ಪ್ರವಾದಿ ಹೇಳಿಕೆ ವಿವಾದ: ಭಾರತದ ನಿಲುವಿಗೆ ಏನಂದಿತು ಇರಾನ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರವಾದಿ ಮೊಹಮದ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವವರ ವಿರುದ್ಧ ಸರ್ಕಾರ ತೆಗೆದುಕೊಂಡಿರುವ ಕ್ರಮಕ್ಕೆ ಇರಾನ್ ತೃಪ್ತವಾಗಿದೆ ಎಂದು ಭಾರತಕ್ಕೆ ಭೇಟಿ ನೀಡಿರುವ ಇರಾನ್ ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್ ಹೇಳಿದ್ದಾರೆ. ಕಳೆದ ವರ್ಷ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಅಬ್ದುಲ್ಲಾಹಿಯಾನ್, ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗಿನ ಸಭೆಯಲ್ಲಿ ಇಬ್ಬರು ಮಾಜಿ ಬಿಜೆಪಿ ವಕ್ತಾರರು ನೀಡಿದ ವಿವಾದಾತ್ಮಕ ಹೇಳಿಕೆಗಳ ವಿಷಯವನ್ನು ಪ್ರಸ್ತಾಪಿಸಿ ಈ ವಿಚಾರದಲ್ಲಿ ಭಾರತದ ನಿಲುವು ತೃಪ್ತಿ ತಂದಿದೆ ಎಂದರು.

ಭಾರತ ಸರ್ಕಾರ ಮತ್ತು ಅಧಿಕಾರಿಗಳು ಪ್ರವಾದಿ ಮೊಹಮ್ಮದ್ ಬಗ್ಗೆ ಗೌರವ ಹೊಂದಿರುವುದಾಗಿ ಅಜಿತ್ ದೋವಲ್ ಹೇಳಿದರು. ಅನುಚಿತ ಹೇಳಿಕೆ ನೀಡಿದವರ ವಿರುದ್ಧ ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳುತ್ತಿವೆ. ಈ ಕ್ರಮಗಳು ಇನ್ನು ಮುಂದೆ ಅನುಚಿತ ಹೇಳಿಕೆ ನೀಡುವವರಿಗೆ ತಕ್ಕ ಪಾಠವಾಗಲಿವೆ ಎಂದರು.

ಅಜಿತ್ ದೋವಲ್ ಅವರ ಪ್ರತಿಕ್ರಿಯೆಗೆ ಹುಸೇನ್ ಅಮೀರ್ ಅಬ್ದುಲ್ಲಾ ಅವರು ತೃಪ್ತಿ ವ್ಯಕ್ತಪಡಿಸಿದ್ದಾರೆ. ಪ್ರವಾದಿ ಮೊಹಮ್ಮದ್ ಮತ್ತು ಇತರ ಧರ್ಮಗಳ ಕುರಿತು ಭಾರತೀಯ ಜನ, ಸರ್ಕಾರ ತೋರಿದ ಗೌರವ ಮತ್ತು ಬೆಂಬಲವನ್ನು ಅಮೀರ್ ಶ್ಲಾಘಿಸಿರುವುದಾಗಿ ಇರಾನ್ ವಿದೇಶಾಂಗ ಸಚಿವಾಲಯ ತಿಳಿಸಿದೆ. ಆದರೂ ಪ್ರವಾದಿ ಮೊಹಮ್ಮದ್ ಬಗ್ಗೆ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರ ಅಸಭ್ಯ ಹೇಳಿಕೆಗಳ ಬಗ್ಗೆ ಹಲವು ಮುಸ್ಲಿಂ ರಾಷ್ಟ್ರಗಳು ಆಕ್ರೋಶ ವ್ಯಕ್ತಪಡಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!