Tuesday, July 5, 2022

Latest Posts

ಎಲ್ಲವೂ ದೈವೇಚ್ಛೆಯಂತೆ ನಡೆಯುತ್ತದೆಂದು ನಂಬಿದವನಿಗೆ ಕೊನೆಗೂ ಸಿಕ್ಕಿತು ಚಿನ್ನದ ಗಡಿಗೆ!

ಆ ಹಳ್ಳಿಯಲ್ಲಿ ರಾಮು ಎನ್ನು ದೈವಭಕ್ತನಿದ್ದ. ಏನೇ ಒಳ್ಳೆಯದಾಗಲಿ, ಏನೇ ಕೆಟ್ಟದ್ದಾದರು ಎಲ್ಲವೂ ದೈವೇಚ್ಛೆ ಎನ್ನುತ್ತ ಬದುಕುತ್ತಿದ್ದ.  ಕಷ್ಟ-ಸುಖ ಎರಡನ್ನೂ ಸಮವಾಗಿ ತೆಗೆದುಕೊಂಡ ಎಲ್ಲವೂ ದೈವೇಚ್ಛ ಎನ್ನುತ್ತ ಬದುಕುತ್ತಿದ್ದ.

ಒಂದು ದಿನ ರಾಮು ಕಾಡಿಗೆ ಸೌದೆ ತರಲೆಂದು ಹೋದಾಗ ಅಲ್ಲಿ ಅವನಿಗೆ ಚಿನ್ನದ ನಾಣ್ಯವಿರುವ ದೊಡ್ಡ ಗಡಿಗೆ ಕಂಡಿತು. ಆದರೆ ಆತ ಅದನ್ನು ಮುಟ್ಟಲಿಲ್ಲ. ” ಈ ಚಿನ್ನದ ನಾಣ್ಯದ ಗಡಿಗೆ ನನಗೆ ಸೇರಬೇಕೆಂಬುದು ದೈವೇಚ್ಛೆ ಆಗಿದ್ದರೆ  ನನ್ನ ಬಡ ಗುಡಿಸಲಿನ ಮುರುಕಲು ಮಂಚದ ಪಕ್ಕ ಬಂದಿರುತ್ತದೆ. ನಾನು ಇದನ್ನು ಮುಟ್ಟುವುದಿಲ್ಲ” ಎಂದು ಮನೆ ಕಡೆ ಹೋದ.

ಕಾಡಿನಲ್ಲಿ ರಾಮುಗೆ ಚಿನ್ನದ ನಾಣ್ಯದ ಗಡಿಗೆ ಕಂಡಿರುವುದು ಊರಿನಲ್ಲಿದ್ದ ಪುಂಡರ ಗುಂಪಿಗೆ ಗೊತ್ತಾಯಿತು. ಇವರು ಸೀದಾ ಕಾಡಿಗೆ ಹೋಗಿ ನಾಣ್ಯದ ಗಡಿಗೆಯನ್ನು ತೆಗೆದುಕೊಂಡು ಬಂದರು. ಆದರೆ ಇಷ್ಟಕ್ಕೆ ಇವರು ಸುಮ್ಮನಾಗಲಿಲ್ಲ.

“ಮಾತು ಮಾತಿಗೂ ದೈವೇಚ್ಛೆ ಎನ್ನುವ ರಾಮುಗೆ ಬುದ್ಧಿ ಕಲಿಸಬೇಕು. ಇಷ್ಟು ನಾಣ್ಯಗಳಿದ್ದರೂ ಒಂದನ್ನು ತೆಗೆದುಕೊಳ್ಳದೇ ಹಾಗೆಯೇ ಬಂದಿದ್ದಾನಲ್ಲ. ಇವನಿಂದ ಇವತ್ತೇನೋ ನಮಗೆ ಉಪಕಾರವಾಯಿತು. ಕೆಲವೊಮ್ಮೆ ಇವನ ದೈವೇಚ್ಛೆ ಎನ್ನುವ ಗುಣದಿಂದ ನಮಗೆ ಅಪಾಯವಾಗುವ ಸಾಧ್ಯತೆ ಇದೆ” ಎಂದು ರಾಮುಗೆ ಬುದ್ಧಿ ಕಲಿಸಲು ಮುಂದಾದರು.

