ಬಿಬಿಸಿಯ ಮೋದಿ ಅಪಪ್ರಚಾರ ವಿರೋಧಿಸಿದ್ದಕ್ಕೆ ಕಾಂಗ್ರೆಸ್ಸಿನಲ್ಲಿ ಅಸಹಿಷ್ಣುತೆ, ರಾಜಿನಾಮೆ ಕೊಟ್ಟ ಆ್ಯಂಟನಿ ಮಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇತ್ತೀಚೆಗಷ್ಟೇ ಗೋಧ್ರಾ ಹತ್ಯಾಕಾಂಡದ ಕುರಿತಾಗಿ ಬಿಬಿಸಿ ಹೊರತಂದಿರುವ ಸಾಕ್ಷ್ಯ ಚಿತ್ರವನ್ನು ಸರ್ಕಾರ ನಿಷೇಧಿಸಿರುವ ಬಗ್ಗೆ ದೇಶದಾದ್ಯಂತ ಪರ ವಿರೋಧಗಳು ಚರ್ಚೆಯಾಗುತ್ತಿವೆ. ವಿರೋಧ ಪಕ್ಷ ಕಾಂಗ್ರೆಸ್‌ ಇದನ್ನು ಮೋದಿ ಸರ್ಕಾರವನ್ನು ಹಣಿಯಲು ಬಳಸಿಕೊಳ್ಳುತ್ತಿದೆ. ಆದರೆ ಇದರ ಕುರಿತು ಈಗ ಕಾಂಗ್ರೆಸ್ಸಿನಲ್ಲೇ ಪರ ವಿರೋಧ ಚರ್ಚೆಗಳು ಎದ್ದಿದ್ದು, ಬಿಬಿಸಿಯ ಈ ಸಾಕ್ಷ್ಯ ಚಿತ್ರವನ್ನು ಖಂಡಿಸಿದ್ದಕ್ಕಾಗಿ ಮಾಜಿ ರಕ್ಷಣಾ ಸಚಿವ ಎಕೆ ಆ್ಯಂಟನಿಯವರ ಪುತ್ರ ಅನಿಲ್‌ ಆ್ಯಂಟನಿ ರಾಜೀನಾಮೆ ನೀಡಿರುವ ಘಟನೆ ವರದಿಯಾಗಿದೆ.

ಅಸಲಿಗೆ ನಡೆದದ್ದೇನೆಂದರೆ ಕೇರಳ ಕಾಂಗ್ರೆಸ್‌ ನ ಸಾಮಾಜಿಕ ಮಾಧ್ಯಮ ಕೋಶದ ಸದಸ್ಯರಾಗಿದ್ದ ಮಾಜಿ ರಕ್ಷಣಾ ಸಚಿವ ಆ್ಯಂಟನಿಯವರ ಪುತ್ರ ಅನಿಲ್‌ ಆ್ಯಂಟನಿ ಅವರು ಮೋದಿಯವರ ಕುರಿತು ಅಪಪ್ರಚಾರ ಮಾಡುವ ದುರುದ್ದೇಶದಿಂದ ಬಿತ್ತರವಾಗಿದ್ದ ಬಿಬಿಸಿಯ ಸಾಕ್ಷ್ಯ ಚಿತ್ರವನ್ನು ಖಂಡಿಸಿದ್ದರು. ಬಿಬಿಸಿಯು ಭಾರತದ ವಿಷಯದಲ್ಲಿ ಮುಂಚಿನಿಂದಲೂ ಪೂರ್ವಾಗ್ರಹ ಪೀಡಿತವಾಗಿದೆ. ಈ ರೀತಿ ಪೂರ್ವಾಗ್ರಹ ಪೀಡಿತವಾದವುಗಳು ಈ ದೇಶದ ಸಾರ್ವಭೌಮತ್ವಕ್ಕೆ ಅಪಾಯಕಾರಿ ಎಂದು ಟ್ವೀಟ್‌ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.

ಅವರ ಈ ಹೇಳಿಕೆಯು ಕೇರಳ ಕಾಂಗ್ರೆಸ್‌ ಈ ವಿಷಯದಲ್ಲಿ ತಳೆದಿರುವ ನಿಲುವಿಗೆ ವಿರುದ್ಧವಾಗಿತ್ತು. ಈ ಸಾಕ್ಷ್ಯ ಚಿತ್ರವನ್ನು ಕೇರಳದಲ್ಲಿ ಪ್ರದರ್ಶಿಸುವುದಾಗಿ ಕೇರಳ ಕಾಂಗ್ರೆಸ್ ಘೋಷಿಸಿತ್ತು. ಆದರೆ ಕೇರಳ ಕಾಂಗ್ರೆಸ್ಸಿನ ಉನ್ನತ ಸ್ಥಾನದಲ್ಲಿರುವ ಅನಿಲ್‌ ಆ್ಯಂಟನಿ ಈ ರೀತಿಯಾಗಿ ಹೇಳಿದ್ದು ಪಕ್ಷಕ್ಕೆ ಮುಜುಗರವನ್ನುಂಟು ಮಾಡಿತ್ತು. ಹಾಗಾಗಿ ಅವರ ಈ ಟ್ವೀಟ್‌ ಗೆ ಕೇರಳ ಕಾಂಗ್ರೆಸ್ಸಿನಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಟ್ವೀಟ್‌ ಅನ್ನು ಅಳಿಸುವಂತೆ ಅನಿಲ್‌ ಆ್ಯಂಟನಿಅವರಿಗೆ ಬಹಳಷ್ಟು ಕರೆಗಳು ಬಂದಿದ್ದವು. ಇದನ್ನು ಉಲ್ಲೇಖಿಸಿರುವ ಅನಿಲ್‌ ಆ್ಯಂಟನಿ ಈಗ ತಮ್ಮ ಕಾಂಗ್ರೆಸ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಟ್ವೀಟ್‌ ಮೂಲಕ ತಮ್ಮ ರಾಜೀನಾಮೆ ಪತ್ರವನ್ನು ಹಂಚಿಕೊಂಡಿರುವ ಎಕೆ ಆ್ಯಂಟನಿ ಪುತ್ರ ಅನಿಲ್‌ ಆ್ಯಂಟನಿಯವರು “ನನಗೆ ಬಹಳಷ್ಟು ಬೆದರಿಕೆ ಕರೆಗಳು ಬಂದಿವೆ. ವಿಶೇಷವಾಗಿ ಕಾಂಗ್ರೆಸ್ಸಿನವರಿಂದಲೇ ಟ್ವೀಟ್‌ ಅನ್ನು ಅಳಿಸುವಂತೆ ಅಸಹಿಷ್ಣುತೆಯ ಕರೆಗಳು ಬಂದಿವೆ. ಇದು ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ಹಾಗಾಗಿ ನಾನು ನನ್ನ ಕಾಂಗ್ರೆಸ್‌ ಜವಾಬ್ದಾರಿಗೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಉಲ್ಲೇಖಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!