ಸುಲಭದಲ್ಲಿ ಆಗಿಲ್ಲ ಕರ್ನಾಟಕದ ಏಕೀಕರಣ- ನೀವು ತಿಳಿದಿರಬೇಕಾದ ಸಂಕ್ಷಿಪ್ತ ಇತಿಹಾಸ ಇಲ್ಲಿದೆ..

ರಾಜ್ಯಾದ್ಯಂತ ಇಂದು ಸಂಭ್ರಮದ ಕರ್ನಾಟಕ ರಾಜ್ಯೋತ್ಸವ ಆಚರಣೆ ನಡೆಯುತ್ತಿದೆ. ಕನ್ನಡಕ್ಕಾಗಿ ನೂರು ಅಭಿಯಾನ, ಚಳವಳಿಗಳು ನಡೆಯುತ್ತಿವೆ, ಕನ್ನಡ ಬಳಕೆ ಹೆಚ್ಚಾಗಲಿ ಎಂಬ ಕೂಗು ಎಲ್ಲೆಡೆ ಮೊಳಗಿದೆ. ಕನ್ನಡಿಗರೆಲ್ಲಾ ಇಂದು ಒಟ್ಟಿಗೇ ಇದ್ದೇವೆ ಎಂದರೆ, ಇದಕ್ಕೆ ಕಾರಣ ಕರ್ನಾಟಕದ ಏಕೀಕರಣ. ಕರ್ನಾಟಕ ಏಕೀಕರಣ ಸುಲಭವಾಗಿ ಆದದ್ದಲ್ಲ, ಅಲ್ಲಿಯೂ ಸಾಕಷ್ಟು ಹೋರಾಟಗಳಿವೆ. ಕರ್ನಾಟಕದ ಏಕೀಕರಣದ ಇತಿಹಾಸ ಹೀಗಿದೆ ನೋಡಿ..

ಸ್ವಾತಂತ್ರ್ಯಾನಂತರ ಕರ್ನಾಟಕ ಏಕೀಕರಣಕ್ಕೆ ಸಾಕಷ್ಟು ಪ್ರಯತ್ನಗಳು ನಡೆಯುತ್ತಿದ್ದವು. ಕರ್ನಾಟಕದಲ್ಲಿ ಸ್ವಾತಂತ್ರ್ಯಕ್ಕಾಗಿ ಚಳವಳಿ ಆರಂಭವಾದಾಗ, ಏಕೀಕರಣಕ್ಕಾಗಿಯೂ ಚಳವಳಿ ಆರಂಭವಾಯಿತು. ಸ್ವಾತಂತ್ರ್ಯ ಮುನ್ನ ಕರ್ನಾಟಕವು, ಮೈಸೂರು ರಾಜ್ಯ, ಮದ್ರಾಸ್ ಪ್ರೆಸಿಡೆನ್ಸಿ, ಬಾಂಬೆ ಪ್ರೆಸಿಡೆನ್ಸಿ, ನಿಜಾಮ ರಾಜ್ಯ, ಕೊಡಗು, ಇತ್ಯಾದಿಗಳಂತಹ 20  ವಿವಿಧ ಆಡಳಿತಗಳಲ್ಲಿ ಹಂಚಿಹೋಗಿತ್ತು.

ಧಾರವಾಡ ಏಕೀಕರಣ ಚಳವಳಿಯ ಕೇಂದ್ರವಾಗಿತ್ತು. ಆಲೂರು ವೆಂಕಟರಾವ್ ಈ ಚಳವಳಿಯ ರೂವಾರಿಯಾಗಿದ್ದರು. ಇವರು ಮುದವೀಡು ಕೃಷ್ಣರಾವ್, ಕಡಪಾ ರಾಘವೇಂದ್ರರಾವ್, ಗದಿಗಯ್ಯ ಹೊನ್ನಾಪುರಮಠ ಅವರಂಥ ಬೆಂಬಲಿಗರನ್ನು ಹೊಂದಿದ್ದರು. ಇವರೆಲ್ಲರ ಪ್ರಯತ್ನದಿಂದ ಭಾಗಶಃ ಬೆಂಗಳೂರಿನಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು. ಬರಹಗಾರರು, ಬುದ್ಧಿಜೀವಿಗಳು ಇದನ್ನು ವೇದಿಕೆಯಾಗಿ ಬಳಸಿಕೊಂಡರು.

1947 ರಲ್ಲಿ ಕರ್ನಾಟಕ ಏಕೀಕರಣ ಮಹಾ ಸಮಿತಿಗೆ ಎಸ್. ನಿಜಲಿಂಗಪ್ಪ ಅವರು ಅಧ್ಯಕ್ಷರಾದರು. ಇನ್ನು ಎ.ಜೆ. ದೊಡ್ಡಮೇಟಿ ಮತ್ತು ಮಂಗಳವೇಡೆ ಶ್ರೀನಿವಾಸ ರಾವ್ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದರು.

ನಂತರ 1952 ರಲ್ಲಿ ಇದನ್ನು ಕರ್ನಾಟಕ ಏಕೀಕರಣ ಸಂಘ ಎಂದು ಮರುನಾಮಕರಣ ಮಾಡಲಾಯಿತು. ಆದರೆ ಈ ವಿಷಯವನ್ನು ಪರಿಶೀಲಿಸಲು ಕೇಂದ್ರ ಧಾರ್ ಸಮಿತಿಯನ್ನು ನೇಮಿಸಿತ್ತು. ಸಮಿತಿ ಪ್ರತಿಕೂಲ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿತ್ತು.

1953ರಲ್ಲಿ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು ಸ್ಥಾಪನೆಯಾಯಿತು. ಈ ಹೊಸ ಪಕ್ಷವನ್ನು ಕಟ್ಟಿದ್ದು ಕೆ.ಆರ್. ಕಾರಂತರು, ಇವರು ದೊಡ್ಡ ಸತ್ಯಾಗ್ರಹ ಆರಂಭಿಸಿದರು. ಇದರಿಂದಾಗಿ ಐದು ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು.

ಜಿನರಾಜ ಹೆಗ್ಡೆ, ಚನ್ನಪ್ಪ ವಾಲಿ,ಚಿನ್ಮಯಸ್ವಾಮಿ, ಓಂಕಾರಮಠ ಮುಂತಾದ ಮುಖಂಡತರು ಈ ಪರಿಷತ್ತಿನ ಸದಸ್ಯರಾಗಿದ್ದರು. 1953ರಲ್ಲಿ ಫೈಜಲ್ ಅಲಿ ಆಯೋಗ ನೇಮಿಸಲಾಗಿತ್ತು. ಇದರ ಶಿಫಾರಸಿನ ನಂತರ ಭಾಷಾವಾರು ಏಕೀಕೃತ ಮೈಸೂರು ರಾಜ್ಯ( ಕರ್ನಾಟಕ) ನವೆಂಬರ್ 1, 1956ರಂದು ಅಸ್ತಿತ್ವಕ್ಕೆ ಬಂದಿತು. ಎಸ್. ನಿಜಲಿಂಗಪ್ಪ ಮುಖ್ಯಮಂತ್ರಿಯಾದರು. ನಂತರ ಡಿ. ದೇವರಾಜ್ ಅರಸರ ಆಳ್ವಿಕೆಯಲ್ಲಿ ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಡಲಾಯಿತು, 1973ರಲ್ಲಿ ಕನ್ನಡಿಗರ ಬಹುಕಾಲದ ಆಕಾಂಕ್ಷೆ ನಿಜವಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!