ಹಿಜಾಬ್ ಕಳಚಿದ ವಿಡಿಯೋ ಇನ್‌ಸ್ಟಾದಲ್ಲಿ ಹಾಕಿಕೊಂಡಿದ್ದ ಖ್ಯಾತ ಇರಾನಿ ನಟಿ ಅರೆಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇರಾನ್‌ ನಲ್ಲಿ ಹತ್ತಿಕೊಂಡಿರುವ ಹಿಜಾಬ್‌ ವಿರೋಧಿ ಆಕ್ರೋಶದ ಕಿಚ್ಚು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ರತಿಭಟನೆಗಳು ಇಡೀ ದೇಶವನ್ನು ವ್ಯಾಪಿಸುತ್ತಿದೆ. ಹಿಜಾಬ್‌ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಸಾರ್ವಜನಿಕವಾಗಿ ಹಿಜಾಬ್‌ ಕಿತ್ತೆಸೆದ ಖ್ಯಾತ ನಟಿಯನ್ನು ಅಲ್ಲಿನ ಸರ್ಕಾರ ಬಂಧಿಸಿದೆ ಎಂದು ಇರಾನ್‌ ಮಾಧ್ಯಮಗಳು ವರದಿ ಮಾಡಿವೆ.
ಹಿಜಾಬ್‌ ಸರಿಯಾಗಿ ಧರಿಸಿಲ್ಲವೆಂದು ಟೆಹ್ರಾನ್‌ನಲ್ಲಿ ನೈತಿಕತೆಯ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಕುರ್ದಿಷ್ ಮೂಲದ 22 ವರ್ಷದ ಯುವತಿ ಮಹ್ಸಾ ಅಮಿನಿಯ  ಸಾವಿನಿಂದ ಉಂಟಾದ ಕೊಲಾಹಲ ಇರಾನ್‌ ನ ಇಡೀ ಆಡಳಿತ ವ್ಯವಸ್ಥೆಯನ್ನೇ ನಡುಗಿಸುತ್ತಿದೆ. ಮಹಿಳೆಯರೇ ನೇತೃತ್ವ ವಹಿಸಿರುವ ಪ್ರತಿಭಟನೆ ಎರಡು ತಿಂಗಳು ದಾಟಿ ಮುಂದುವರೆಯುತ್ತಿದ್ದು ಇರಾನ್‌ನ ಧಾರ್ಮಿಕ ನಾಯಕತ್ವವನ್ನು ಅಲುಗಾಡಿಸುತ್ತಿದೆ.
ಈ ಪ್ರತಿಭಟನೆ ಬೆಂಬಲಿಸಿ ಇನ್‌ಸ್ಟಾ ಪೋಸ್ಟ್‌ನಲ್ಲಿ ತನ್ನ ತಲೆಯ ಸ್ಕಾರ್ಫ್ ತೆಗೆದುಹಾಕಿದ ಇರಾನ್ ನಟಿ ಹೆಂಗಮೆಹ್ ಘಜಿಯಾನಿ ಅವರನ್ನು ಗಲಭೆ ಪ್ರಚೋದಿಸಿದ ಮತ್ತು ಬೆಂಬಲಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಈ ಮೊದಲೇ ನ್ಯಾಯಾಂಗ ತನಿಖೆಗೆ ಹಾಜರಾಗುವಂತೆ ತನಗೆ ಸಮನ್ಸ್ ಕಳುಹಿಸಲಾಗಿದ್ದು, ಕಡ್ಡಾಯವಾಗಿ ಹಿಜಬ್ ಕಳಚಿರುವ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಿಂದ ತೆಗೆದುಹಾಕುವಂತೆ ಸೂಚಿಸಲಾಗಿದೆ ಎಂದು ನಟಿ ಹೇಳಿಕೊಂಡಿದ್ದರು.

ವೀಡಿಯೋದಲ್ಲಿ, ಸಾರ್ವಜನಿಕ ಸ್ಥಳವೊಂದರಲ್ಲಿ ಕ್ಯಾಮೆರಾ ಮುಂದೆ ನಿಂತ ಘಜಿಯಾನಿ ಹಿಜಾಬ್ ಧರಿಸಿದೆ ತಿರುಗಿ ಕೂದಲನ್ನು ಮುಕ್ತವಾಗಿ ಗಂಟು ಹಾಕುವುದನ್ನು ಕಾಣಬಹುದಾಗಿದೆ. ʼಬಹುಶಃ ಇದು ನನ್ನ ಕೊನೆಯ ಪೋಸ್ಟ್ ಆಗಿರಬಹುದು” ಎಂದು ಅವರು ಆ ಪೊಸ್ಟ್‌ ಕೆಳಗೆ ಮಾರ್ಮಿಕವಾಗಿ ಬರೆದುಕೊಂಡಿದ್ದರು. “ಈ ಕ್ಷಣದಿಂದ, ನನಗೆ ಏನೇ ಸಂಭವಿಸಿದರೂ, ನಾನು ಯಾವಾಗಲೂ ಇರಾನ್ ಜನರೊಂದಿಗೆ ನನ್ನ ಕೊನೆಯ ಉಸಿರು ಇರುವವರೆಗೂ ಇರುತ್ತೇನೆ ಎಂದು ತಿಳಿಯಿರಿʼ ಎಂದು ಹೇಳಿದ್ದರು. ಇದೀಗ ಘಜಿಯಾನಿ ಅವರ ಬಂಧನವಾಗಿದ್ದು, ಈ ತಪ್ಪಿಗೆ ಇರಾನ್‌ ಆಡಳಿತ ಉಗ್ರ ಶಿಕ್ಷೆ ವಿಧಿಸಲಿದೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!