ಇರಾನ್‌ನಲ್ಲಿ ಹಿಜಾಬ್‌ ವಿರುದ್ಧ ಭುಗಿಲೆದ್ದ ಆಕ್ರೋಶ: ಹಿಜಾಬ್‌ ಕಿತ್ತೊಗೆದು ಬೀದಿಗಿಳಿದ ಮಹಿಳೆಯರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸಾರ್ವಜನಿಕ ಸ್ಥಲದಲ್ಲಿ ಹಿಜಾಬ್ ಅನ್ನು ಸರಿಯಾಗಿ ಧರಿಸದ್ದಕ್ಕೆ ಪೊಲೀಸರಿಂದ ಥಳಿತಕ್ಕೊಳಗಾಗಿ 22 ವರ್ಷದ ಯುವತಿ ಮಹ್ಸಾ ಅಮಿನಿ ಸಾವನ್ನಪ್ಪಿದ ನಂತರ ಇರಾನ್‌ ನಲ್ಲಿ ಆಕ್ರೋಶಗಳು ಭುಗಿಲೆದ್ದಿವೆ. ಸರ್ಕಾರ ಕಟ್ಟರ್‌ ಇಸ್ಲಾಮಿಕ್‌ ನೀತಿಗಳ ವಿರುದ್ಧ ಆಕ್ರೋಶಭರಿತರಾಗಿ ಬೀದಿಗಿಳಿದು ಪ್ರತಿಭಟಿಸುತ್ತಿರುವ ಮಹಿಳೆಯರು ತಮ್ಮ ಹಿಜಾಬ್‌ ಅನ್ನು ಕಿತ್ತಿಸೆದು ಪ್ರತಿಭಟನೆ ನಡೆಸುತ್ತಿದ್ದಾರೆ.

ಇರಾನ್‌ ನಲ್ಲಿ 9 ವರ್ಷ ದಾಟಿದ ಹೆಣ್ಣುಮಕ್ಕಳು ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಇಲ್ಲದೆ ಕಾಣಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಅಮಿನಿಯ ತವರು ಸಘೇಜ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ‘ಡೆತ್ ಟು ಡಿಕ್ಟೇಟರ್’ ಎಂದು ಘೋಷಣೆ ಕೂಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗುತ್ತಿದೆ.
ಹಿಜಾಬ್‌ ಧರಿಸದ ಅಪರಾಧದ ಮೇಲೆ ಬಂಧಿಸಲ್ಪಡುವಾಗ ಅಮಿನಿ ತನ್ನ ಕುಟುಂಬದೊಂದಿಗೆ ಪಶ್ಚಿಮ ಪ್ರಾಂತ್ಯದ ಕುರ್ದಿಸ್ತಾನ್‌ನಿಂದ ಇರಾನ್‌ನ ರಾಜಧಾನಿ ಟೆಹ್ರಾನ್‌ಗೆ ಸಂಬಂಧಿಕರನ್ನು ಭೇಟಿಯಾಗಲು ಪ್ರಯಾಣಿಸುತ್ತಿದ್ದಳು.
ಅವಳನ್ನು ಎಳೆದೊಯ್ದ ಪೊಲೀಸರು ವ್ಯಾನ್‌ನಲ್ಲಿ ಮನಬಂದತೆ ಥಳಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಬಹಿರಂಗಪಡಿಸಿದ್ದಾರೆ. ಆದರೆ ಇದನ್ನು ಪೊಲೀಸರು ನಿರಾಕರಿಸಿದ್ದಾರೆ. ಆದಾಗ್ಯೂ, ಆಕೆಯ ಬಂಧನದ ಕೆಲವೇ ಗಂಟೆಗಳ ನಂತರ, ಆಕೆಯನ್ನು ಕಸ್ರಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಅವಳನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು. ಆಕೆಯ ತಲೆಗೆ ಬಲವಾದ ಪೆಟ್ಟುಬಿದ್ದಿದ್ದ ಪೋಟೋಗಳು ವೈರಲ್‌ ಆಗಿದ್ದವು. ಆದರೆ  ಆಕೆ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ಎಂದು ಪೊಲೀಸರು ಹೇಳುತ್ತಿದ್ದಾರೆ. ಆಕೆಯನ್ನು ಬಂಧಿಸುವವರೆಗೂ ಅವಳು ಆರೋಗ್ಯವಾಗಿದ್ದಳು ಎಂದಿರುವ ಕುಟುಂಬದವರು ಪೊಲೀಸರ ಹೇಳಿಕೆಯನ್ನು ಬಲವಾಗಿ ವಿರೋಧಿಸಿದ್ದಾರೆ.
ಮಹಿಳೆಯರು ಎಲ್ಲಾ ಸಮಯದಲ್ಲೂ ಹಿಜಾಬ್ ಧರಿಸುವುದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಇರಾನ್‌ನ ಅಧ್ಯಕ್ಷ ಇಬ್ರಾಹಿಂ ರೈಸಿ ಆದೇಶಿಸಿದ ವಾರಗಳ ನಂತರ ಈ ಘಟನೆ ನಡೆದಿದೆ. ಹಿಜಾಬ್‌ ನೀತಿ ಉಲ್ಲಂಘನೆಗಳಿಗೆ ಅವರು ಕಠಿಣ ಶಿಕ್ಷೆಯನ್ನು ಸಹ ನಿಗದಿಪಡಿಸಿದ್ದಾರೆ. ಹಿಜಾಬ್‌ ಕಡ್ಡಾಯ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗಿಸುತ್ತಿರುವುದನ್ನು ಹಲವು ವೈರಲ್ ವೀಡಿಯೊಗಳು ತೋರಿಸಿವೆ. ಕೆಲವು ವೀಡಿಯೊಗಳಲ್ಲಿ, ಪ್ರತಿಭಟನಾ ಸ್ಥಳಗಳಲ್ಲಿ ಗುಂಡು ಹಾರಿಸುವುದನ್ನು ಕಾಣಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!