ಬಾಹ್ಯಾಕಾಶ ನವೋದ್ದಿಮೆಗಳ ಉತ್ತೇಜನಕ್ಕೆ ಇಸ್ರೋ-ಮೈಕ್ರೋಸಾಫ್ಟ್‌ ನಡುವೆ ಒಪ್ಪಂದ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶದ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಹಾಗು ಬಾಹ್ಯಾಕಾಶ ನವೋದ್ದಿಮೆಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ಹಾಗೂ ಸಾಫ್ಟ್‌ವೇರ್‌ ದಿಗ್ಗಜ ಮೈಕ್ರೋಸಾಫ್ಟ್‌ ನಡುವೆ ಒಪ್ಪಂದ ಏರ್ಪಟ್ಟಿದೆ.

ಇದರ ಅನ್ವಯ ಇಸ್ರೋವು ಗುರುತಿಸಿದ ಬಾಹ್ಯಾಕಾಶ ನವೋದ್ದಿಮೆಗಳಿಗೆ ಮೈಕ್ರೋಸಾಪ್ಟ್‌ ಕಂಪನಿಯ ʼಸ್ಟಾರ್ಟ್‌ಅಪ್‌ಗಳ ಫೌಂಡರ್ಸ್ ಹಬ್’ ಪ್ಲಾಟ್‌ಫಾರ್ಮ್‌ ಮೂಲಕ ಉತ್ತೇಜನ ನೀಡಲಾಗುತ್ತದೆ. ಇದರ ಮೂಲಕ ನವೋದ್ದಿಮೆಗಳು ಪ್ರಾಥಮಿಕ ಹಂತದಿಂದ ಯುನಿಕಾರ್ನ್‌ ಆಗಿ ಬದಲಾಗುವವರೆಗೆ ಪ್ರತಿ ಹಂತದಲ್ಲಿಯೂ ಮೈಕ್ರೋಸಾಫ್ಟ್‌ ಬೆಂಬಲವನ್ನು ಪಡೆಯಲಿವೆ. ಅಲ್ಲದೇ ತಮ್ಮ ವ್ಯವಹಾರಗಳನ್ನು ನಿರ್ಮಿಸಲು ಮತ್ತು ನಡೆಸಲು ಅಗತ್ಯವಿರುವ ಟೆಕ್ ಪರಿಕರಗಳು ಮತ್ತು ಸಂಪನ್ಮೂಲಗಳು ಉಚಿತವಾಗಿ ನವೋದ್ದಿಮೆಗಳಿಗೆ ಲಭ್ಯವಾಗಲಿವೆ. ಗಿಟ್‌ಹಬ್ ಎಂಟರ್‌ಪ್ರೈಸ್, ವಿಷುಯಲ್ ಸ್ಟುಡಿಯೋ ಎಂಟರ್‌ಪ್ರೈಸ್ ಮತ್ತು ಮೈಕ್ರೋಸಾಫ್ಟ್ 365 ನಂತಹ ಉತ್ಪಾದನಾ ಸಾಧನಗಳು ಅವರಿಗೆ ಲಭ್ಯವಾಗಲಿವೆ.

ಬಾಹ್ಯಾಕಾಶ ಎಂಜಿನಿಯರಿಂಗ್‌ನಿಂದ ಹಿಡಿದು ಕ್ಲೌಡ್ ತಂತ್ರಜ್ಞಾನಗಳು, ಉತ್ಪನ್ನ ಮತ್ತು ವಿನ್ಯಾಸ, ನಿಧಿಸಂಗ್ರಹಣೆ ಮತ್ತು ಮಾರಾಟ ಮತ್ತು ಮಾರ್ಕೆಟಿಂಗ್‌ನವರೆಗಿನ ಕ್ಷೇತ್ರಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಉದ್ಯಮಿಗಳಿಗೆ ಮೈಕ್ರೋಸಾಫ್ಟ್ ಮಾರ್ಗದರ್ಶನ ಬೆಂಬಲವನ್ನು ನೀಡಲಿದೆ.

“ಮೈಕ್ರೋಸಾಫ್ಟ್‌ನೊಂದಿಗಿನ ಇಸ್ರೋದ ಸಹಯೋಗವು ಬಾಹ್ಯಾಕಾಶ ತಂತ್ರಜ್ಞಾನದ ಸ್ಟಾರ್ಟ್‌ಅಪ್‌ಗಳಿಗೆ ತಮ್ಮ ವಿಶ್ಲೇಷಣೆಗೆ ಅಪಾರ ಪ್ರಮಾಣದ ಉಪಗ್ರಹ ಡೇಟಾವನ್ನು ಸಂಸ್ಕರಿಸುವಲ್ಲಿ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಮತ್ತು ಆಳವಾದ ಕಲಿಕೆಯಂತಹ ಅತ್ಯಾಧುನಿಕ ವಿಧಾನಗಳನ್ನು ಬಳಸುವ ಮೂಲಕ ನವೋದ್ದಿಮೆಗಳಿಗೆ ಹೆಚ್ಚಿನ ಬೆಳವಣಿಗೆಗೆ ಇದು ಅನುವು ಮಾಡಿಕೊಡಲಿದೆ” ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!