Monday, July 4, 2022

Latest Posts

ಆರ್ ಎಸ್ ಎಸ್ ಸಂಘದ ಪುತ್ತೂರು ಜಿಲ್ಲಾ ಕಾರ್ಯಾಲಯ ‘ಪಂಚವಟಿಗೆ’ ಶಿಲಾನ್ಯಾಸ

ಹೊಸ ದಿಗಂತ ವರದಿ, ಪುತ್ತೂರು:

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ವ್ಯಾಪ್ತಿಯ ಪುತ್ತೂರು ಜಿಲ್ಲಾ ಸಂಘ ಕಾರ್ಯಾಲಯ ‘ಪಂಚವಟಿ’ ರೂ. 3ಕೋಟಿ ವೆಚ್ಚದಲ್ಲಿ ಸಮಾಜದ ಸಹಕಾರದೊಂದಿಗೆ ಪುನರ್‌ನಿರ್ಮಾಣಗೊಳ್ಳುತ್ತಿದ್ದು ಪುನರ್ ನಿರ್ಮಾಣ ಕಾರ್ಯದ ಶಿಲಾನ್ಯಾಸ ಕಾರ್ಯಕ್ರಮವು ಸಂಘಸ್ಥಾಪನಾ ದಿನವಾದ ವಿಜಯದಶಮಿಯ ಪರ್ವದಿನವಾದ ಶುಕ್ರವಾರ ಸಂಪನ್ನಗೊಂಡಿತು.

ಧಾರ್ಮಿಕ ವಿಧಿವಿಧಾನ

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಪ್ರಧಾನ ಅರ್ಚಕ ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯ ವೇ.ಮೂ. ವಿ.ಎಸ್. ಭಟ್ ಶಿಲಾನ್ಯಾಸದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ವಿವಿಧ ನದಿಗಳ ತೀರ್ಥವನ್ನು ಈ ಸಂದರ್ಭ ಶಿಲಾನ್ಯಾಸ ಸ್ಥಳಕ್ಕೆ ಹಾಕಲಾಯಿತು. ಶುಕ್ರವಾರ ಬೆಳಗ್ಗೆ9.17ರ ಲಗ್ನದಲ್ಲಿ ಈ ಕಾರ್ಯವನ್ನು ನೆರವೇರಿಸಲಾಯಿತು.

ಎಲ್ಲಾ ಸಮಸ್ಯೆಗಳಿಗೂ ಪರಿಹಾರ

ಕಾರ್ಯಕ್ರಮದಲ್ಲಿ ಭೌದ್ಧಿಕ್ ನೀಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುಟುಂಬ ಪ್ರಭೋದನ್‌ನ ಅಖಿಲ ಭಾರತ ಸಂಯೋಜಕ ಕಜಂಪಾಡಿ ಸುಬ್ರಹ್ಮಣ್ಯ ಭಟ್, ದೇಶದ ಮೇಲೆ ಅಧರ್ಮಿಗಳ ಆಕ್ರಮಣ ಎದುರಿಸಲು ದೇವಿ ಅವತಾರ ತಾಳಿದ್ದಳು. ಈ ಕುರಿತು ದುರ್ಗಾಸಪ್ತ ಶಕ್ತಿಯನ್ನು ಓದಿದಾಗ ಅರ್ಥವಾಗುತ್ತದೆ. ಆ ಎಲ್ಲರ ಶಕ್ತಿ ಒಟ್ಟು ಸೇರಿ ದೇವಿಯ ಅವತಾರ ಆಗುತ್ತದೆ. ಅದೇ ರೀತಿ ಸಂಘಟನೆ ಇದ್ದರೆ ಏನು ಬೇಕಾದರೂ ಮಾಡಬಹುದು. ಡಾಕ್ಟರ್ ಜೀ ಅವರು ಇದ್ದನ್ನೇ ಮನಗಂಡು ಈ ದೇಶದ ಶಕ್ತಿಗಳು ಒಂದಾದಾಗ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಾಣುವಂತಾಗಬೇಕೆಂದು ಕನಸು ಕಂಡರು. ಆದರೆ ಅನೇಕರಿಗೆ ಅದು ಕನಸು ಮಾತ್ರ ಆಗಿತ್ತಾದರೂ ಇತ್ತೀಚಿಗಿನ ದಿನಗಳಲ್ಲಿ ಅದು ಕನಸು ನನಸಾಗುವ ಅನುಭವಕ್ಕೆ ಬರುತ್ತಿದೆ.

