Wednesday, June 29, 2022

Latest Posts

ಸ್ವಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ: ಹೂಮಳೆಗರೆದು ಭವ್ಯ ಸ್ವಾಗತ ಕೋರಿದ ಜನತೆ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಹಾವೇರಿ:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ತವರು ಕ್ಷೇತ್ರ ಶಿಗ್ಗಾವ್-ಸವಣೂರ ಕ್ಷೇತ್ರದಲ್ಲಿ ಬಿಡುವಿಲ್ಲದ, ದಣಿವರಿಯದೇ ಕಾರ್ಯಕ್ರಮಗಳನ್ನು ಪಾಲ್ಗೊಳ್ಳುವ ಮೂಲಕ ತವರಿಗೆ ಬಂದು ಸಂಭ್ರಮಿಸಿದ್ದು ಕಂಡುಬಂದಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಿಗ್ಗೆ ಶಿಗ್ಗಾವ್ ತಾಲೂಕಿನ ತಡಸ ಗ್ರಾಮದಲ್ಲಿ ಬೆಳಿಗ್ಗೆ ಕಾರ್ಯಕ್ರಮವನ್ನು ಆರಂಭಿಸಿದ ನಂತರ ಒಂದರ ಮೇಲೊಂದರಂತೆ ಉದ್ಘಾಟನೆ, ಶಂಕುಸ್ಥಾಪನೆ, ಶಾಲಾ ಮಕ್ಕಳೊಂದಿಗೆ ಚರ್ಚೆ, ದಾರಿಯುದ್ದಕ್ಕೂ ಗ್ರಾಮಸ್ತರು ನೀಡಿದ ಸನ್ಮಾನ ಸ್ವೀಕರಿಸುತ್ತ, ಸಾರ್ವಜನಿಕರು ನೀಡಿದ ಅಹವಾಲುಗಳನ್ನು ಸ್ವೀಕರಿಸುತ್ತ ಮುಂದಿನ ಊರಿನತ್ತ ಸಾಗುತ್ತಿದ್ದುದು ಸಾಮಾನ್ಯ ಸಂಗತಿಯಾಗಿತ್ತು.
ಮುಖ್ಯಮಂತ್ರಿಗಳು ಸಾಗುತ್ತಿದ್ದ ಗ್ರಾಮಗಳ ರಸ್ತೆಗಳ ಇಕ್ಕೆಲೆಗಳಲ್ಲಿ ಸಾರ್ವಜನಿಕರು, ರೈತ ಸಂಘದವರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ನಿಂತು ತಮ್ಮ ಬೇಡಿಕೆಗಳ ಪಟ್ಟಿಗಳುಳ್ಳ ಮನವಿ ಪತ್ರಗಳನ್ನು ನೀಡುತ್ತಿದ್ದರೆ ಮುತೈದೆಯರು ನಾಡಿನ ದೊರೆ ಆದ ನಂತರದಲ್ಲಿ ನಮ್ಮೂರಿಗೆ ಮೊದಲಬಾರಿಗೆ ಆಗಮಿಸಿದ್ದಾರೆ ಎಂದು ಆರತಿ ಮಾಡಿ ಹರಸುತ್ತಿದ್ದುದು ಕಂಡುಬಂದಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ನಗುತ್ತಲೇ ಗೌರವವನ್ನು ಸ್ವೀಕರಿಸುತ್ತಿದ್ದರು. ಯುವ ಜನತೆ ಜೈಕಾರ ಹಾಕಿ ಹರ್ಷವನ್ನು ವ್ಯಕ್ತಪಡಿಸುತ್ತಿದ್ದರು.
ಬಾಡ ಗ್ರಾಮದಲ್ಲಿನ ಅಟಲ್ ಬಿಹಾರಿ ವಾಜಪೇಯಿ ವಸತಿ ನಿಲಯದ ನೂತನ ಕಟ್ಟಡ ಉದ್ಘಾಟ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯಮಂತ್ರಿಗಳನ್ನು ನೋಡುವುದಕ್ಕೆ ಸಾರ್ವಜನಿಕರನ್ನು ನಿಯಂತ್ರಿಸುವಲ್ಲಿ ಪೊಲೀಸ್ ಸಿಬ್ಬಂಧ ಹರ ಸಾಹಸಪಡಬೇಕಾಯಿತು. ಮುಖ್ಯ ದ್ವಾರದ ಬಳಿ ನಿಂತ ಸಾರ್ವಜನಿಕರು ನಮ್ಮನ್ನು ಒಳಗೆ ಬಿಡದಿದ್ದರೆ ಮಾಧ್ಯಮದವರನ್ನು ಒಳಗೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದಾಗ ಪೊಲೀಸರು ಅನಿವಾರ್ಯವಾಗಿ ಜನತೆಯನ್ನು ಒಳಗೆ ಬಿಡಬೇಕಾಯಿತು.
ಶಿಗ್ಗಾವನಲ್ಲಿ ಕಿತ್ತೂರು ರಾಣಿ ಚನ್ನಮ್ಮ ಪುತ್ಥಳಿಗೆ ಹೂಮಲೆ ಹಾಕಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ಶಿಗ್ಗಾವ್ ಪುರಸಭೆ ನೂತನ ಕಟ್ಟಡ ಉದ್ಘಾಟನೆ ಸಂದರ್ಭದಲ್ಲಿ ಸಾರ್ವಜನಿಕರ ಜೈಕಾರ ಮುಖ್ಯಮಂತ್ರಿಗಳನ್ನು ಪುಳಕಿತರನ್ನಾಗಿ ಮಾಡಿತು.
ಸವಣೂರನಲ್ಲಿನ ಕಾರ್ಯಕ್ರಮಗಳಲ್ಲಿಯೂ ಸಹ ಮುಖ್ಯಮಂತ್ರಿಗಳಿಗೆ ಭವ್ಯ ಸ್ವಾಗತ ದೊರೆಯಿತು. ಕಾರಿನಲ್ಲಿ ತೆರಳುತ್ತಿದ್ದ ಸಿಎಂರನ್ನು ಅಪಾರ ಪ್ರಮಾಣದಲ್ಲಿ ಹೂವನ್ನು ಹಾಕುವ ಮೂಲಕ ಭವ್ಯವಾಗಿನೇ ಬರಮಾಡಿಕೊಳ್ಳಲಾಯಿತು. ಕಾರಿನ ಮೇಲೆಲ್ಲ ಹೂವೆ ತುಂಬಿದ್ದು ಕಂಡುಬಂದಿತು. ಮುಖ್ಯಮಂತ್ರಿಗಳು ಸಹ ಸಾರ್ವಜನಿಕರತ್ತ ಕೈಬೀಸಿ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದರು.
ಮುಖ್ಯಮಂತ್ರಿಗಳು ಮಧ್ಯಾಹ್ನದ ಊಟಕ್ಕೆ ಬಿಳಿ ಜೋಳದ ರೊಟ್ಟಿ, ಖಾರದ ಮಿಜ್ಜಿಂಡಿ, ಹೋಳಿಗೆ ತುಪ್ಪ, ವಿವಿಧ ಪಲ್ಯಗಳ ಸವಿಯನ್ನು ಸವಿದರು. ಅವರ ಜೊತೆಯಲ್ಲಿ ವಿಪ ಸಭಾಪತಿ ಬಸವರಾಜ ಹೊರಟ್ಟಿ(ಕೆಲ ಸಮಯ), ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಸಾಥ್ ನೀಡಿದ್ದು ವಿಶೇಷವಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss