Tuesday, August 9, 2022

Latest Posts

ಕಳೆದ 7 ವರ್ಷಗಳಲ್ಲಿ ಹಣದುಬ್ಬರ ಹೆಚ್ಚಿಲ್ಲ: ಸಂಸತ್ತಿನಲ್ಲಿ ಗಮನ ಸೆಳೆದ ಕೇಂದ್ರ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ದೇಶದಲ್ಲಿ ಕೋವಿಡ್ ಬಿಕ್ಕಟ್ಟಿನ ಹೊರತಾಗಿಯೂ ಕಳೆದ ಏಳು ವರ್ಷಗಳಲ್ಲಿ ಹಣದುಬ್ಬರ ಹೆಚ್ಚದಂತೆ ನೋಡಿಕೊಳ್ಳಲಾಗಿದೆ ಎಂಬುದಾಗಿ ಕೇಂದ್ರ ಸರಕಾರ ಮಂಗಳವಾರ ಸಂಸತ್ತಿನಲ್ಲಿ ಅಂಕಿ-ಅಂಶಗಳೊಂದಿಗೆ ಗಮನ ಸೆಳೆಯಿತು.
ಈ ಅವಧಿಯಲ್ಲಿ ಕೆಲವು ವಸ್ತುಗಳ ಬೆಲೆಯಲ್ಲಿ ಏರಿಕೆ ಉಂಟಾದಾಗ ಸರಕಾರ ತಕ್ಷಣ ಈ ಬಗ್ಗೆ ಗಮನಹರಿಸಿ ಅದನ್ನು ಇಳಿಸಲು ಸೂಕ್ತ ಕ್ರಮ ಕೈಗೊಳ್ಳುತ್ತಲೇ ಬಂದಿದೆ ಎಂಬುದನ್ನು ಕೇಂದ್ರ ಸಹಾಯಕ ವಿತ್ತ ಸಚಿವ ಅನುರಾಗ್ ಠಾಕೂರ್ ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ವಿವರಿಸಿದರು.
ದೇಶದಲ್ಲಿ ಆಹಾರ ವಸ್ತುಗಳಿಗೆ ಸಂಬಂಧಿಸಿ ಗ್ರಾಹಕ ಬೆಲೆ ಸೂಚ್ಯಂಕ(ಸಿಪಿಐ) ತಿಂಗಳಿನಿಂದ ತಿಂಗಳಿಗೆ ಇಳಿಕೆಯನ್ನೇ ತೋರಿಸುತ್ತಾ ಬಂದಿದೆ. ಈ ವರ್ಷದ ಜನವರಿ ಮತ್ತು ಫೆಬ್ರವರಿಯಲ್ಲಿ ಸಿರಿಧಾನ್ಯಗಳು, ಮಾಂಸ, ಮೀನು, ಮೊಟ್ಟೆ, ತರಕಾರಿ , ಬೇಳೆ ಕಾಳುಗಳ ಒಟ್ಟಾರೆ ಬೆಲೆಗಳು ಇಳಿಕೆಯನ್ನೇ ತೋರಿಸಿವೆ ಎಂಬುದಾಗಿ ಅವರು ಬೊಟ್ಟು ಮಾಡಿದರು.
ಒಟ್ಟಾರೆಯಾಗಿ , ಹಣದುಬ್ಬರವು ಕಳೆದ ಏಳುವರ್ಷಗಳಲ್ಲಿ ಹೆಚ್ಚದಂತೆ ಸರಕಾರ ನೋಡಿಕೊಂಡಿದೆ. ಆದರೆ ಕೋವಿಡ್ ಬಿಕ್ಕಟ್ಟಿನ ಸಂದರ್ಭ ಸೇರಿದಂತೆ ಕೆಲವೊಮ್ಮೆ ಬೇಡಿಕೆ ಮತ್ತು ಪೂರೈಕೆಯಲ್ಲಿನ ವ್ಯತ್ಯಯಗಳಿಂದಾಗಿ ಕೆಲವು ವಸ್ತುಗಳ ಬೆಲೆಯಲ್ಲಿ ಏರಿಳಿತ ಉಂಟಾಗಿರಬಹುದು. ಸರಕಾರ ತಕ್ಷಣವೇ ಈ ಬಗ್ಗೆ ಗಮನ ಹರಿಸಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗದಂತೆ ನೋಡಿಕೊಂಡಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಹಿಂದೆಲ್ಲ ದೇಶದಲ್ಲಿ ಯಾವುದಾದರೂ ಬಿಕ್ಕಟ್ಟು ಉಂಟಾದಲ್ಲಿ ತಕ್ಷಣವೇ ಕಾಳಸಂತೆಕೋರರು ಅಗತ್ಯ ವಸ್ತುಗಳ ಬೆಲೆಯನ್ನು ಹೆಚ್ಚಿಸಿ ಜನತೆಯನ್ನು ಸಂಕಷ್ಟಕ್ಕೆ ಗುರಿ ಮಾಡುತ್ತಿದ್ದರೆ, ಮೋದಿ ಸರಕಾರ ಬಂದ ಬಳಿಕ ಇಂತಹದಕ್ಕೆ ಅವಕಾಶ ನೀಡದೆ ಜನತೆಯ ಹಿತಕಾಯ್ದುಕೊಂಡು ಬಂದಿರುವುದಿಲ್ಲಿ ಉಲ್ಲೇಖನೀಯ.

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss