Tuesday, August 16, 2022

Latest Posts

ಹುಲಿಯನ್ನು ಗುಂಡಿಟ್ಟು ಕೊಲ್ಲುವಂತೆ ಒತ್ತಾಯಿಸಿ ರೈತ ಸಂಘ ನಡೆಸುತ್ತಿರುವ ಪ್ರತಿಭಟನೆ ಮುಂದುವರಿಕೆ

ಹೊಸ ದಿಗಂತ ವರದಿ, ಮಡಿಕೇರಿ:

ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ವಿವಿಧೆಡೆ ಹಚ್ಚುತ್ತಿರುವ ಹುಲಿ ಹಾವಳಿಯನ್ನು ನಿಯಂತ್ರಿಸುವಂತೆ ಹಾಗೂ ನರಹಂತಕ ಹುಲಿಯನ್ನು ಗುಂಡಿಟ್ಟು ಕೊಲ್ಲುವಂತೆ ಒತ್ತಾಯಿಸಿ ರೈತ ಸಂಘ ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ.
ಕಾಫಿ ತೋಟದ ಕೆಲಸಕ್ಕೆಂದು ಬಂದಿದ್ದ ಗುಂಡ್ಲುಪೇಟೆ ಸಮೀಪದ ಬೇಗೂರು ಗ್ರಾಮದ ಮಹಾದೇವ ದಂಪತಿಯ ಪುತ್ರ ರಂಗಸ್ವಾಮಿ(8) ಎಂಬ ಬಾಲಕ ಸೋಮವಾರ ಬೆಳಗ್ಗೆ ಹುಲಿ ದಾಳಿಗೆ ಬಲಿಯಾಗಿದ್ದರೆ, ಆತನ ಅಜ್ಜ ಕೆಂಚ ಶೆಟ್ಟಿ(52) ಗಂಭೀರವಾಗಿ ಗಾಯಗೊಂಡು ಜೀವನ್ಮರಣದ ನಡುವೆ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದಕ್ಕೂ ಮುನ್ನ ಫೆ.20 ಹಆಗೂ 21ರಂದು ಇಬ್ಬರು ಹುಲಿ ದಾಳಿಗೆ ಬಲಿಯಾಗಿದ್ದು, ಹುಲಿಯನ್ನು ಸೆರಡ ಹಿಡಿಯುವಂತೆ ಒತ್ತಾಯಿಸಿ ಹಿಂದೆಯೂ ರೈತ ಸಂಘ ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು. ಆದರೆ ಹುಲಿ ಹಿಡಿಯುವ ನೆಪದಲ್ಲಿ ಬೇರೊಂದು ಹುಲಿಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದ್ದು, ಆ ಬಳಿಕವೂ ಜಾನುವಾರುಗಳ ಮೇಲೆ ಹುಲಿ ದಾಳಿ ಮುಂದುವರಿದಿತ್ತು. ಅಲ್ಲದೆ ಸೋಮವಾರ ಮತ್ತೊಂದು ಜೀವ ಹುಲಿಗೆ ಬಲಿಯಾಯಿತು.
ಇದರಿಂದ ಆಕ್ರೋಶಗೊಂಡಿರುವ ಸಾರ್ವಜನಿಕರು ಹಾಗೂ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಹುದಿಕೇರಿಯಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಲ್ಲದೆ, ಹುಲಿಯನ್ನು ಸೆರೆ ಹಿಡಿಯುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಘೋಷಿಸಿದ್ದರು.
ಅದರಂತೆ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಅವರ ನೇತೃತ್ವದಲ್ಲಿ ಸೋಮವಾರದಿಂದ ಅಹೋರಾತ್ರಿ ಪ್ರತಿಭಟನೆ ಮುಂದುವರಿದಿದ್ದು, ಇದೀಗ ಹುಲಿಯನ್ನು ಸೆರೆ ಹಿಡಿಯುವ ಬದಲು ಅದನ್ನು ಗುಂಡಿಕ್ಕಿ ಸಾಯಿಸಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ. ಹುಲಿಯನ್ನು ಸೆರೆ ಹಿಡಿದು ಮೃಗಾಲಯದಲ್ಲಿ ಬಿಡುವುದರಿಂದ ಈಗಾಗಲೇ ನರರ ರಕ್ತದ ರುಚಿ ಕಂಡಿರುವ ಹುಲಿ ಮತ್ತೆ ಅಲ್ಲಿನ ನೌಕರರ ಮೇಲೆ ದಾಳಿ ಮಾಡುವ ಸಾಧ್ಯತೆಗಳಿರುವುದರಿಂದ ಅದನ್ನು ಸಾಯಿಸಲೇಬೇಕೆಂಬ ಆಗ್ರಹ ಪ್ರತಿಭಟನಾಕಾರರಿಂದ ಕೇಳಿ ಬಂದಿದೆ.
ಮಂಗಳವಾರ ಸಂಜೆಯ ಒಳಗಾಗಿ ಹುಲಿಯನ್ನು ಸದೆ ಬಡಿಯದಿದ್ದಲ್ಲಿ ಬುಧವಾರದಿಂದ ಪ್ರತಿಭಟನೆಯನ್ನು ತೀವ್ರಗೊಳಿಸಲು ರೈತ ಸಂಘ ನಿರ್ಧರಿಸಿದ್ದು, ಅದರಂತೆ ಬುಧವಾರ ಬೆಳಗ್ಗೆ ಪೊನ್ನಂಪೇಟೆಯಿಂದ ಮತ್ತಿಗೋಡು ಆನೆ ಶಿಬಿರದವರೆಗೆ ವಾಹನ ಜಾಥಾ ನಡೆಸಿ,
ಅಲ್ಲಿ ಅಂತರರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದರೊಂದಿಗೆ ವನ್ಯಜೀವಿ ವಿಭಾಗದ ಕಚೇರಿಗೆ ಬೀಗ ಜಡಿಯುವ ತೀರ್ಮಾನಕ್ಕೆ ಬರಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss