ಹೊಸದಿಗಂತ ವರದಿ ಹುಬ್ಬಳ್ಳಿ :
ಸರಕಾರಿ ನೌಕರರಿಗೆ 7ನೇ ವೇತನ ಆಯೋಗದ ಮಧ್ಯಂತರ ವರದಿ ಸಿದ್ದಪಡಿಸುತ್ತಿದ್ದು, ವರದಿ ಬಂದ ತಕ್ಷಣ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಕುರಿತು ಈಗಾಗಲೇ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ. ನೌಕರರ ಬೇಡಿಕೆಗಳನ್ನು ಈಡೇರಿಸಲು ಸಿದ್ದರಿಗಿದ್ದೇವೆ. ಆಯೋಗದ ವರದಿ ಅನುಷ್ಠಾನಕ್ಕೆ ಹಣ ಮೀಸಲಿರಿಸಿದ್ದು, ಪ್ರಸ್ತಕ ಸಾಲಿನಲ್ಲೇ ಜಾರಿಗೆ ತರಲಾಗುವುದು ಎಂದರು.
ಮೋದಿ ಹಾಗೂ ಶಾ ಅವರು ಚುನಾವಣಾ ಏಜೆಂಟ್ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಪ್ರತಿಕ್ರಿಯಿಸಿದ ಸಿಎಂ, ರಾಜ್ಯಕ್ಕೆ ರಾಹುಲ್ ಗಾಂಧಿ ಹಾಗೂ ಇತರರು ಬಂದು ಹೋಗುತ್ತಿದ್ದಾರೆ. ಹಾಗಾದರೆ ಅವರು ಚುನಾವಾಣ ಏಜೆಂಟರಾ ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ ಶಾ ಸೇರಿದಂತೆ ಅನೇಕ ನಾಯಕರು ರಾಜ್ಯಕ್ಕೆ ಬರುತ್ತಿರುವುದರಿಂದ ಕಾಂಗ್ರೆಸ್ ನಾಯಕರು ಹತಾಷೆಗೊಂಡಿದ್ದಾರೆ. ಭ್ರಮನಿರಸಗೊಂಡಿರುವ ಸಿದ್ದರಾಯಮಯ್ಯ ಅವರು ಬೇಕಾ ಬಿಟ್ಟಿಯಾಗಿ ಹೇಳಿಕೆ ನೀಡುತ್ತಿದ್ದಾರೆ. ಪ್ರಧಾನಿ, ಗೃಹಸಚಿವರಿಗೆ ಚುನಾವಣೆ ಏಜೆಂಟ್ ಎಂದು ಹಗುರವಾಗಿ ಮಾತನಾಡುವುದು ಮಾಜಿ ಮುಖ್ಯಮಂತ್ರಿಯಾದವರಿಗೆ ಶೋಭೆಯಲ್ಲ ಎಂದು ಮಾತನಾಡಿದರು.