ಐಪಿಎಲ್ ಹರಾಜು: ಶ್ರೇಯಸ್‌ಗೆ 12.5 ಕೋ.ರೂ.

 ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಕ್ರಿಕೆಟಿನ ಮೆಗಾ ಹರಾಜು ಪ್ರಕ್ರಿಯೆಯು ಶನಿವಾರ ಬೆಂಗಳೂರಿನಲ್ಲಿ ಆರಂಭಗೊಂಡಿದ್ದು, ಖ್ಯಾತನಾಮ ಆಟಗಾರರು ಭರ್ಜರಿ ಬೆಲೆಗೆ ಮಾರಾಟವಾಗಿದ್ದಾರೆ. ತಮ್ಮ ಮೂಲಬೆಲೆಯಲ್ಲಿ 2 ಕೋಟಿ ಎಂದು ನಮೂದಿಸಿಕೊಂಡಿದ್ದ ಹಲವಾರು ಆಟಗಾರರು ಬಹುಕೋಟಿ ಹಣವನ್ನು ಗಳಿಸಿದ್ದಾರೆ.
ಈ ಮೊದಲು ದಿಲ್ಲಿ ತಂಡದ ನಾಯಕರಾಗಿದ್ದ ಶ್ರೇಯಸ್ ಅಯ್ಯರ್‌ಗಾಗಿ ಈ ಬಾರಿ ತೀವ್ರ ಪೈಪೋಟಿ ನಡೆದು ಅವರು 12.5 ಕೋಟಿ ರೂ.ಗೆ ಕೆಕೆಆರ್ ಪಾಲಾದರು. ದಿಲ್ಲಿ ತಂಡವು ರಿಷಬ್ ಪಂತ್‌ರನ್ನು ನಾಯಕನಾಗಿ ಆರಿಸಿದ್ದರಿಂದ ಶ್ರೇಯಸ್ ತಂಡದಿಂದ ಬಿಡುಗಡೆ ಬಯಸಿದ್ದರು. ಅವರು ಕೆಕೆಆರ್ ತಂಡದ ನಾಯಕರಾಗುವ ಸಾಧ್ಯೆತಯೂ ಇದೆ.
ಕಳೆದ ಐಪಿಎಲ್‌ನಲ್ಲಿ ಗರಿಷ್ಠ 32 ವಿಕೆಟ್ ಕಿತ್ತಿದ್ದ ಹರ್ಷಲ್ ಪಟೇಲ್‌ರನ್ನು 10.75 ಕೋಟಿ ನೀಡಿ ಆರ್‌ಸಿಬಿ ತಾನೇ ಉಳಿಸಿಕೊಂಡಿತು. ಇದೇವೇಳೆ ಆರ್‌ಸಿಬಿ ವಾರ್ನರ್ ಅವರನ್ನೂ ಖರೀದಿಸಿಕೊಂಡಿದೆ. ಆರ್‌ಸಿಬಿ ತನ್ನ ನಾಯಕನಾಗಿ ಯಾರನ್ನು ಆರಿಸುವುದೆಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
ದ.ಆಫ್ರಿಕಾದ ವೇಗಿ ರಬಾಡಾ ಅವರಿಗೆ ಕೂಡ ತೀವ್ರ ಪೈಪೋಟಿ ನಡೆಯಿತು. ಕೊನೆಗೂ ಅವರು ಪಂಜಾಬ್ ಕಿಂಗ್ಸ್ ಪಾಲಾದರು.

ಗರಿಷ್ಠ ಬೆಲೆಗೆ ಮಾರಾಟವಾದ ಕೆಲವು ಆಟಗಾರರು

ಶ್ರೇಯಸ್ ಅಯ್ಯರ್ -12.25 ಕೋಟಿ (ಕೆಕೆಆರ್)
ಹರ್ಷಲ್ ಪಟೇಲ್ – 10.75ಕೋಟಿ (ಆರ್‌ಸಿಬಿ)
ಹಸರಂಗ –     10.75ಕೋಟಿ (ಆರ್‌ಸಿಬಿ)
ರಬಾಡಾ – 9.25 ಕೋಟಿ (ಪಂಜಾಬ್ ಕಿಂಗ್ಸ್ )
ಜೇಸನ್ ಹೋಲ್ಡರ್ -8.75 ಕೋಟಿ ( ಲಕ್ನೋ ಸುಪರ್ ಕಿಂಗ್ಸ್ )
ಹೆಟ್‌ಮೈಯರ್ – 8.50 ಕೋಟಿ ( ರಾಜಸ್ಥಾನ ರಾಯಲ್ಸ್ )
ಶಿಖರ್ ಧವನ್ -8.25 ಕೋಟಿ ( ಪಂಜಾಬ್ ಕಿಂಗ್ಸ್ )
ಟ್ರೆಂಟ್ ಬೋಲ್ಟ್ – 8 ಕೋಟಿ (ರಾಜಸ್ಥಾನ ರಾಯಲ್ಸ್)
ಪ್ಯಾಟ್ ಕಮಿನ್ಸ್ – 7.25 ಕೋಟಿ (ಕೆಕೆಆರ್ )
ಫಾಫ್ ಡು ಪ್ಲೆಸಿಸ್ -7 ಕೋಟಿ (ಆರ್‌ಸಿಬಿ)
ಡೇವಿಡ್ ವಾರ್ನರ್ – 6.5 ಕೋಟಿ ( ಆರ್‌ಸಿಬಿ )

