ʼಗಗನ್‌ಯಾನ್‌ʼಗೆ ಶಕ್ತಿತುಂಬುವ LVM3 ಬೂಸ್ಟರ್‌ ಗಳ ಯಶಸ್ವೀ ಪ್ರಯೋಗ ನಡೆಸಿದ ಇಸ್ರೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ ಚೊಚ್ಚಲ ಮಾನವಸಹಿತ ಮಿಷನ್ ಗಗನ್‌ಯಾನ್‌ಗೆ ಶಕ್ತಿ ತುಂಬುವ HS200 ಬೂಸ್ಟರ್‌ಗಳ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿದೆ. ಇಂದು ಬೆಳಿಗ್ಗೆ ನಸುಕಿನ ಜಾವದಲ್ಲಿ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಈ ಬೂಸ್ಟರ್‌ ಗಳ ಪರೀಕ್ಷೆ ಮಾಡಲಾಗಿದೆ.

HS200 ಎನ್ನುವುದು GSLV Mk III ಉಪಗ್ರಹದ ರಾಕೆಟ್‌ ಬೂಸ್ಟರ್‌ ನ ಸುಧಾರಿತ ಆವೃತ್ತಿಯಾಗಿದ್ದು ಇದನ್ನು LVM3 ಎಂದು ಕರೆಯಲಾಗುತ್ತದೆ. ಈ LVM3 ಮೂಲಕ ಜಿಯೋಸಿಂಕ್ರೊನಸ್ ವರ್ಗಾವಣೆ ಕಕ್ಷೆಗೆ 4000 ಕೆಜಿ ವರ್ಗದ ಉಪಗ್ರಹಗಳನ್ನು ಉಡಾವಣೆ ಮಾಡಲು ಉದ್ದೇಶಿಸಲಾಗಿದೆ. ಇದನ್ನು ವಿಶ್ವದ ಎರಡನೇ ಅತಿದೊಡ್ಡ ಘನ ಇಂಧನ ಹೊಂದಿರುವ ಕಾರ್ಯಾಚರಣೆಯ ಬೂಸ್ಟರ್‌ ಎನ್ನಲಾಗಿದೆ.

ಪ್ರಸ್ತುತ LVM3 ಯ ಮೊದಲ ಹಂತವಾದ S200 ಮೋಟರ್ ಅನ್ನು ಸ್ಟ್ರಾಪ್-ಆನ್ ರಾಕೆಟ್ ಬೂಸ್ಟರ್ ಆಗಿ ಪರಿವರ್ತನೆ ಮಾಡಲಾಗಿದೆ. ಇದನ್ನು ತಿರುವನಂತಪುರಂನ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ವಿನ್ಯಾಸ ಮತ್ತು ಅಭಿವೃದ್ಧಿ ಪಡಿಸಲಾಗಿದ್ದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ತಯಾರಿಸಲಾಗಿದೆ. ಪ್ರಸ್ತುತ ಈ ರಾಕೆಟ್‌ ಬೂಸ್ಟರ್‌ ನ ಯಶಸ್ವಿ ಪ್ರಯೋಗದ ನಂತರ ಭಾರತದ ಮೊದಲ ಗಗಯಾತ್ರಿ ಮಿಷನ್‌ ಗಗನ್‌ ಯಾನ್‌ ಗೆ LVM3 ಬೂಸ್ಟರ್‌ ನ್ನು ಬಳಸಲು ನಿರ್ಧರಿಸಲಾಗಿದೆ. ಹಾಗೂ ಮಾನವ ಸಹಿತ ಕಾರ್ಯಾಚರಣೆಗೆ ಅಗತ್ಯವಿರುವ ಹಲವು ಸುಧಾರಣೆಗಳನ್ನು ಮಾಡಲಾಗುತ್ತಿದೆ ಎಂದು ಇಸ್ರೋ ಮೂಲಗಳು ಹೇಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!