ಅಂಬೇಡ್ಕರ್‌ಗೆ ಅವಮಾನ : ಪ್ರಗತಿಪರ ದಲಿತ ಸಂಘಟನೆಗಳ ಪ್ರತಿಭಟನೆ

ದಿಗಂತ ವರದಿ ಚಿತ್ರದುರ್ಗ:

ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ರಾಯಚೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಪ್ರಗತಿಪರ ದಲಿತ ಸಂಘಟನೆಗಳ ಪದಾಧಿಕಾರಿಗಳು ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಡಿ.ಸಿ.ಕಚೇರಿ ತಹಶೀಲ್ದಾರ್ ಕೃಷ್ಣಕುಮಾರ್ ಮೂಲಕ ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಮನವಿ ಸಲ್ಲಿಸಿದರು.
ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಗಣರಾಜ್ಯೋತ್ಸವದಂದು ಡಾ.ಬಿ.ಆರ್.ಅಂಬೇಡ್ಕರ್ ಫೋಟೋ ತೆಗೆಸಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಅಪಚಾರವೆಸಗಿರುವ ನ್ಯಾಯಾಧೀಶ ಮಲ್ಲಿಕಾರ್ಜುನಗೌಡರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಿ ತನಿಖೆ ನಡೆಸಬೇಕು. ಯಾವ ಪುಂಡ, ಪೋಕರಿಗಳ ಕುಮ್ಮಕ್ಕಿನಿಂದ ಇಂತಹ ಅಮಾನವೀಯ ಕೃತ್ಯ ಎಸಗಲಾಗಿದೆ ಎನ್ನುವುದನ್ನು ಬಯಲಿಗೆಳೆಯಬೇಕು ಎಂದು ಒತ್ತಾಯಿಸಿದರು.
ಪ್ರಕರಣ ಕುರಿತು ಸೂಕ್ತ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಇಲ್ಲವಾದಲ್ಲಿ ಭಾರತದ ಪ್ರತಿ ಪ್ರಜೆಗೂ ಅವಮಾನಿಸಿದಂತಾಗುತ್ತದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗವನ್ನು ನೀಡಿರುವ ಸಂವಿಧಾನಶಿಲ್ಪಿಗೆ ಈ ರೀತಿ ಅವಮಾನವಾಗುವುದಾದರೆ ಇನ್ನು ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು?
ಭ್ರಷ್ಟಾಚಾರ ವಿರೋಧಿ ಆಂದೋಲನ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗ ಮಾತನಾಡಿ, ಜ.೨೬, ೧೯೫೦ ರಂದು ಗಣರಾಜ್ಯೋತ್ಸವ ಸಮರ್ಪಣಾ ದಿನವೆಂದು ಜನಸಾಮಾನ್ಯರಿಗೂ ತಿಳಿದಿರುವಾಗ ನ್ಯಾಯಾಧೀಶರ ಹುದ್ದೆಯಲ್ಲಿರುವ ಮಲ್ಲಿಕಾರ್ಜುನಗೌಡರಿಗೆ ಏಕೆ ಗಣರಾಜ್ಯೋತ್ಸವದ ಮಹತ್ವ ಗೊತ್ತಾಗಲಿಲ್ಲ. ಇದರ ಹಿಂದೆ ಯಾರ‍್ಯಾರ ಪಿತೂರಿ ಅಡಗಿದೆ ಎನ್ನುವುದು ಹೊರಬರಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ಭ್ರಷ್ಟಾಚಾರ ವಿರೋಧಿ ಆಂದೋಲನ ಜಿಲ್ಲಾಧ್ಯಕ್ಷ ನಗರಂಗೆರೆ ಶ್ರೀನಿವಾಸ್, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಸಿ.ನಿರಂಜನಮೂರ್ತಿ, ನ್ಯಾಯವಾದಿಗಳಾದ ವೆಂಕಟೇಶ್, ಸುರೇಶ್, ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಜಿ.ಅಶೋಕ್‌ಕುಮಾರ್, ನಾಗರಾಜ್ ಪಾಲವ್ವನಹಳ್ಳಿ, ಕೃಷ್ಣಮೂರ್ತಿ, ಸ್ಲಂ ಸಂಘಟನೆಯ ಮಂಜಣ್ಣ, ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆಯ ನರೇನಹಳ್ಳಿ ಅರುಣ್‌ಕುಮಾರ್, ರುದ್ರಮುನಿ, ಸೋಮು, ಮಹೇಶ್, ಸೋಮಣ್ಣ, ಕಣುಮೇಶ್, ಕೆ.ಎಸ್.ಆರ್.ಟಿ.ಸಿ.ಯ ಬಾಬುರಾಜ್, ಉಮೇಶ್ ಸೇರಿದಂತೆ ದಲಿತ ಸಂಘಟನೆಯ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!