ಹೊಸದಿಗಂತ ಡಿಜಿಟಲ್‌ಡೆಸ್ಕ್:
ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಸಂಘರ್ಷ ನಡೆಯುತ್ತಿದೆ. ಈ ಯುದ್ದದಿಂದಾಗಿ ದೇಶದ ಯಾವುದೇ ಮೂಲೆಯಲ್ಲಿರುವ ಯಹೂದಿಗಳು ತನ್ನ ದೇಶಕ್ಕಾಗಿ ಮಿಡಿಯುತ್ತಿದ್ದಾರೆ. ಪುಟ್ಟ ದೇಶವಾದ ಇಸ್ರೇಲ್ ಮೇಲಿನ ದೇಶಪ್ರೇಮ ಕಂಡು ಜಗತ್ತೇ ಬೆರಗಾಗಿದೆ. ತಮ್ಮ ದೇಶಕ್ಕಾಗಿ ಯಹೂದಿಗಳು ಪ್ರಾಣವನ್ನೇ ಮುಡಿಪಾಗಿಡಲು ಸಿದ್ದರಿದ್ದಾರೆ ಎಂದು ಖ್ಯಾತ ಪತ್ರಕರ್ತ, ಏಷ್ಯಾನೆಟ್-ಸುವರ್ಣವಾಹಿನಿಯ ಪ್ರಧಾನ ಸಂಪಾದಕ, ಶ್ರೀಅಜಿತ್ ಹನುಮಕ್ಕನವರ್ ತಿಳಿಸಿದರು.
ರಾಷ್ಟ್ರೋತ್ಥಾನ ಪರಿಷತ್‍ನ ಸಾಹಿತ್ಯ ವಿಭಾಗ ಕೆಂಪೇಗೌಡ ನಗರದಲ್ಲಿರುವ ‘ಕೇಶವಶಿಲ್ಪ’ ಸಭಾಂಗಣದಲ್ಲಿಆಯೋಜಿಸಿರುವ ಒಂದು ತಿಂಗಳ ಕನ್ನಡ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ʼ3ನೆಯ ಕನ್ನಡ ಪುಸ್ತಕಹಬ್ಬ’ದ ಅಂಗವಾಗಿ ಈ ದಿನ ಆಯೋಜಿಸಿದ್ದ ‘ಪುಟ್ಟ ಇಸ್ರೇಲ್ ಕಲಿಸುವ ದಿಟ್ಟತನದ ಪಾಠಗಳು’ ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದರು.
ಸಂಕೀರ್ಣ ಭೌಗೋಳಿಕತೆ, ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ಇಸ್ರೇಲ್ ದಾಳಿಗಳಿಂದ ನಲುಗುತ್ತಿದ್ದರೂ ಇನ್ನೂ ಅಪೂರ್ವ ಸಾರ್ವಭೌಮತೆಯನ್ನು ಕಾಪಿಡುವ ಮೂಲಕ ಅಸ್ತಿತ್ತ್ವದಲ್ಲಿದೆ ಎನ್ನುವುದೇ ಪವಾಡ. ಮಧ್ಯಏಷ್ಯಾದ ಪುಟ್ಟ ದೇಶವಾದ ಇಸ್ರೇಲ್, ಭಾರತ ಸ್ವಾತಂತ್ರ್ಯ ಪಡೆದ ತರುವಾಯ ಅಸ್ತಿತ್ವ ಪಡೆದು ದಶಕಗಳ ಅಂತರದಲ್ಲಿ ಜಗತ್ತಿನಲ್ಲೇ ಅತಿ ಬಲಾಢ್ಯ ದೇಶವಾಗಿ ಹೊರಹೊಮ್ಮಿದ್ದುಅದರ ದಿಟ್ಟತನದ ಸಂಕೇತ. ಹಮಾಸ್ ಅ. 7ರಂದು ನಡೆಸಿದ ದಾಳಿ ಇಸ್ರೇಲ್‍ನ ಗುಪ್ತಚರ ದಳದ ಸೋಲೆಂದು ಬಿಂಬಿಸಬೇಕಿಲ್ಲ. ಅದರ ಮಾನವೀಯತೆಗೆ ಹಮಾಸ್ ಎಸಗಿದ ಮೋಸದ ವಂಚನೆಯೇ ಕಾರಣ ಎಂದು ಅವರು ವಿಶ್ಲೇಷಿಸಿದರು.
ಇಸ್ರೇಲಿಗಳ ಪಾರಂಪರಿಕ ಆಚರಣೆ ‘ಶಬಾತ್’ನ ಮರೆಯಲ್ಲಿ ಹಮಾಸ್ ಎಸಗಿದ ಕ್ರೂರತೆ ಮೃಗೀಯ ಮತಾಂಧತೆಯ ಪರಾಕಾಷ್ಠೆಯಾಗಿತ್ತು. ಇದಕ್ಕೆ ಪ್ರತಿಯಾಗಿ ದಿಟ್ಟಇಸ್ರೇಲ್ ನಿತ್ಯ ಉತ್ತರಿಸುತ್ತಿದೆ ಎಂದರು.
