಲುಪಿದೆ ಎಂದು ಅಪೆಕ್ಸ್ ಬ್ಯಾಂಕ್ ಡೇಟಾ ತೋರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!