ಪ್ಲೇ ಆಫ್‌ ನಲ್ಲಿ ಆರ್ಸಿಬಿಗೆ ಬಲಿಷ್ಠ ಎದುರಾಳಿ: ಪಂದ್ಯ ಎಲ್ಲಿ? ಫೈನಲ್‌ ಪ್ರವೇಶ ಹೇಗೆ? ಮಾಹಿತಿ ಇಲ್ಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಐಪಿಎಲ್ 2022ರ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಇಂದು ಪಂಜಾಬ್‌ ಕಿಂಗ್ಸ್‌ ಹಾಗೂ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡಗಳು ಮುಖಾಮುಖಿಯಾಗುತ್ತಿವೆ. ಈಗಾಗಲೇ ನಾಲ್ಕು ಪ್ಲೇ ಆಫ್‌ ಸ್ಥಾನಗಳು ಖಚಿತವಾಗಿದ್ದು ಇದೊಂದು ಔಪಚಾರಿಕ ಪಂದ್ಯವಾಗಿರಲಿದೆ.
ಡೆಲ್ಲಿ ವಿರುದ್ಧ ಮುಂಬೈ ಗೆದ್ದಿದ್ದರಿಂದ ಆರ್ಸಿಬಿ ನಾಲ್ಕನೇ ತಂಡವಾಗಿ ಪ್ಲೇ ಆಫ್‌ ಗೆ ಎಂಟ್ರಿ ಕೊಟ್ಟಿದೆ. ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಪ್ಲೇ ಆಫ್‌ ಪ್ರವೇಶಿಸಿರುವ ಇತರ ಮೂರು ತಂಡಗಳು. ಮೇ 25 ರಂದು ಕೋಲ್ಕತ್ತಾದ ಈಡನ್‌ ಗಾರ್ಡನ್‌ ಕ್ರೀಡಾಂಗಣ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಬಳಗ ಕೆ.ಎಲ್‌ ರಾಹುಲ್‌ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಹೋರಾಡಲಿದೆ. ಆರ್ಸಿಬಿ ಫೈನಲ್‌ ಪ್ರವೇಶಿಸಬೇಕಾದರೆ ಈ ಪಂದ್ಯವನ್ನು ಗೆಲ್ಲಬೇಕು. ಆನಂತರ ಕ್ವಾಲಿಫೈಯರ್ 2 ನಲ್ಲಿ ಮತ್ತೊಂದು ಪಂದ್ಯವನ್ನು ಗೆಲ್ಲಬೇಕು. ಈ ಎರಡೂ ಪಂದ್ಯಗಳನ್ನು ಗೆದ್ದರಷ್ಟೇ ಆರ್ಸಿಬಿಗೆ ಫೈನಲ್‌ ಪ್ರವೇಶ ಸಿಗಲಿದೆ.
ಮತ್ತೊಂದೆಡೆ ಲೀಗ್‌ ಹಂತದ ಅಗ್ರಸ್ಥಾನಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ದ್ವಿತೀಯ ಸ್ಥಾನಿ ರಾಜಸ್ತಾನ್‌ ರಾಯಲ್ಸ್‌ ತಂಡವನ್ನು ಕ್ವಾಲಿಫೈಯರ್ 1 ನಲ್ಲಿ ಎದುರಿಸಲಿದೆ. ಈ ಪಂದ್ಯ ಈಡನ್‌ ಗಾರ್ಡನ್ಸ್‌ ನಲ್ಲಿ ಮೇ 24 ರಂದು ನಡೆಯಲಿದೆ. ಈ ಪಂದ್ಯದಲ್ಲಿ ಸೋತ ತಂಡಕ್ಕೆ ಮತ್ತೊಂದು ಅವಕಾಶವಿದ್ದು, ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ಆರ್ಸಿಬಿ ಅಥವಾ ಲಖನೌ ತಂಡವನ್ನು ಮೇ 27 ರಂದು ಕ್ವಾಲಿಫೈಯರ್ 2 ನಲ್ಲಿ ಎದುರಿಸಲಿದೆ. ಮೇ 29 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕ್ವಾಲಿಫೈಯರ್ 1 ಮತ್ತು ಕ್ವಾಲಿಫೈಯರ್ 2 ವಿಜೇತರ ನಡುವೆ ಫೈನಲ್ ನಡೆಯಲಿದೆ.

ಪಂದ್ಯದ ಅವಧಿ:
ಕ್ವಾಲಿಫೈಯರ್‌ ಮತ್ತು ಎಲಿಮಿನೇಟರ್‌ ಪಂದ್ಯಗಳು ನಿಗದಿತ ಅವಧಿಯಂತೆ 7.30ಕ್ಕೆ ನಡೆಯಲಿವೆ. ಆದರೆ ಮೇ 29ರಂದು ಅಹಮದಾಬಾದ್‌ನಲ್ಲಿ ನಡೆಯುವ ಫೈನಲ್‌ ಪಂದ್ಯ ರಾತ್ರಿ 8 ಗಂಟೆಗೆ ಪ್ರಾರಂಭವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!