ಅವನು ದೊಡ್ಡ ವಜ್ರದ ವ್ಯಾಪಾರಿ. ಯಾವುದಕ್ಕೂ ಕೊರತೆ ಎಂಬುದಿರಲಿಲ್ಲ. ಗುಣವಂತ ಹೆಂಡತಿ, ವಿದ್ಯಾವಂತ ಮಕ್ಕಳು, ಐಷಾರಾಮಿ ಮನೆ, ಕಾರು ಎಲ್ಲವೂ ಇತ್ತು. ಆದರೆ ಅವನಿಗೆ ಒಂದೇ ಒಂದು ಸಮಸ್ಯೆ ಅಂದ್ರೆ ಆತನ ಮನೆಯಲ್ಲಿ ಇಲಿಗಳ ಕಾಟ ಸಿಕ್ಕಾಪಟ್ಟೆ ಇತ್ತು.
ಇಲಿಗಳನ್ನು ಕೊಲ್ಲೋದಕ್ಕೆ ಆತ ಮಾಡದ ಉಪಾಯಗಳಿಲ್ಲ, ಬಳಸದ ವಿಷಗಳಿಲ್ಲ. ಆದರೆ ಈತನ ಉಪಾಯಗಳು ಪ್ರತಿ ಸಲವು ಫೇಲ್ ಆಗುತ್ತಿತ್ತು. ಏನೇ ಮಾಡಿದರು ಮನೆಯಲ್ಲಿರುವ ಎಲ್ಲ ಇಳಿಗಳನ್ನು ಓಡಿಸೋದಕ್ಕೆ ಆಗುತ್ತಿರಲಿಲ್ಲ.
ಒಂದು ದಿನ “ಅಂಗಡಿಯಲ್ಲಿಟ್ಟರೆ ಸೇಫ್ ಅಲ್ಲ” ಎಂದು 10 ಕೋಟಿಗೆ ಬೆಲೆಬಾಳುವ ವಜ್ರವೊಂದನ್ನು ಮನೆಗೆ ತಂದು, ತಾನು ಮಲಗುವ ತಿಂಬಿನ ಕೆಳಗೆ ಇಟ್ಟಿರುತ್ತಾನೆ. ರಾತ್ರಿ ಆತ ಮಲಗಿದಾಗ ಇಲಿಯೊಂದು ಆತನ ರೂಮಿಗೆ ಬರುತ್ತದೆ. ಈತ ಕೋಲು ತಂದು ಇಲಿಯನ್ನು ಕೊಲ್ಲಲು ಮುಂದಾಗುತ್ತಾನೆ. ಗಾಬರಿಯಲ್ಲಿ ಇಲಿ ದಿಂಬಿನ ಕೆಳಗಿದ್ದ ವಜ್ರವನ್ನು ನುಂಗಿಬಿಡುತ್ತದೆ.
ಈತ ಇಲಿ ಕೊಲ್ಲುವುದನ್ನು ಬಿಟ್ಟು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುತ್ತಾನೆ. ಇಲಿ ತನ್ನ ಪಾಡಿಗೆ ತಾನು ಓಡಿ ಹೋಗುತ್ತದೆ.
ನಂತರ ಈ ಇಲಿಯನ್ನು ಕೊಂದು ಅದರ ಹೊಟ್ಟೆಯಲ್ಲಿರುವ ವಜ್ರವನ್ನು ಹೊರತೆಗೆಯುವುದಕ್ಕಾಗಿಯೇ ಈ ವ್ಯಾಪಾರಿ ಒಬ್ಬ ವ್ಯಕ್ತಿಯನ್ನು ನೇಮಿಸುತ್ತಾನೆ. ಆತ ಇಲಿಯನ್ನು ಕೊಲ್ಲಲು ಬಂದಾಗ ಸಾವಿರಾರು ಇಲಿಗಳು ಗುಂಪಾಗಿ ಕುಳಿತಿರುತ್ತವೆ. ಆತನಿಗೆ ಯಾವ ಇಲಿಯ ಹೊಟ್ಟೆಯಲ್ಲಿ ವಜ್ರವಿದೆ ಎಂದು ಗುರುತಿಸುವುದು ಕಷ್ವಾವಾಗುತ್ತದೆ.
ಆದರೆ ಹಿಂದಿರುಗಿ ನೋಡಿದಾಗ ಒಂದು ಇಲಿ ಮಾತ್ರ ಗುಂಪಿನಿಂದ ಹೊರಗೆ ಕುಳಿತಿರುತ್ತದೆ. ತಕ್ಷಣ ಆತ ಆ ಇಲಿಯನ್ನು ಕೊಲ್ಲುತ್ತಾನೆ. ಅದರ ಹೊಟ್ಟೆಯಲ್ಲಿ ವಜ್ರ ದೊರಕುತ್ತದೆ.
ವಜ್ರದ ವ್ಯಾಪಾರಿಗೆ ಬಹಳ ಆಶ್ಚರ್ಯವಾಗುತ್ತದೆ. “ಹೇಗೆ ವಜ್ರ ನುಂಗಿರುವುದು ಇದೇ ಇಲಿ ಎಂದು ಗೊತ್ತಾಯಿತು” ಎಂದು ಕೇಳುತ್ತಾನೆ. ಆಗ ಆತ ಸರಳವಾಗಿ ಉತ್ತರಿಸುತ್ತಾನೆ. “ಯಾವಾಗಲು ಶ್ರೀಮಂತ ಇತರರೊಂದಿಗೆ ಬೆರೆಯುವುದಿಲ್ಲ” ಎನ್ನುತ್ತಾನೆ.