ಚಿನ್ನದ ನಾಣ್ಯ ತುಂಬಿದ್ದ ಗಡಿಗೆಯಂತಹದೇ ಮತ್ತೊಂದು ಗಡಿಗೆಯನ್ನು ತಂದು ಅದರಲ್ಲಿ ಚೇಳುಗಳನ್ನು ತುಂಬಿದರು. ರಾಮು ನಿದ್ರೆ ಮಾಡುತ್ತಿರುವಾಗ ಆತನ ಗುಡಿಸಲಿನ ಮೇಲ್ಛಾವಣಿಯನ್ನು ತೆಗೆದು ಚೇಳು ತುಂಬಿದ್ದ ಗಡಿಗೆಯನ್ನು ರಾಮು ಮಲಗಿದ್ದ ಮಂಚದ ಮೇಲೆ ಬೀಳುವಂತ ತಲೆಕೆಳಗಾಗಿಸಿದರು.

ರಾಮುಗೆ ಮೈ ಮೇಲೆ ಏನೋ ಬಿದ್ದಂತಾಗಿ ತಕ್ಷಣ ಎಚ್ಚರವಾಯಿತು. ಚಿಮಣಿ ಹಚ್ಚಿ ನೋಡಿದ. ಮಂಚದ ತುಂಬ ಚಿನ್ನದ ನಾಣ್ಯ ಬಿದ್ದಿತ್ತು. ರಾಮು ಖುಷಿಯಿಂದ ಚಿನ್ನದ ನಾಣ್ಯಗಳು ಎಂದು ಕೂಗುತ್ತ ಸಂಭ್ರಮ ಪಟ್ಟ.

ಹೊರಗೆ ಕೇಕೆ ಹಾಕಿ ನಗುತ್ತಿದ್ದ ಪುಂಡರ ಗುಂಪಿಗೂ ರಾಮು ಚಿನ್ನದ ನಾಣ್ಯ ಎಂದು ಕೂಗಿದ್ದು ಕೇಳಿತು. ತಕ್ಷಣ ಅವರು ತಮ್ಮ ಬಳಿ ಇದ್ದ ಗಡಿಗೆಯನ್ನು ತೆಗೆದು ನೋಡಿದರು. ಕತ್ತಲಿನಲ್ಲಿ ಗೊತ್ತಾಗದೇ ಚೇಳಿನ ಗಡಿಗೆಯನ್ನು ತಮ್ಮಲ್ಲಿಯೇ ಇಟ್ಟುಕೊಂಡು ಚಿನ್ನದ ಗಡಿಗೆಯನ್ನು ರಾಮುವಿನ ಮೇಲೆ ಎರಚಿದ್ದರು.

ರಾಮು ಮಾತ್ರ ಎಲ್ಲವೂ ದೈವೇಚ್ಚೇ ಎನ್ನುತ್ತ ರಾತ್ರಿ ಇಡೀ ನಿದ್ದೆ ಮಾಡದೇ ಸಂಭ್ರಮಿಸುತ್ತಿದ್ದ.

“ನಿಮ್ಮಿಂದ ಇನ್ನೊಬ್ಬರಿಗೆ ಸಹಾಯ ಮಾಡೋದಕ್ಕೆ ಆಗೋದಿಲ್ಲ ಅಂದ್ರು ಪರವಾಗಿಲ್ಲ ಆದ್ರೆ ಅಪಾಯ ಮಾತ್ರ ಮಾಡಬೇಡಿ. ಕೆಲವೊಮ್ಮೆ ನೀವು ಇನ್ನೊಬ್ಬರಿಗೆ ಮಾಡಲು ಹೊರಟ ಅಪಾಯಗಳು ನಿಮಗೆ ಕಂಟಕವಾಗಬಹುದು. ಪ್ರಾಮಾಣಿಕತೆಯಿಂದ ಬದುಕಿದರೆ,  ಖಂಡಿತ ಆ ಬದುಕು ಸುಂದರವಾಗಿರುತ್ತದೆ”.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss