Tuesday, July 5, 2022

Latest Posts

ರಾಮ ಮಂದಿರ ನಿರ್ಮಾಣದ ಐತಿಹಾಸಿಕ ಕಾಲಘಟ್ಟಕ್ಕೆ ಹಗರಣದ ಕಳಂಕ ಮೆತ್ತುವ ಷಡ್ಯಂತ್ರವೇ?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಯೋಧ್ಯೆಯ ರಾಮ ಮಂದಿರ ಟ್ರಸ್ಟ್ ಭೂ ಖರೀದಿಯಲ್ಲಿ ಹಗರಣ ಮಾಡುತ್ತಿದೆ ಅಂತ ಸಮಾಜವಾದಿ ಪಕ್ಷ ಮತ್ತು ಆಮ್ ಆದ್ಮಿ ಪಕ್ಷಗಳು ಪತ್ರಿಕಾಗೋಷ್ಠಿ ಮಾಡುತ್ತವೆ. ಅಯ್ಯಯ್ಯೋ, ನ್ಯಾಯಕ್ಕೆ ಇನ್ನೊಂದು ಹೆಸರಾದ ಶ್ರೀರಾಮನ ಹೆಸರಲ್ಲಿ ಎಂಥದಿದು ಹಗರಣ ಎಂಬರ್ಥದಲ್ಲಿ ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಟ್ವೀಟ್ ಮಾಡುತ್ತಾರೆ.

ಅದಾಗಲೇ ರಾಮಜನ್ಮಭೂಮಿ ಟ್ರಸ್ಟ್ ಈ ಬಗ್ಗೆ ಸೂಕ್ತ ವಿವರಣೆ ನೀಡಿದೆ. ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ಖರೀದಿಸಿದ್ದಾರೆ ಎಂಬ ಆರೋಪಗಳಲ್ಲಿ ಹುರುಳಿಲ್ಲ. ಮಾತುಕತೆ ಮೂಲಕ ಮಾರುಕಟ್ಟೆಗಿಂತ ಕಡಿಮೆ ಬೆಲೆಯಲ್ಲೇ ಮಾತುಕತೆ- ಸಂಧಾನಗಳ ಮೂಲಕ ಖರೀದಿಸಿದ್ದೇವೆ. ಇಷ್ಟಕ್ಕೂ ಹೆಚ್ಚು ಬೆಲೆ ನಮೂದಿಸಿ ಭೂ ಖರೀದಿ ಮಾಡಿ ಯಾರಾದರೂ ಟ್ರಸ್ಟ್ ನಿಂದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ವಾದಿಸುವುದಾದರೆ ಆ ಹಣ ಬೇರೆಡೆ ಹೋಗಿರುವುದು ತೋರಿಸಬೇಕಲ್ಲ? ಎಲ್ಲ ವ್ಯವಹಾರವೂ ಬ್ಯಾಂಕ್ ಖಾತೆ ಮೂಲಕವೇ ಪಾರದರ್ಶಕವಾಗಿ ಆಗಿರುವುದರಿಂದ ಭೂಮಿ ನೀಡಿದವರಿಗೆ ಮಾತ್ರವೇ ಹಣ ನೀಡಿರುವುದು ಹಾಗೂ ಅವೆಲ್ಲ ವ್ಯವಹಾರಗಳಿಗೂ ತೆರಿಗೆ ಪಾವತಿಸಿರುವುದು ದಾಖಲೆಯಾಗಿದೆ.

ಹಾಗಾದರೆ ಆಪ್, ಸಮಾಜವಾದಿ, ಕಾಂಗ್ರೆಸ್ ಇತ್ಯಾದಿ ತಥಾಕಥಿತ ಸೆಕ್ಯುಲರ್ ಶಕ್ತಿಗಳಿಗೆಲ್ಲ ಏಕಾಏಕಿ ರಾಮಮಂದಿರದ ಕಾಳಜಿ ಬಂದಿದ್ದಾರೂ ಏಕೆ?

ಸಂಭಾವ್ಯ ಕಾರಣಗಳು: ಅದೇನೆ ಅಡೆತಡೆಗಳನ್ನು ಒಡ್ಡಿದರೂ ರಾಮಮಂದಿರದ ನಿರ್ಮಾಣ ಕಾರ್ಯಕ್ಕೆ ಕಾನೂನಾತ್ಮಕವಾಗಿಯೇ ಜಯ ಸಿಕ್ಕಿಬಿಟ್ಟಿತು. ಮಂದಿರ ನಿರ್ಮಾಣ ಹಂತದಲ್ಲೂ ಜನರಿಂದಲೇ ಸಾವಿರಾರು ಕೋಟಿ ರುಪಾಯಿಗಳ ಹಣ ಹರಿದುಬಂದು ಬಿಟ್ಟಿದೆ.

