IPL 2023 Auction: ಈ ಮೂವರು ಆಲ್ ರೌಂಡರ್‌ಗಳ ಮೇಲಿದೆ ಎಲ್ಲಾ ತಂಡಗಳ ಕಣ್ಣು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜು ಪ್ರಕ್ರಿಯೆಗೆ ಕೇರಳದ ಕೊಚ್ಚಿಯಲ್ಲಿ ಕ್ಷಣಗಣನೆ ಆರಂಭವಾಗಿದೆ. ಎಲ್ಲಾ 10 ಫ್ರಾಂಚೈಸಿಗಳು ತಾವು ಖರೀದಿಸಲು ಇಚ್ಛಿಸುವ ಆಟಗಾರರ ಪಟ್ಟಿಯೊಂದಿಗೆ ಕೊಚ್ಚಿಗೆ ಬಂದಿಳಿದಿದ್ದಾರೆ. ಮಿನಿ ಹರಾಜಿಗೆ 405 ಆಟಗಾರರನ್ನು ಶಾರ್ಟ್‌ ಲಿಸ್ಟ್ ಮಾಡಲಾದೆ. 273 ಭಾರತೀಯರು ಮತ್ತು 132 ವಿದೇಶಿ ಆಟಗಾರರು ಇಂದು ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ. ಆಲ್ರೌಂಡರ್‌ ಗಳಿಗೆ ಹರಾಜಿನಲ್ಲಿ ಹೆಚ್ಚಿನ ಮೌಲ್ಯ ಸಿಗುವ ನಿರೀಕ್ಷೆ ಇದೆ. ಅದರಲ್ಲೂ ವಿಶ್ವ ಕ್ರಿಕೆಟ್‌ ನಲ್ಲಿ ಹಲವಾರು ದಾಖಲೆಗಳನ್ನು ಧೂಳಿಪಟ ಮಾಡಿರುವ ಮೂವರು ಪ್ರಖ್ಯಾತ ಆಲ್ರೌಂಡರ್‌ ಗಳು ಇಂದಿನ ಹರಾಜು ಕಣದಲ್ಲಿದ್ದು, ಕೋಟಿ ಕೋಟಿ ಹಣ ಬಾಚಿಕೊಳ್ಳಲಿದ್ದಾರೆ. ಐಪಿಎಲ್ 2023 ರಲ್ಲಿ ಬಹುತೇಕ ಎಲ್ಲಾ ತಂಡಗಳು ಕಣ್ಣಿಟ್ಟಿರುವ ಮೂವರು ಆಲ್ ರೌಂಡರ್‌ಗಳ ಪಟ್ಟಿ ಕೆಳಗಿನಂತಿದೆ.

ಬೆನ್ ಸ್ಟೋಕ್ಸ್ (ಮೂಲ ಬೆಲೆ: 2 ಕೋಟಿ):

ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಬೆನ್ ಸ್ಟೋಕ್ಸ್ IPL 2023ರ ಹರಾಜಿನ ಅತಿದೊಡ್ಡ ಖರೀದಿಗಳಲ್ಲಿ ಒಬ್ಬರಾಗುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. 2018 ರ ಐಪಿಎಲ್ ಹರಾಜಿನಲ್ಲಿ ಆಲ್ ರೌಂಡರ್ ಅತ್ಯಂತ ದುಬಾರಿ ಆಟಗಾರನಾಗಿದ್ದರು. ಆಗ ಅವರನ್ನು ರಾಜಸ್ಥಾನ್ ರಾಯಲ್ಸ್ 12.5 ಕೋಟಿ ನೀಡಿ ಖರೀದಿಸಿತ್ತು. ಸ್ಟೋಕ್ಸ್ ವಿಶ್ವ ಕ್ರಿಕೆಟ್ ನ ಮ್ಯಾಚ್‌ ವಿನ್ನರ್‌ ಎಂದು ಖ್ಯಾತರಾಗಿದ್ದಾರೆ. ಪಂದ್ಯದ ಯಾವುದೇ ಹಂತದಿಂದ ತಂಡವನ್ನು ಗೆಲುವಿನ ಕಡೆ ಮುನ್ನಡೆಸುವ ತಾಕತ್ತು ಹೊಂದಿರುವ ಸ್ಟೋಕ್ಸ್‌ ಈ ಹರಾಜಿನ ಹಾಟ್‌ ಫೇವರಿಟ್‌ ಆಟಗಾರ. ಜೊತೆಗೆ ಸ್ಟೋಕ್ಸ್ ಉತ್ತಮ ನಾಯಕತ್ವದ ಸಾಮರ್ಥ್ಯಗಳನ್ನು ಸಹ ಹೊಂದಿರುವುದರಿಂದ ಎಲ್ಲಾ ಪ್ರಾಂಚೈಸಿಗಳ ಕಣ್ಣು ಅವರ ಮೇಲಿದೆ.
ಸ್ಟೋಕ್ಸ್ ಕಳೆದ ವರ್ಷ ಮಾನಸಿಕ ಆರೋಗ್ಯದ ಮೇಲೆ ಗಮನ ಕೇಂದ್ರೀಕರಿಸಲು ಬಯಸಿದ್ದರಿಂದ ಐಪಿಎಲ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ವರ್ಷದ ಸ್ಟೋಕ್ಸ್‌ ಹಾಗೂ ಅವರನ್ನು ಕೊಳ್ಳುವ ಪ್ರಾಂಚೈಸಿ ಇಬ್ಬರಿಗೂ ಜಾಕ್‌ ಪಾಟ್‌ ಹೊಡೆಯುವುದು ಖಚಿತ.

