ಹೊಸದಿಗಂತ ವರದಿ, ಮೈಸೂರು:
ಕೊರೋನಾ ಸಂಕಷ್ಟ ಕಾಲದಲ್ಲೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಡಿಸಿರುವ ಜನಪರ ಹಾಗೂ ರೈತಪರ ಬಜೆಟ್ನಿಂದ ಆರ್ಥಿಕವಾಗಿ ಚೇತರಿಕೆ ಸಿಗಲಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್ ಹೇಳಿದರು.
ಪ್ರಾಧಿಕಾರದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರು ಬಜೆಟ್ನಲ್ಲಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಒತ್ತುಕೊಟ್ಟಿದ್ದಾರೆ. ಸಹಕಾರಿ ವಲಯದ ಮೂಲಕವೂ ಅನೇಕ ಘೋಷಣೆ ಮಾಡಿದ್ದು, ರೈತರಿಗೆ ಹಾಗೂ ನಾಗರೀಕರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ ರಾಜ್ಯದ ಜನತೆ ಪರವಾಗಿ ಹಾಗೂ ವೈಯಕ್ತಿಕವಾಗಿ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ನೀರಿನ ಜವಾಬ್ದಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯಾಪ್ತಿಗೆ ಸೇರಿಸಿರುವುದು ಅತ್ಯಂತ ಸಂತಸದ ವಿಚಾರ. ಮೇಲ್ನೋಟಕ್ಕೆ ಇದೊಂದು ಘೋಷಣೆಯಾಗಿ ಕಂಡರೂ, ಈ ದಿನದವರೆಗೆ ಪ್ರಾಧಿಕಾರದ ಬಡಾವಣೆಗಳು ಹಾಗೂ ಪ್ರಾಧಿಕಾರದಿಂದ ಅನುಮೋದನೆಗೊಂಡ ಬಡಾವಣೆಗಳು ತೀಕ್ಷ÷್ಣವಾದ ನೀರಿನ ಬವಣೆಯನ್ನು ಅನುಭವಿಸುತ್ತಿದ್ದವು. ಇನ್ನು ಮುಂದಿನ ದಿನಗಳಲ್ಲಿ ಪ್ರಾಧಿಕಾರದ ಅಭಿವೃದ್ಧಿ ಪಡಿಸಿದ ಬಡಾವಣೆ ಮತ್ತು ಅನುಮೋದನೆಗೊಂಡ ಖಾಸಗಿ ಬಡಾವಣೆಗಳಿಗೆ ನ್ಯಾಯಯೋಚಿತವಾಗಿ ಪಡೆಯಬೇಕಾಗಿದ್ದ ಎಲ್ಲಾ ನೀರಿನ ಯೋಜನೆಗಳ ಮುಖಾಂತರ ಪ್ರತಿಯೊಂದು ಬಡಾವಣೆಗಳಿಗೂ ಸಮಗ್ರವಾಗಿ ಶುದ್ಧ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ನಗರಪಾಲಿಕೆಯ ಮೇಯರ್ ರುಕ್ಮಿಣಿ ಮಾದೇಗೌಡ ಹಾಗೂ ಪ್ರಾಧಿಕಾರದ ಅಧ್ಯಕ್ಷನಾದ ನಾನು ನಮ್ಮೆಲ್ಲರ ಮನವಿಯ ಮೇರೆಗೆ ಈ ಯೋಜನೆಯೂ ಕಾರ್ಯರೂಪಕ್ಕೆ ಬಂದಿದೆ ಎಂದು ತಿಳಿಸಿದರು.