Sunday, August 14, 2022

Latest Posts

ಕೈಗಾರಿಕೆ ಸ್ಥಾಪನೆ-ಉದ್ಯೋಗಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಸರಳೀಕರಣ: ಶೆಟ್ಟರ್

ಹೊಸ ದಿಗಂತ ವರದಿ, ಮಂಡ್ಯ:

ಕೈಗಾರಿಕೆಗಳು ಹೆಚ್ಚು ಸ್ಥಾಪನೆಯಾಗಿ ಯುವಜನತೆಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯನ್ನು
ಬಹಳ ಸರಳೀಕರಣಗೊಳಿಸಲಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕೈಗಾರಿಕೋದ್ಯಮಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ
ಮಾತನಾಡಿದ ಅವರು, ಭೂ ಸ್ವಾಧೀನ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿರುವುದರಿಂದ ಬಂಡವಾಳಶಾಹಿಗಳು ಕೈಗಾರಿಕೆಗಳನ್ನು ಸ್ಥಾಪಿಸಲು ಬಹಳ ಉತ್ಸುಕರಾಗಿದ್ದು, ಕೈಗಾರಿಕಾ ವಲಯದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ ಎಂದು ತಿಳಿಸಿದರು.
ಮಂಡ್ಯ, ಮೈಸೂರು, ಚಾಮರಾಜನಗರ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ತುಮಕೂರು ಜಿಲ್ಲೆಗಳಲ್ಲಿ ಹೆಚ್ಚು ಕೈಗಾರಿಕೆಗಳನ್ನು ಸ್ಥಾಪಿಸಲು ಉದ್ದಿಮೆದಾರರ ಮನವೊಲಿಸಿ ಪ್ರೋತ್ಸಾಹಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ರಾಯಚೂರು, ಕಡೆಚೂರುಗಳಲ್ಲಿ 80 ಕೈಗಾರಿಕೆಗಳ ಸ್ಥಾಪನೆಗೆ ಅನುಮತಿ ಕೊಡಲಾಗಿದೆ. ಕೊಪ್ಪಳದಲ್ಲಿ 400 ಎಕರೆ ಪ್ರದೇಶದಲ್ಲಿ ಬೊಂಬೆ ಕೈಗಾರಿಕೆ ಸ್ಥಾಪಿಸಲಾಗುತ್ತಿದೆ. ಹುಬ್ಬಳ್ಳಿಯಲ್ಲೂ ಕೈಗಾರಿಕೆ ಸ್ಥಾಪಿಸಲು ಉದ್ದಿಮೆದಾರರು ಮುಂದೆ ಬರುತ್ತಿದ್ದು, ಇದೇರೀತಿಯ ಬೆಳವಣಿಗೆ ಮಂಡ್ಯ ಜಿಲ್ಲೆಯಲ್ಲೂ ಆಗುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಯು ಮೈಸೂರು-ಬೆಂಗಳೂರು ಮಧ್ಯೆ ಇದ್ದು, ಕೈಗಾರಿಕೆಗೆ ಬಹಳ ಆದ್ಯತೆ ಇದೆ. 2020-2025ನೇ ಸಾಲಿಗೆ ಹೊಸ ಕೈಗಾರಿಕೆ ನೀತಿಯನ್ನು ಜಾರಿಗೆ ತಂದಿದ್ದು, ಕೈಗಾರಿಕಾ ಬೆಳವಣಿಗೆಗೆ ಸವಲತ್ತು ಮತ್ತು ಪ್ರೋತ್ಸಾಹ ಕೊಡಲಾಗುತ್ತಿದೆ. ಭೂಸ್ವಾಧೀನ ಪ್ರಕ್ರಿಯೆಯನ್ನು ಸರಳೀಕರಣ ಮಾಡಿ ಸೆಕ್ಷನ್ 79 ಮತ್ತು 80ನ್ನು ತೆಗೆದುಹಾಕಲಾಗಿದೆ. ಇದರಿಂದ ಒಬ್ಬ ಉದ್ದಿಮೆದಾರ ರೈತರಿಂದ ನೇರವಾಗಿ 100 ಎಕರೆವರೆಗೂ ಭೂಮಿ ಪಡೆದು ಕೈಗಾರಿಕೆ ಸ್ಥಾಪಿಸಬಹುದಾಗಿದೆ. ಅಲ್ಲದೆ, ಕೈಗಾರಿಕೆ ಸ್ಥಾಪಿಸಲು ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವ ಸಮಿತಿಯಿಂದ ಎನ್‌ಒಸಿ ಪಡೆದು ಕೈಗಾರಿಕೆ ಸ್ಥಾಪಿಸಬಹುದಾಗಿದೆ ಎಂದು ವಿವರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss