ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋವಾದಲ್ಲಿ ನಡೆದ ಕಾರ್ಯಕ್ರಮವೊಂದರ ವೇಳೆ ನೀಡಿದ ಹೇಳಿಕೆ ಇದೀಗ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ಭಾರೀ ವಿವಾದವಾಗಿ ಪರಿಣಮಿಸಿದೆ. ಕಾಂತಾರ ಚಿತ್ರದಲ್ಲಿನ ದೈವದ ಪಾತ್ರವನ್ನು ಅನುಕರಿಸುವ ಭರದಲ್ಲಿ ಬಳಸಿದ ಪದಗಳಿಂದ ಅನೇಕ ಕನ್ನಡಿಗರ ಮತ್ತು ಧಾರ್ಮಿಕ ಭಕ್ತರ ಭಾವನೆಗೆ ಧಕ್ಕೆ ಉಂಟಾಗಿದೆ ಎಂಬ ಆರೋಪಗಳು ಕೇಳಿಬಂದ ನಂತರ ರಣವೀರ್ ಸಿಂಗ್ ಇದೀಗ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಕಾರ್ಯಕ್ರಮದ ವೇಳೆ ರಣವೀರ್ ಸಿಂಗ್, ಚಿತ್ರದ ನಾಯಕ ರಿಷಬ್ ಶೆಟ್ಟಿ ಅವರ ಅಭಿನಯವನ್ನು ಅನುಕರಿಸುವ ಪ್ರಯತ್ನದಲ್ಲಿ ದೈವವನ್ನು ದೆವ್ವದ ಎಂದು ಹೇಳಿದ್ದರು. ಈ ನಡೆಗೆ ಸಾಕಷ್ಟು ವಿರೋಧ ವ್ಯಕ್ತವಾದಿದ್ದು, ಸ್ವತಃ ರಿಷಬ್ ಶೆಟ್ಟಿ ಕೂಡ ಈ ರೀತಿಯ ಅನುಕರಣೆ ತಪ್ಪಿಸಬೇಕು ಎಂಬ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಆದರೂ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಕಾರಣವಾಯಿತು.
ವಿವಾದ ತೀವ್ರವಾಗುತ್ತಿದ್ದಂತೆಯೇ ರಣವೀರ್ ಸಿಂಗ್ ತಮ್ಮ ಇನ್ಸ್ಟಾಗ್ರಾಂ ಖಾತೆ ಮೂಲಕ ಸ್ಪಷ್ಟನೆ ನೀಡಿ ಕ್ಷಮೆಯಾಚಿಸಿದ್ದಾರೆ. ರಿಷಬ್ ಶೆಟ್ಟಿಯ ಅದ್ಭುತ ಅಭಿನಯವನ್ನು ಮೆಚ್ಚಿಕೊಂಡು ಮಾತ್ರವೇ ನಾನು ಅನುಕರಣೆ ಮಾಡಿದ್ದೆ, ಯಾವುದೇ ಧರ್ಮ, ಸಂಸ್ಕೃತಿ ಅಥವಾ ನಂಬಿಕೆಗೆ ಅವಮಾನ ಮಾಡುವ ಉದ್ದೇಶ ನನಗಿರಲಿಲ್ಲ. ನನ್ನ ಮಾತು ಅಥವಾ ನಡೆ ಯಾರ ಭಾವನೆಗೆ ನೋವು ತಂದಿದ್ದರೆ ನಾನು ಹೃದಯಪೂರ್ವಕವಾಗಿ ಕ್ಷಮೆ ಕೇಳುತ್ತೇನೆ ಎಂದು ರಣವೀರ್ ಸಿಂಗ್ ಹೇಳಿದ್ದಾರೆ. ಈ ಕ್ಷಮೆಯಾಚನೆಯ ನಂತರವೂ ಈ ವಿಷಯದ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ ಮುಂದುವರಿದಿದೆ.

