ಈ ಬಾಹ್ಯಾಕಾಶಯಾನಗಳ ಮೂಲಕ 2023ರಲ್ಲಿ ನಭವನ್ನಾಳಲು ಸಜ್ಜಾಗಿದೆ ಇಸ್ರೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
2022ರಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆ ಗೊತ್ತೇ ಇದೆ. 36 ಒನ್‌ ವೆಬ್‌ ಉಪಗ್ರಹ ಉಡಾವಣೆ, ಸ್ಕೈರೂಟ್‌ ಎಂಬ ನವೋದ್ದಿಮೆಯೊಂದು ಮೊದಲ ಖಾಸಗಿ ಉಪಗ್ರಹವನ್ನು ಕಕ್ಷೆಗೆ ಸೇರಿಸಿದ್ದು, ಶ್ರೀಹರಿಕೋಟಾದ ಇಸ್ರೋ ಉಡಾವಣಾ ಕೇಂದ್ರದಲ್ಲಿ ಅಗ್ನಿಕುಲ್‌ ಕಾಸ್ಮೋಸ್‌ ಎಂಬ ನವೋದ್ದಿಮೆಯಿಂದ ಮೊದಲ ಖಾಸಗಿ ಲಾಂಚ್‌ ಪ್ಯಾಡ್‌ ಸ್ಥಾಪನೆ ಹೀಗೆ 2022ರಲ್ಲಿ ಭಾರತದ ಬಾಹ್ಯಾಕಾಶ ಸಾಧನೆಗಳು ಜಗತ್ತೇ ತಿರುಗಿ ನೋಡುವಂತೆ ಮಾಡಿದೆ. 2022ನೇ ವರ್ಷಕ್ಕೆ ವಿದಾಯ ಹೇಳಿ 2023 ಅನ್ನು ಸ್ವಾಗತಿಸಿಕೊಳ್ಳುತ್ತಿರೋ ಹೊತ್ತಲ್ಲಿ ಮತ್ತೊಮ್ಮೆ ತನ್ನ ಅದ್ಭುತ ಬಾಹ್ಯಾಕಾಶ ಯೋಜನೆಗಳ ಮೂಲಕ ನಭವನ್ನಾಳಲು ಇಸ್ರೋ ಸಜ್ಜಾಗಿದೆ.

ಗಗನಯಾನ್‌, ಚಂದ್ರಯಾನ-3, ಆದಿತ್ಯ L1 ಸನ್ ಹೀಗೆ ಈ ವರ್ಷದಲ್ಲಿ ಇಸ್ರೋ ದೊಡ್ಡ ದೊಡ್ಡ ಬಾಹ್ಯಾಕಾಶ ಯಾನದ ಯೋಜನೆಗಳನ್ನು ಹಾಕಿಕೊಂಡಿದೆ. ಇದಲ್ಲದೇ ಇಸ್ರೋವು ಮರುಬಳಕೆ ಮಾಡಬಲ್ಲ ಉಪಗ್ರಹ ಉಡಾವಣಾ ವಾಹನದ ರನ್‌ ವೇ ಲ್ಯಾಂಡಿಂಗ್ ಪ್ರಯೋಗವನ್ನು ಕರ್ನಾಟಕದ ಚಿತ್ರದುರ್ಗದಲ್ಲಿನ ಏರೋನಾಟಿಕಲ್ ಪರೀಕ್ಷಾ ಕೇಂದ್ರದಲ್ಲಿ ನಡೆಸಲು ಚಿಂತಿಸಿದೆ.

2014ರಲ್ಲಿ ಮೋದಿ ಆಡಳಿತ ಬಂದಾಗಿನಿಂದ 2022ರ ಅಂತ್ಯದ ವರೆಗೆ ಇಸ್ರೋ ಅನೇಕ ಸಾಧನೆಗಳನ್ನು ಮಾಡಿದೆ. 44 ಬಾಹ್ಯಾಕಾಶ ನೌಕೆ ಕಾರ್ಯಾಚರಣೆಗಳು, 42 ಉಡಾವಣಾ ವಾಹನ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿಸಿದ ಇಸ್ರೋ ಈಗ ಹೊಸವರ್ಷ 2023ರಲ್ಲಿ ಮತ್ತೊಮ್ಮೆ ಸಾಧನೆ ಮಾಡಲು ಸಿದ್ಧವಾಗಿದ್ದು 2023ರ ಆರಂಭಿಕ ತಿಂಗಳುಗಳಲ್ಲಿ ಆದಿತ್ಯ ಸನ್ ಮಿಷನ್ ಅನ್ನು ಪ್ರಾರಂಭಿಸುತ್ತಿದ್ದು, ಭೂಮಿಯಿಂದ 1.5 ಮಿಲಿಯನ್ ಕಿಮೀ ದೂರದಲ್ಲಿರುವ ಸೂರ್ಯನ ಕರೋನ, ವರ್ಣಗೋಳ ಮತ್ತು ದ್ಯುತಿಗೋಳ, ಅದರಿಂದ ಹೊರಹೊಮ್ಮುವ ಕಣದ ಹರಿವು ಮತ್ತು ಕಾಂತೀಯ ಕ್ಷೇತ್ರದ ಕುರಿತು ವಿವರವಾದ ಅಧ್ಯಯನಕ್ಕೆ ಈ ಬಾಹ್ಯಾಕಾಶ ಯೋಜನೆ ಸಹಾಯಕವಾಗಲಿದೆ.

ಇದಲ್ಲದೇ 2023ರ ಜೂನ್‌ ನಂತರದಲ್ಲಿ ಬಹುನಿರೀಕ್ಷಿತ ಚಂದ್ರಯಾನ-3 ಯನ್ನು ಪ್ರಾರಂಭಿಸಲಿದೆ. ಚಂದ್ರಯಾನ-2 ಭಾಗಶಃ ಸಫಲವಾಗಿದ್ದು, ಚಂದ್ರಯಾನ-3 ಮೂಲಕ ಮತ್ತೊಮ್ಮೆ ಚಂದ್ರನ ದಕ್ಷಿಣತುದಿಯಲ್ಲಿ ರೋವರ್‌ ಇಳಿಸುವ ಮೂಲಕ ಚಂದ್ರನ ದಕ್ಷಿಣ ತುದಿ ತಲುಪಿದ ಮೊದಲ ದೇಶ ಎನಿಸಿಕೊಳ್ಳಲು ಸಜ್ಜಾಗಿದೆ. 2023ರ ಕೊನೆಯ ತ್ರೈಮಾಸಿಕದಲ್ಲಿ ಮೊದಲ ಮಾನವ ರಹಿತ ಗಗನಯಾನವನ್ನು ಆರಂಭಿಸುವ ಕುರಿತು ಇಸ್ರೋ ಯೋಜನೆ ಹಾಕಿಕೊಂಡಿದ್ದು ಇದರ ಮೌಲ್ಯಮಾಪನದ ನಂತರ ಇನ್ನೊಂದು ಮಾನವ ರಹಿತ ಯಾನ ಮುಗಿಸಿ ಅಂತಿಮವಾಗಿ ಮಾನವಸಹಿತ ಗಗನಯಾನಕ್ಕೆ ಸಿದ್ಧತೆ ನಡೆಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!