ಹರಾಜಿನ ಮಧ್ಯೆಯೆ ಕುಸಿದ ಹ್ಯೂ ಎಡ್ಮೀಡ್ಸ್
ಹರಾಜು ಪ್ರಕ್ರಿಯೆ ನಡೆಸುತ್ತಿದ್ದ ಹ್ಯೂ ಎಡ್ಮೀಡ್ಸ್ ಹರಾಜಿನ ಮಧ್ಯೆಯೆ ಅಸೌಖ್ಯಕ್ಕೀಡಾಗಿ ಕುಸಿದ ಪ್ರಸಂಗ ನಡೆಯಿತು. ಹಸರಂಗ ಅವರ ಹರಾಜು ಪ್ರಕ್ರಿಯೆ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿತು. ಅವರಿಗೆ ಕೂಡಲೇ ಚಿಕಿತ್ಸೆ ನೀಡಲಾಯಿತು. ಅವರು ಹೈಪರ್ ಟೆನ್ಶನ್‌ನಿಂದ ಕುಸಿದರು ಎಂದು ಬಳಿಕ ಬಿಸಿಸಿ ಪ್ರಕಟಿಸಿತು. ಬಳಿಕ ಚಾರು ಶರ್ಮಾ ಹರಾಜು ಪ್ರಕ್ರಿಯೆ ಮುಂದುವರಿಸಿದರು.

