ಒಂದು ಊರಿನಲ್ಲಿ ಒಬ್ಬ ವಿದ್ವಾಂಸನಿದ್ದ. ಆತ ಸಾಕಷ್ಟು ಓದಿಕೊಂಡಿದ್ದ. ತಲೆಯಲ್ಲಿ ಬೆಟ್ಟದಷ್ಟು ಜ್ಞಾನವಿತ್ತು. ಪುರಾಣ ಶಾಸ್ತ್ರ, ಮೀಮಾಂಸೆ, ತರ್ಕ, ವ್ಯಾಕರಣ ಪ್ರತಿಯೊಂದು ಅವನ ನಾಲಿಗೆ ತುದಿಯಲ್ಲಿತ್ತು.”ತನಗೆ ಜಗತ್ತಿನ ಎಲ್ಲ ವಿಷಯಗಳು ಗೊತ್ತಿದೆ” ಎಂಬ ಅಹಂ ಕೂಡ ಬೆಟ್ಟದಷ್ಟಿತ್ತು.
ಹೀಗಾಗಿ ದಾರಿಯಲ್ಲಿ ಯಾರೇ ಸಿಕ್ಕರು ಅವರಿಗೆ ತನ್ನ ಜ್ಞಾನದ ಪ್ರದರ್ಶನ ಮಾಡುತ್ತಿದ್ದ. ತನ್ನ ತರ್ಕದ ಜಾಲದಲ್ಲಿ ಅವರನ್ನು ಸಿಲುಕಿಸಿ ಅವಮಾನ ಮಾಡುತ್ತಿದ್ದ. ಮಾತು ಮಾತಿಗೂ ಜಗಳ ಕಾಯುತ್ತಿದ್ದ. ಹೀಗಾಗಿ ಆತ ವಿದ್ವಾಂಸ ದಾರಿಯಲ್ಲಿ ಬರುತ್ತಿದ್ದರೆ ಎಲ್ಲರು ತಲೆ ಬಗ್ಗಿಸಿಕೊಂಡು ಹೋಗುತ್ತಿದ್ದರು.
ಒಂದು ದಿನ ಹೀಗೆ ರೈತನೊಬ್ಬ ನೇಗಿಲು ಹೊತ್ತುಕೊಂಡು ವಿದ್ವಾಂಸ ಬರುತ್ತಿದ್ದ ದಾರಿಯಲ್ಲಿಯೇ ನಡೆದು ಹೋಗುತ್ತಿದ್ದ. ತಕ್ಷಣ ವಿದ್ವಾಂಸ ರೈತನನ್ನು ತಡೆದು “ಏನು ಮಾಡಿಕೊಂಡಿದ್ದೀಯಾ? ಎಂದು ಕೇಳಿದ. ಆತ “ನಾನು ಬಡ ರೈತ ಸ್ವಾಮಿ” ಎಂದು ಉತ್ತರಿಸಿದ.
“ನಿನಗೆ ವೇದಗಳ ಬಗ್ಗೆ ತಿಳಿದಿದೆಯೇ? ರಾಮಾಯಣ, ಮಹಾಭಾರತವಾದರೂ ಓದಿದ್ದೀಯಾ? ಹೋಗಲಿ ಅ,ಆ,ಇ,ಈ, ಆದರೂ ಬರೆಯಲು ಬರುತ್ತದೆಯೇ”? ಎಂದು ಪ್ರಶ್ನೆ ಮಾಡಿದ.
“ಇಲ್ಲ ಸ್ವಾಮಿ ನಮ್ಮ ಮನೆಯಲ್ಲಿ ತುಂಬಾ ಬಡವರು. ಹಾಗಾಗಿ ಶಾಲೆಗೆ ಹೋಗಲು ಆಗಲಿಲ್ಲ. ಚಿಕ್ಕವನಿರುವಾಗಿಂದಲೇ ಕೂಲಿ ಕೆಲಸ ಮಾಡುತ್ತಿದ್ದೆ. ನನ್ನ ಇಡೀ ಜೀವನವನ್ನು ಹೊಲದಲ್ಲಿಯೇ ಕಳೆದು ಹೋಯಿತು” ಎಂದು ಉತ್ತರಿಸಿದ.
“ಅಯ್ಯೋ ನಿನ್ನ ಅಜ್ಞಾನಕ್ಕೆ ಏನನ್ನಬೇಕು ತಿಳಿಯದು. ಇಡೀ ನಿನ್ನ ಜೀವನ ವ್ಯರ್ಥವಾಗಿ ಹೋಯಿತಲ್ಲ… ನೋಡು ನಾನು ತುಂಬಾ ತಿಳಿದುಕೊಂಡಿದ್ದೇನೆ. ಶಾಸ್ತ್ರ, ಪುರಾಣಗಳನ್ನು ಓದಿಕೊಂಡಿದ್ದೇನೆ. ಹಾಗಾಗಿ ಜನ ನನಗೆ ಇಷ್ಟು ಗೌರವ ಕೊಡುತ್ತಾರೆ” ಎಂದು ವಿದ್ವಾಂಸ ಹೇಳಿದ.
ಆಗ ನಗುತ್ತ ರೈತ ಹೇಳುತ್ತಾನೆ..“ನಿಜ ಸ್ವಾಮಿ ಜನ ನಿಮ್ಮಿಂದ ಜ್ಞಾನ ಹೆಚ್ಚಿಸುಕೊಳ್ಳುತ್ತಾರೆ, ತಿಳುವಳಿಕೆ ಪಡೆಯುತ್ತಾರೆ. ಆದರೆ ನೀವು ಕೂಡ ಹಸಿವೆಯಾದಾಗ ರೈತ ಬೆಳೆದ ಬೆಳೆಯನ್ನೇ ಉಣ್ಣಬೇಕು. ವಿದ್ವಾಂಸರಿರಲಿ, ಪಂಡಿತರಿರಲಿ ಹಸಿವನ್ನು ಯಾವ ಜ್ಞಾನವೂ ಹೊಟ್ಟೆ ತುಂಬಿಸುವುದಿಲ್ಲ. ರೈತನಿಲ್ಲದಿದ್ದರೆ ಜಗತ್ತು ನಡೆಯುವುದೇ ಇಲ್ಲ” ಎಂದು ಹೆಮ್ಮೆಯಿಂದ ಉತ್ತರಿಸಿ ಮುಂದೆ ಹೋದ