ದಿಗಂತ ವರದಿ ಧಾರವಾಡ:
ಖಾಸಗಿ ಜೀವನದಲ್ಲಿ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಅಪಘಾತ ಸಂಭವಿಸಿದರೇ, ಅದಕ್ಕೆ ಕೃಷಿ ವಿವಿ ಹೊಣೆಯೇ? ಅಪಘಾತಕ್ಕೂ ಹಾಗೂ ಕೃಷಿ ವಿವಿಗೂ ಸಂಬoಧವಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರದೋ ಅಪಘಾತವಾದರೆ, ಕೃಷಿ ವಿವಿಯೇ ಕಾರಣವಾ? ಅಪಘಾತಕ್ಕೂ ಕಿರುಕುಳಕ್ಕೂ ಏನು ಸಂಬoಧ? ಎಂದು ಸಚಿವ ಪಾಟೀಲ ಮಾಧ್ಯಮಗಳಿಗೆ ಮರು ಪ್ರಶ್ನೆ ಹಾಕಿದರು.
ಉದ್ಯೋಗಿಗಳನ್ನು ಒತ್ತಾಯಪೂರ್ವಕ ಕರೆದೊಯ್ದರೆ ಅಪಘಾತ ಮಾಡಿಸಲು ಸಾಧ್ಯವೇ? ಅದರ ಬಗ್ಗೆ ನನ್ನ ಗಮನಕ್ಕೆ ಬಂದರೆ ವಿಚಾರ ಮಾಡುತ್ತೇನೆ. ಅವಶ್ಯಕತೆ ಬಿದ್ದರೆ ತನಿಖೆ ಮಾಡಿಸುತ್ತೇನೆ ಎಂದು ವಾಗ್ದಾನ ಮಾಡಿದರು.
ಉ.ಕ. ಜಿಲ್ಲೆ ಅಂಕೋಲಾ ಬಳಿ ನಡೆದ ಅಪಘಾತದಲ್ಲಿ ಕೃಷಿ ವಿವಿ ಮಹಿಳಾ ಉದ್ಯೋಗಿಗಳು ಮೃತಪಟ್ಟಿರುವ ಬಗ್ಗೆ ಸದ್ಯ ಪ್ರಕರಣ ದಾಖಲಾಗಿ, ತನಿಖೆ ಪ್ರಗತಿಯಲ್ಲಿ ವರದಿ ಬಂದ ನಂತರ ಕ್ರಮ ಕೈಗೊಳ್ಳುವೆ ಎಂದರು.
ರಾಕೇಶಸಿoಗ್ ಟಿಕಾಯತ್ ಕರ್ನಾಟಕಕ್ಕೆ ಬರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದಲ್ಲಿ ಶಾಂತಿ, ನೆಮ್ಮದಿ ಇದೆ. ಎಲ್ಲರೂ ನೆಮ್ಮದಿಯಿಂದ ಇದ್ದಾರೆ ಅವರು ಬಂದು ಧರಣಿ ಮಾಡುವ ಅಗತ್ಯವೇನಿದೆ ಎಂದು ಹೇಳಿದರು.
ಟಿಕಾಯತ್ ಪ್ರವೇಶಕ್ಕೆ ಮಧ್ಯಪ್ರದೇಶ ನಿರ್ಬಂಧಕ್ಕೆ ಉತ್ತರಿಸಿದ ಅವರು, ಅದರ ಬಗ್ಗೆ ಸದ್ಯ ಏನೂ ಚಿಂತನೆ ಇಲ್ಲ. ಸಭೆ-ಸಂಘಟನೆ ಪ್ರತಿಯೊಬ್ಬರ ಹಕ್ಕು. ರೈತ ಸಂಘಟನೆಗಳು ತಯಾರಿಗೆ ಸಭೆಗಳನ್ನು ಮಾಡಿಕೊಳ್ಳಲಿದೆ ಎಂದರು.