ಶಕೀಬ್ ಅಲ್ ಹಸನ್ (ಮೂಲ ಬೆಲೆ: INR 1.5 ಕೋಟಿ):

ಬಾಂಗ್ಲಾದೇಶದಿಂದ ಹೊರಹೊಮ್ಮಿದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾದ ಶಕೀಬ್ ಅಲ್ ಹಸನ್ ಅವರು ತಮ್ಮ ಸುಧೀರ್ಘ ಕ್ರಿಕೆಟ್ ವೃತ್ತಿಜೀವನದಲ್ಲಿ ಹಲವಾರು ತಂಡಗಳ ಬೆನ್ನೆಲುಬಾಗಿದ್ದಾರೆ. ಬಾಂಗ್ಲಾ ಆಲ್ ರೌಂಡರ್ ತನ್ನ ಸ್ಥಿರತೆ, ನಿಖರತೆ ಮತ್ತು ಆಕ್ರಮಣಶೀಲತೆಗೆ ಹೆಸರುವಾಸಿಯಾಗಿದ್ದಾರೆ. ಶಕೀಬ್‌ ಪರಿಪೂರ್ಣ ಬ್ಯಾಟ್ಸ್ಮನ್‌ ಸಹ ಆಗಿರುವುದು ಅವರ ಬೇಡಿಕೆಯನ್ನು ದ್ವಿಗುಣಗೊಳಿಸಿದೆ. ಶಕೀಬ್ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಅನ್ನು ಪ್ರತಿನಿಧಿಸಿದ್ದಾರೆ. ಅವರ ಸರಿಸಾಟಿಯಿಲ್ಲದ ಅನುಭವ ಮತ್ತು ಒತ್ತಡದ ಸಂದರ್ಭಗಳಲ್ಲಿ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯಕ್ಕಾಗಿ ಅವರನ್ನು ತಮ್ಮ ತಂಡಕ್ಕೆ ಕರೆತರಲು ಬಹಳಷ್ಟು ತಂಡಗಳು ಬಯಸುತ್ತವೆ. ಜೊತೆಗೆ ಹಾರಾಜಿನಲ್ಲಿ ಆಫ್‌ ಸ್ಪಿನ್ನರ್‌ ಆಲ್ರೌಂಡರ್‌ ಗಳ ಸಂಖ್ಯೆ ಕಡಿಮೆ ಇರುವುದರಿಂದ ಶಕೀಬ್‌ ಹಲವಾರು ಕೋಟಿಗೆ ಬಿಕರಿಯಾಗುವ ಸಾಧ್ಯತೆಗಳಿವೆ.

ಸ್ಯಾಮ್ ಕರ್ರನ್ (ಮೂಲ ಬೆಲೆ: 2 ಕೋಟಿ):

ICC ಪುರುಷರ T20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ಗೆಲುವಿನ ಸೌಧಕ್ಕೆ ಅಡಿಪಾಯ ಹಾಕಿದ ಸ್ಯಾಮ್ ಕರ್ರನ್ IPL 2023 ಹರಾಜಿನಲ್ಲಿ ಕಮಾಲ್‌ ಮಾಡಲಿದ್ದಾರೆ. ಯುವ ಆಲ್‌ರೌಂಡರ್ ಇತ್ತೀಚಿನ ಫಾರ್ಮ್‌ ಅತ್ಯುತ್ತಮವಾಗಿದೆ. ವಿಶ್ವಕಪ್ ನಲ್ಲಿ ಅವರ ಪರಾಕ್ರಮ ನೋಡಿರುವ ಪ್ರಾಂಚೈಸಿಗೂ ತಂಡಕ್ಕೆ ಸೇರಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿವೆ. ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಮಾತ್ರವಲ್ಲದೆ ಪಂದ್ಯಾವಳಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಪಡೆದ ಪ್ರತಿಭಾವಂತನೀತು. ಯುವ ಆಲ್‌ರೌಂಡರ್ ಈಗಾಗಲೇ ಐಪಿಎಲ್‌ನ ಹಿಂದಿನ ಆವೃತ್ತಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ ಉತ್ತಮ ಪ್ರದರ್ಶನಗಳನ್ನು ತೋರಿಸಿದ್ದಾರೆ. ಜೊತೆಗೆ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಹೆಚ್ಚು ಪರಿಣಾಮಕಾರಿಯಾಗಿದ್ದಾರೆ. ಸ್ಯಾಮ್ ಕರ್ರಾನ್ ಅವರ ಬೆಳೆಯುತ್ತಿರುವ ಅನುಭವ, ಅವರ ನಾಯಕತ್ವದ ಗುಣಗಳು ಅವರನ್ನು ಐಪಿಎಲ್ ತಂಡಗಳಿಗೆ ಫೇವರಿಟ್ ಖರೀದಿಯನ್ನಾಗಿ ಮಾಡುತ್ತವೆ. ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದರೂ ಬಿಗ್‌ ಹಿಟ್ಟಿಂಗ್ ಸಾಮರ್ಥ್ಯ ಮತ್ತು ಡೆತ್‌ನಲ್ಲಿ ಬೌಲಿಂಗ್ ಮಾಡುವಾಗ ಅವರ ನಿಖರತೆ ಈ ವರ್ಷದ ಹರಾಜಿನಲ್ಲಿ ಎಲ್ಲಾ ತಂಡಗಳು ಸ್ಯಾಮ್‌ ಹಿಂದೆ ಬೀಳಲು ಕಾರಣವಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!