ಈ ರೀತಿ ಸಂಘಟಿತ ಶಕ್ತಿ ಉಂಟಾದಾಗ ಅದ್ಭುತ ಸಾಧನೆ ಮಾಡಬಹುದು. ಆ ಸಂಘಟಿತ ಶಕ್ತಿಗೆ ಶಕ್ತಿ ಕೊಡುವಲ್ಲಿ ಪುತ್ತೂರು ಜಿಲ್ಲೆ ಅದರದ್ದೇ ಆದಂತಹ ಕೊಡುಗೆ ನೀಡಿದೆ. ಪುತ್ತೂರು ಜಿಲ್ಲೆಗೆ ಸಂಬಂಧಿಸಿ ಒಂದು ಕಾರ್ಯಾಲಯ ಅಗಬೇಕೆಂದು ಸಲಹೆ ಬಂತು. ಅನಿಸಿತ್ತು. ಚರ್ಚೆಗಳಾಯಿತು. ಕಾರ್ಯಾಲಯಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅನುಮತಿ ಪಡೆದು ವಿಜಯ ದಶಮಿಯ ಸುಮುಹೂರ್ತದಲ್ಲಿ ಶಿಲಾನ್ಯಾಸವೂ ನಡೆಯಿತು. ಎಲ್ಲಾ ಬಂಧುಗಳ ಒಮ್ಮನಸ್ಸಿನ ಪ್ರಯತ್ನ ಸುಂದರ ಕಾರ್ಯಾಲಯ ನಿರ್ಮಾಣ ಗೊಂಡಿದೆ ಎಂದರು.

ಪ್ರಮುಖರ ಉಪಸ್ಥಿತಿ 
ಈ ಸಂದರ್ಭ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಿ.ಎಸ್. ಪ್ರಕಾಶ್, ದಕ್ಷಿಣ ಪ್ರಾಂತ ಸಂಘಚಾಲಕ್ ಡಾ. ಬಸ್ತಿ ವಾಮನ್ ಶೆಣೈ, ಹಿರಿಯ ಪ್ರಚಾರಕರಾದ ಸೀತರಾಮ ಕೆದಿಲಾಯ, ಡಾ. ಮಾ. ರವೀಂದ್ರ, ಸಂಘದ ಹಿರಿಯ ನಾಯಕ ಡಾ. ಕಲ್ಲಡ್ಕ ಪ್ರಭಾಕರ ಭಟ್, ಸಂಘದ ಜಿಲ್ಲಾಕಾರ್ಯವಾಹ ವಿನೋದ್ ಕೊಡ್ಮಣ್, ಜಿಲ್ಲಾ ಸಂಘಚಾಲಕ್ ಕಾಂತಪ್ಪ ಶೆಟ್ಟಿ ಕೊಡ್ಮಣ್, ಪುತ್ತೂರು ನಗರಸಂಘ ಚಾಲಕ್ ಇ. ಶಿವಪ್ರಸಾದ್, ಸಂಘದ ಪ್ರಮುಖರದಾದ ಅಚ್ಯುತನಾಯಕ್, ಎಸ್.ಆರ್. ರಂಗಮೂರ್ತಿ, ಪಿ. ರವೀಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ಶಾಸಕರಾದ ಸಂಜೀವಮಠಂದೂರು, ಹರೀಶ್ ಪೂಂಜ, ಖ್ಯಾತವೈದ್ಯ ಡಾ. ಕೆ. ಸುರೇಶ್ ಪುತ್ತೂರಾಯ, ನಗರಸಭಾಧ್ಯಕ್ಷ ಕೆ. ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಬಿಜೆಪಿ ಪುತ್ತೂರು ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss