ವಿಶ್ವದ ಟಾಪ್ 10 ಅದ್ಭುತ ಪರಿಸರ ಸಂರಕ್ಷಣಾ ಪ್ರಯತ್ನಗಳ ಪಟ್ಟಿಯಲ್ಲಿದೆ ಭಾರತದ ʼನಮಾಮಿ ಗಂಗೆʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪುರಾಣಗಳ ಕಾಲದಿಂದಲೂ ಭಾರತದ ಅತ್ಯಂತ ಪವಿತ್ರನದಿಯೆಂದು ಕರೆಸಿಕೊಂಡು ಪೂಜಿಸಲ್ಪಡುವ ಗಂಗಾನದಿಯನ್ನು ಮಾಲಿನ್ಯಗಳಿಂದ ಮುಕ್ತಗೊಳಿಸಿ ಸಂರಕ್ಷಿಸಲು ಕೈಗೊಂಡ ಮಹತ್ವಾಕಾಂಕ್ಷಿ ಯೋಜನೆಯಾದ ʼನಮಾಮಿ ಗಂಗೆʼ ಯೋಜನೆಯು ವಿಶ್ವಸಂಸ್ಥೆಯ ಜಗತ್ತಿನ ಟಾಪ್‌ 10 ಅದ್ಭುತವಾದ ಪರಿಸರ ಸಂರಕ್ಷಣಾ ಪ್ರಯತ್ನಗಳ ಪಟ್ಟಿಯಲ್ಲಿ ಸ್ಥಾನಗಳಿಸಿದೆ.

ವಿಶ್ವಸಂಸ್ಥೆಯ ಜೈವಿಕ ವೈವಿಧ್ಯ ಸಮ್ಮೇಳನದಲ್ಲಿ (COP15) ಬಿಡುಗಡೆ ಮಾಡಿದ ವರದಿಯಲ್ಲಿ ಪರಿಸರ ಸಂರಕ್ಷಣೆಯ ಅಧ್ಬುತ ಪ್ರಯತ್ನಗಳ ಸಾಲಿನಲ್ಲಿ ಭಾರತದ ನಮಾಮಿ ಗಂಗೆ ಯೋಜನೆಯನ್ನು ಮೊದಲ ಹತ್ತು ಪ್ರಯತ್ನಗಳಲ್ಲಿ ಪಟ್ಟಿಯಲ್ಲಿ ಹೆಸರಿಸಲಾಗಿದೆ. ವಿಶ್ವದ ಪರಿಸರ ವ್ಯವಸ್ಥೆಯ ಪುನಃಸ್ಥಾಪನೆ ಪ್ರಯತ್ನಗಳಲ್ಲಿ ‘ನಮಾಮಿ ಗಂಗೆ’ ಯೋಜನೆಯು ಬಹಳ ಪ್ರಮುಖವಾದುದು ಎಂದು ಹೆಸರಿಸಿರುವುದು ಭಾರತದ ಪ್ರಯತ್ನಗಳಿಗೆ ಹಿಡಿದ ಕೈಗನ್ನಡಿಯಾಗಿದೆ.

ಇಂದು ಜಗತ್ತು ಹವಾಮಾನ ಬದಲಾವಣೆ, ಪ್ರಕೃತಿ ಮತ್ತು ಜೀವವೈವಿಧ್ಯದ ನಷ್ಟ, ಮಾಲಿನ್ಯ ಮತ್ತು ತ್ಯಾಜ್ಯಗಳಿಂದ ವಿಪರೀತ ಸಮಸ್ಯೆಗಳನ್ನು ಎದುರಿಸುತ್ತಿದೆ. ಹೀಗಾಗಿ ಪ್ರಕೃತಿಯ ಉಳಿವೊಂದೇ ಇವೆಲ್ಲದಕ್ಕೂ ಪರಿಹಾರ ವಾಗಬಲ್ಲುದು ಎಂಬುದು ಜಗತ್ತಿಗೆ ಮನವರಿಕೆಯಾಗಿದೆ. ವಿಶ್ವ ಸಂಸ್ಥೆಯ ಮಟ್ಟದಲ್ಲಿಯೂ ಅಂತರಾಷ್ಟ್ರೀಯವಾಗಿ ಹಲವಾರು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಭಾರತದ ʼನಮಾಮಿ ಗಂಗೆʼ ಈ ನಿಟ್ಟಿನಲ್ಲಿ ಸಾಧಿಸಿದ ಅದ್ಭುತ ಪ್ರಯತ್ನಗಳಲ್ಲೊಂದು. ಎರಡು ಸಾವಿರಕ್ಕೂ ಅಧಿಕ ಕಿಲೋಮೀಟರ್‌ಗಳಷ್ಟು ಉದ್ದವಿರುವ ಗಂಗೆಯನ್ನು ಪುನರುಜ್ಜೀವನ ಗೊಳಿಸಿ, ಮಾಲಿನ್ಯ ಮುಕ್ತವಾಗಸುವಲ್ಲಿ ಭಾರತ ಸರ್ಕಾರವು ಅಪರಿಮಿತ ಶ್ರಮವಹಿಸಿದೆ. ಈ ಪ್ರಯತ್ನಗಳಿಗೀಗ ವಿಶ್ವ ಮನ್ನಣೆ ದೊರಕಿರುವುದು ಭಾರತದ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!