ಇಸ್ರೇಲ್ ನ ಇತಿಹಾಸದತ್ತ ಬೆಳಕು ಚೆಲ್ಲಿದ ಅವರು, ರಾಷ್ಟ್ರಭಕ್ತಿ, ಸವಾಲುಗಳನ್ನುಎದುರಿಸುವಲ್ಲಿಯ ಸನ್ನದ್ದತೆಗಳ ಬಗ್ಗೆ ವಿಶ್ಲೇಷಿಸುತ್ತಾ, ಅಲ್ಲಿಯ ಪ್ರತಿಪಕ್ಷದ ನಾಯಕರೂ ರಾಷ್ಟ್ರರಕ್ಷಣೆಯ ವಿಷಯಗಳು ಬಂದಾಗ ಆಡಳಿತ ಪಕ್ಷದೊಂದಿಗೆ ಜೊತೆಯಾಗಿ ಬೆಂಬಲವಾಗಿರುತ್ತಾರೆ. ಪ್ರಜ್ಞಾವಂತನಾಯಕರ ಆಯ್ಕೆ ರಾಷ್ಟ್ರವೊಂದರ ಬೆಳವಣಿಗೆ, ಸವಾಲುಗಳ ನಿವಾರಣೆಗಳಲ್ಲಿ ಹೇಗೆ ಪ್ರಭಾವಶಾಲಿ ಎಂದು ವಿವರಿಸಿದರು. ಆಯ್ಕೆಗಳ ವೇಳೆ ಮೈಮೇಲಿನ ಪ್ರಜ್ಞೆ ಜಾಗೃತವಾಗಿರಬೇಕೆಂದು ಕರೆ ನೀಡಿದರು.
ಹಮಾಸ್ ದಾಳಿ ಗಾಜಾದೇಶಕ್ಕಾಗಿ ಅಲ್ಲ. ಅದು ಮತಾಂಧತೆಯ ಪರಾಕಾಷ್ಠೆಯಾಗಿ ಜಗತ್ತಿಗೆ ಹೊಸ ಎಚ್ಚರಿಕೆ ನೀಡಿದೆ. ಈ ನಿಟ್ಟಿನಲ್ಲಿ ಭದ್ರತೆ, ರಕ್ಷಣೆಗಳ ಮಹತ್ವ ನಾವು ಕಲಿಯಬೇಕು ಎಂದು ತಿಳಿಸಿದರು. ಪ್ರತಿಯೊಬ್ಬರೂ ತಮ್ಮ ವ್ಯಾಪ್ತಿಯಲ್ಲಿ ಜಾಗೃತರಾಗಿ ರಕ್ಷಣೆಯ ಜವಾಬ್ದಾರಿಯ ನಿಜ ಸೈನಿಕನಾದಾಗ ಭಯವಿಲ್ಲದೆ ಬದುಕು ಭವಿಷ್ಯದಲ್ಲಿ ಸಾಕಾರಗೊಳ್ಳಬಲ್ಲದೆಂಬುದು ನಮ್ಮಅರಿವಲ್ಲಿರಬೇಕೆಂದು ಕರೆ ನೀಡಿದರು.
ನಿವೃತ್ತ ವೈಮಾನಿಕ, ವಿಂಗ್ ಕಮಾಂಡರ್ ಬಿ.ಎಸ್.ಸುದರ್ಶನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ತನ್ನ ನವ ವೈಜ್ಞಾನಿಕ ತಂತ್ರಜ್ಞಾನದ ಮಧ್ಯೆ ಇಸ್ರೇಲ್ ಒಮ್ಮೆಗೆ ಕಂಪಿಸಿದ್ದು ನಿಜ. ಅದರ ಗುಪ್ತಚರ ದಳ ಸಾಂಪ್ರದಾಯಿಕ ವ್ಯವಸ್ಥೆಯಿಂದ ಆಚೆಗೆ ಆಧುನಿಕ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯ ಅತಿವಿಶ್ವಾಸ, ಮೈಮರೆವಿನಿಂದ ಹಿನ್ನಡೆಗೆ ಕೆಲವೊಮ್ಮೆ ಕಾರಣವಾಗಿರಬಹುದು. ಈ ನಿಟ್ಟಿನಲ್ಲಿ ಜಗತ್ತಿಗೆ ಪಾಠವಾಗಿದೆ ಎಂದರು. ಲೇಖಕ ಮಂಜುನಾಥ ಅಜ್ಜಂಪುರ ಅವರು ಅತಿಥಿಗಳನ್ನು ಗೌರವಿಸಿದರು.