ಹೊಸ ದಿಗಂತ ವರದಿ, ಕಲಬುರಗಿ:
ಪೊಗರು ಕನ್ನಡ ಚಲನಚಿತ್ರದಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಿರುವುದರ ವಿರುದ್ದ ಕಾನೂನು ಪ್ರಕಾರ ಕ್ರಮವನ್ನು ಜರುಗಿಸಿ ಕನ್ನಡ ಚಿತ್ರವನ್ನು ನಿರ್ಬಂಧಿಸಬೇಕೆಂದು ಜಿಲ್ಲಾ ಬ್ರಾಹ್ಮಣ ಸಮುದಾಯ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದೆ.
ಮಂಗಳವಾರ ಸಾವಿರಾರೂ ಸಂಖ್ಯೆಯಲ್ಲಿ ಡಿಸಿ ಕಚೇರಿಯತ್ತ ಪಾದಯಾತ್ರ ಮೂಲಕ ಆಗಮಿಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿ, ನಂದಕಿಶೋರ ನಿರ್ದೇಶನದ ಕನ್ನಡ ಪೊಗರು ಚಿತ್ರದಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಲಾಗಿದ್ದು, ನಿಜಕ್ಕೂ ಖಂಡನೀಯ ವಿಷಯವಾಗಿದೆ. ಇಂತಹ ಜಾತಿ ನಿಂದನೀಯ ಚಿತ್ರವನ್ನು ನಿರ್ದೇಶಿಸಿದ ನಂದಕಿಶೋರ ಮತ್ತು ಈ ವಿಷಯವಾಗಿ ನಿರ್ಲಕ್ಷತನ ತೋರಿದ ಸೆನ್ಸಾರ ಮಂಡಳಿ ಇವರ ವಿರುದ್ದ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಒಂದು ವೇಳೆ ಸದರಿ ಚಿತ್ರದಲ್ಲಿನ ಬ್ರಾಹ್ಮಣ ಸಮುದಾಯಕ್ಕೆ ಮಾಡಿರುವ ನಿರ್ದೇಶಕರ ವಿರುದ್ದ ಕ್ರಮ ಜರುಗಿಸದೇ ಇದ್ದಲ್ಲಿ, ಹಾಗೂ ಸದರಿ ಚಿತ್ರದಲ್ಲಿನ ಸನ್ನಿವೇಶವನ್ನು ತೆಗೆದ ಹಾಕದಿದ್ದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಜಿಲ್ಲಾ ಬ್ರಾಹ್ಮಣ ಸಮುದಾಯವೂ ಎಚ್ಚರಿಕೆಯನ್ನು ನೀಡಿ, ಮುಂದೆ ಆಗು ಹೋಗುಗಳಿಗೆ ನೀವೆ ಹೊಣೆಗಾರರು ಎಂದು ಪ್ರತಿಭಟನೆಯ ಮೂಲಕ ಎಚ್ಚರಿಕೆಯನ್ನು ನೀಡಿದೆ.
ಕೃಷ್ಣಾ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ಶ್ರೀಪಾದ ಜೋಶಿ, ಜಯತೀರ್ಥ, ವಾಸುದೇವರಾವ, ಚಂದ್ರಿಕಾ, ಸರೋಜಿನಿ, ಸುಲೋಚನಾ, ಸುಧಾಕರ, ವಿಜಯಕುಮಾರ, ಅಕ್ಷಯ ಕುಲಕರ್ಣಿ, ಪ್ರಹ್ಲಾದ್, ಪ್ರಸನ್ನ, ಗಿರಿಶ ಸೇರಿದಂತೆ ಅನೇಕ ಸಮುದಾಯದವರು ಇದ್ದರು.