ಐಪಿಎಲ್‌ನಲ್ಲೇ ಸಿಗುವುದು ಅಧಿಕ ಹಣ...
ಐಪಿಎಲ್ ಹರಾಜಿನಲ್ಲಿ ಕೆಲವು ಆಟಗಾರರು ಬಹುಕೋಟಿಗೆ ಮಾರಾಟವಾಗಿದ್ದಾರೆ. ಅದಕ್ಕಾಗಿಯೇ ವಿಶ್ವದ ಎಲ್ಲಾ ಕ್ರಿಕೆಟ್ ಆಟಗಾರರು ಐಪಿಎಲ್‌ನಲ್ಲಿ ಆಡಲು ಹೆಚ್ಚು ಹಾತೊರೆಯುತ್ತಾರೆ.
ಬೇರೆ ದೇಶಗಳಲ್ಲಿ ನಡೆಯುವ ಕ್ರಿಕೆಟ್ ಲೀಗ್‌ಗೆ ಹೋಲಿಸಿದರೆ ಐಪಿಎಲ್‌ನಲ್ಲಿ ಸಿಗುವ ಸಂಭಾವನೆಯು ಅವೆಲ್ಲವುಗಳಿಗಿಂತ ಅತ್ಯಧಿಕ.
ಆಸ್ಟ್ರೇಲಿಯಾದ ಖ್ಯಾತ ಟಿ20 ಲೀಗ್ ಆಗಿರುವ ಬಿಬಿಎಲ್ (ಬಿಗ್ ಬ್ಯಾಶ್ ಲೀಗ್)ನಲ್ಲಿ ಅಧಿಕ ಮೊತ್ತ ಪಡೆದವರೆಂದರೆ ಡಿ ಆರ್ಕಿ ಶಾರ್ಟ್. ಅವರು ಪಡೆದ ಮೊತ್ತ 250,000 ಡಾಲರ್. ಅದನ್ನು ರೂ.ಗೆ ಪರಿವರ್ತಿಸಿದರೆ 1.9 ಕೋಟಿ ರೂ. ಪಾಕಿಸ್ಥಾನ ಸುಪರ್ ಲೀಗ್(ಪಿಪಿಎಲ್)ನಲ್ಲಿ ಬಾಬರ್ ಅಜಮ್ , ಪೊಲಾರ್ಡ್‌ನಂತಹ ಆಟಗಾರರು ಪಡೆದ ಗರಿಷ್ಠ ಮೊತ್ತವೆಂದರೆ 1.27 ಕೋಟಿ ರೂ. (170,000 ಡಾಲರ್) ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಸಿಪಿಎಲ್) ಆಟಗಾರನೊಬ್ಬ ಪಡೆದ ಅಕ ಮೊತ್ತವೆಂದರೆ 112,000 ಡಾಲರ್ , ಅಂದರೆ 85 ಲಕ್ಷ ರೂ.ಗಳು.
ಆದರೆ ಐಪಿಎಲ್‌ನಲ್ಲಿ ಹಿಂದೆ ವಿರಾಟ್ ಕೊಹ್ಲಿ 17 ಕೋಟಿ ರೂ. ಪಡೆದಿದ್ದರು. ಈ ಬಾರಿ ಅವರು ತಮ್ಮ ಮೊತ್ತವನ್ನು 15ಕೋಟಿಗೆ ಇಳಿಸಿಕೊಂಡಿದ್ದಾರೆ. ಈ ಬಾರಿ ಕೆ.ಎಲ್. ರಾಹುಲ್‌ರನ್ನು ಲಕ್ನೋ ಸುಪರ್ ಜೈಂಟ್ಸ್ 17 ಕೋಟಿ ನೀಡಿ ಖರೀದಿಸಿದೆ.
ಈ ಬಾರಿ ಪ್ರತಿ ಫ್ರಾಂಚೈಸಿ ಆಟಗಾರರಿಗಾಗಿ 90 ಕೋಟಿ ರೂ.ಗಳನ್ನು ಖರ್ಚು ಮಾಡಬಹುದಾಗಿದೆ. ಪ್ರತಿ ತಂಡವು 25 ಆಟಗಾರರಿಗಿಂತ ಹೆಚ್ಚು ಮಂದಿಯನ್ನು ಖರೀದಿಸುವಂತಿಲ್ಲ. ಈಗಾಗಲೆ ಪ್ರತಿ ತಂಡವು ತಲಾ ನಾಲ್ವರು ಆಟಗಾರರನ್ನು ತಮ್ಮಲ್ಲಿ ಉಳಿಸಿಕೊಂಡಿದ್ದು, ಉಳಿದಂತೆ ಒಟ್ಟು 561.5 ಕೋಟಿ ರೂ.ಗಳನ್ನು ಹರಾಜಿನಲ್ಲಿ ವ್ಯಯಿಸಲು ಸಿದ್ಧವಾಗಿವೆ. ಒಟ್ಟು 217 ಆಟಗಾರರನ್ನು ಹರಾಜಿನಲ್ಲಿದ್ದು ಖರೀದಿಸಬಹುದಾಗಿದ್ದು, ಅವರೊಳಗೆ ಈ ಹಣವನ್ನು ಸಮಾನವಾಗಿ ಹಂಚುವುದಾದರೆ ಪ್ರತಿ ಆಟಗಾರ ಸರಾಸರಿ 2.58 ಕೋಟಿ ರೂ. ಪಡೆದಂತಾಗುತ್ತದೆ. ಈ ಮೊತ್ತವು ಬಿಬಿಎಲ್‌ನಲ್ಲಿ ಅಧಿಕ ಮೊತ್ತದ ಆಟಗಾರ ಪಡೆಯುವ ಹಣಕ್ಕಿಂತ ಹೆಚ್ಚಾಗಿದೆ.
ಹಾಗಾಗಿಯೇ ಪ್ರತಿಯೊಬ್ಬ ಆಟಗಾರನೂ ಐಪಿಎಲ್‌ನ ಹರಾಜಿನಲ್ಲಿ ಭಾಗವಹಿಸಲು ಇಷ್ಟಪಡುತ್ತಾನೆ.

ಮಾರಾಟವಾಗದ ರೈನಾ, ಸ್ಮಿತ್
ಚೆನ್ನೈ ಸುಪರ್ ಕಿಂಗ್ಸ್‌ನ ಭಾಗವಾಗಿದ್ದ ಸುರೇಶ್ ರೈನಾ ಈ ಬಾರಿ ಹರಾಜಿನಲ್ಲಿ ಮಾರಾಟವಾಗದೆ ಉಳಿದರು. ಅದೇರೀತಿ, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ದ.ಆಫ್ರಿಕಾದ ಮಿಲ್ಲರ್‌ರನ್ನು ಕೂಡ ಯಾವುದೇ ಫ್ರಾಂಚೈಸಿ ಖರೀದಿಸಲಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!