ಇದೀಗ ಇವರೆಲ್ಲ ಮಾಡಬಹುದಾದ ಒಂದೇ ರಾಜಕೀಯ ಎಂದರೆ ಜನರ ಮನಸ್ಸಿನಲ್ಲಿ ಸಂಶಯಗಳು ಎತ್ತುವಂತೆ ಮಾಡುವುದು. ಶ್ರದ್ಧೆಯಿಂದ ನೀಡಿರುವ ಹಣ ದುರ್ಬಳಕೆ ಆಗುತ್ತಿದೆ ಎಂದು ಸಂಶಯ ಎಬ್ಬಿಸಿ ಹಿಂದುಗಳಲ್ಲೇ ಬಿಕ್ಕಟ್ಟು ಸೃಷ್ಟಿಯಾಗುವಂತೆ ಮಾಡುವುದು ಈ ಆರೋಪಗಳ ಹಿಂದಿನ ಉದ್ದೇಶ ಇದ್ದಂತಿದೆ.

ರಾಮನ ಹೆಸರು ಹೇಳುತ್ತಾರೆ ಆದರೆ ಹಗರಣ ಮಾಡುತ್ತಾರೆ ಎಂಬಂತೆ ಜಗತ್ತಿನೆದುರು ಬಿಂಬಿಸಿ ಹಿಂದು ಮಾನಸಿಕತೆಯನ್ನು ಕುಗ್ಗಿಸುವುದು ಹಾಗೂ ಆ ಮೂಲಕ ತಮ್ಮ ಮತಬ್ಯಾಂಕಿನ ತುಷ್ಟೀಕರಣ ಮಾಡುವುದು ಇಂಥ ಎಲ್ಲ ರಾಜಕೀಯ ಉದ್ದೇಶಗಳೂ ಇಲ್ಲಿ ಇರುವಂತಿದೆ. 

ಇವರೇಕೆ ಪ್ರಶ್ನಿಸುವ ಯೋಗ್ಯತೆ ಕಳೆದುಕೊಂಡಿದ್ದಾರೆ?: ರಾಮ ಎಲ್ಲರಿಗೂ ಸೇರಿದವ, ಹೀಗಾಗಿ ರಾಮ ಮಂದಿರ ಸಂಬಂಧದ ಕಾರ್ಯಗಳ ಬಗ್ಗೆ ಪ್ರಶ್ನೆ ಎತ್ತುವ ಅಧಿಕಾರ ತಮಗೂ ಇದೆ ಎಂಬುದು ಇವತ್ತಿನ ‘ಸೆಕ್ಯುಲರ್’ ರಾಜಕಾರಣದ ಹೊಸವರಸೆ. 

ಆದರೆ, ರಾಮನ ವಿಷಯದಲ್ಲಿ ಇಲ್ಲಿಯವರೆಗೆ ಕುಹಕ-ಅಸಹಿಷ್ಣುತೆಗಳನ್ನೇ ತೋರಿಸಿಕೊಂಡುಬಂದವರು ಇವರೆಲ್ಲ. ಇದೇ ಸಮಾಜವಾದಿ ಪಕ್ಷ ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿದ್ದಾಗಲೇ ರಾಮಭಕ್ತ ಕರಸೇವಕರ ಮೇಲೆ ಗುಂಡಿನ ದಾಳಿ ನಡೆಸಿ ಅವರನ್ನು ಕೊಲ್ಲಲಾಗಿತ್ತು. 

ಅಯೋಧ್ಯೆಯಲ್ಲಿ ಮಂದಿರ ಏಕೆ ಕಟ್ಟಬೇಕು, ವಿಶ್ವವಿದ್ಯಾಲಯ ಕಟ್ಟಿ ಎಂದು ವಾದಿಸಿದ್ದರು ಆಪ್ ನ ಮನೀಷ್ ಸಿಸೋಡಿಯಾ.

ರಾಹುಲ್ ಗಾಂಧಿಯ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಸ್ತಿತ್ವದಲ್ಲಿದ್ದಾಗ “ರಾಮ ಒಂದು ಕಪೋಲಕಲ್ಪಿತ ಪಾತ್ರವಾಗಿರುವುದರಿಂದ ರಾಮಸೇತುವನ್ನು ಧ್ವಂಸ ಮಾಡಬಹುದು” ಅಂತ ನ್ಯಾಯಾಲಯಕ್ಕೆ ಅಫಡವಿಟ್ಟು ಕೊಟ್ಟಿತ್ತು. ಇದೇ ಕಾಂಗ್ರೆಸ್ ಪಾಳೆಯದ ಘಚಾನುಘಟಿ ನ್ಯಾಯವಾದಿಗಳೇ ರಾಮಜನ್ಮಭೂಮಿ ಪ್ರಕರಣದಲ್ಲಿ ಮಸೀದಿ ಪರವಾಗಿ ವಕಾಲತ್ತು ಮಾಡಿದ್ದರು.

ಇವರೆಲ್ಲ ಸೇರಿಕೊಂಡು ಈಗ ತಾವೂ ರಾಮಭಕ್ತರೆಂಬ ಸೋಗಿನಲ್ಲಿ ಹಗರಣಗಳ ಕತೆ ಹೆಣೆದು ಭವ್ಯ ರಾಮಮಂದಿರ ನಿರ್ಮಾಣಕ್ಕೆ ಕಳಂಕ ಮೆತ್ತಲು ಹೊರಟಿದ್ದಾರೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss