ಒಂದು ಪಕ್ಷದ ಮುಖವಾಣಿಯಾಗಿ ಸ್ಪೀಕರ್ ನಡೆದುಕೊಂಡಿದ್ದು ಸರಿಯಲ್ಲ: ಸಂಸದ ಕೋಟ ಶ್ರೀನಿವಾಸ್ ಪೂಜಾರಿ

ಹೊಸದಿಗಂತ ವರದಿ, ದಾವಣಗೆರೆ :

ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವ ಸ್ಪೀಕರ್ ಒಂದು ಪಕ್ಷದ ಮುಖವಾಣಿಯಾಗಿ ನಡೆದುಕೊಂಡಿದ್ದು ಸರಿಯಲ್ಲ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದವರ ಕೆಲಸವೇ ವಿರೋಧ ಮಾಡುವುದು. ಈ ಕಾರಣಕ್ಕೆ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿದ್ದು ದುರಂತ. ಪವಿತ್ರವಾದ ಸ್ಪೀಕರ್ ಹುದ್ದೆಯಲ್ಲಿರುವವರು ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಅದನ್ನು ಬಿಟ್ಟು ಸರ್ಕಾರವನ್ನು ಪ್ರಶ್ನಿಸಿದ ಪ್ರತಿಪಕ್ಷದ ಶಾಸಕರನ್ನು 6 ತಿಂಗಳು ಅಮಾನತು ಮಾಡುವ ಹಂತಕ್ಕೆ ಸ್ಪೀಕರ್ ಇಳಿದಿರುವುದು ಖಂಡನೀಯ ಎಂದರು.

ಕರ್ನಾಟಕದಲ್ಲಿ ಆಡಳಿತ ಯಾವ ದಿಕ್ಕಿನಲ್ಲಿ ನಡೆಯುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಹನಿಟ್ರ್ಯಾಪ್ ಪ್ರಕರಣವನ್ನು ತನಿಖೆಗೊಪ್ಪಿಸುವಂತೆ ಸ್ವತಃ ಗೃಹಮಂತ್ರಿಯೇ ಮನವಿ ಮಾಡುತ್ತಿದ್ದಾರೆ. ಆಡಳಿತ ಪಕ್ಷದ ಹಿರಿಯ ಸಚಿವರೊಬ್ಬರು ತಮ್ಮದೇ ಪಕ್ಷದ ಸಚಿವರ ವಿರುದ್ಧ ದೂರು ಕೊಟ್ಟಿದ್ದು ಆತಂಕದ ಸಂಗತಿ. ಇದಂತೂ ಊಹೆ ಮಾಡಲಾಗದ ಬೆಳವಣಿಗೆ ಎಂದು ಅವರು ನುಡಿದರು.

ಸಂವಿಧಾನ ವಿರೋಧಿಯಾಗಿ ಮುಸ್ಲಿಂ ಸಮಾಜಕ್ಕೆ ಕಾಮಗಾರಿಯಲ್ಲಿ ಶೇ.೪ರಷ್ಟು ಮೀಸಲಾತಿ ನೀಡುತ್ತಿರುವುದು ಸರಿಯಲ್ಲ. ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವಂತಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ಆದೇಶವಿದೆ. ಪರಿಶಿಷ್ಟರಿಗೆ, ಬಡವರಿಗೆ ಮಾತ್ರ ಮೀಸಲಾತಿ ನೀಡುವುದು ಸಂವಿಧಾನದ ಆಶಯವಾಗಿದೆ. ಆದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಓಟ್ ಬ್ಯಾಂಕ್ ಗಾಗಿ ಮೀಸಲಾತಿ ನೀಡುತ್ತಿರುವುದು ರಾಜ್ಯದ ಜನರ ದುರಂತ. ಇದರ ವಿರುದ್ಧ ಬಿಜೆಪಿ ಜನಾಂದೋಲನ ನಡೆಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಶಾಸಕ ಬಸವಗೌಡ ಪಾಟೀಲ್ ಯತ್ನಾಳ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಡುವಿನ ಸಂಘರ್ಷ ಮುಕ್ತಾಯವಾಗಿದೆ. ಮಳೆ ಬರುವ ಮುನ್ನ ಗುಡುಗು, ಸಿಡಿಲು ಸಹಜ. ಇಷ್ಟು ದಿನದ ಗುಡುಗು-ಸಿಡಿಲು ಮುಗಿದು ವಾತಾವರಣ ತಿಳಿಯಾಗಿದೆ. ಕೇಂದ್ರದಲ್ಲಿ ನಮ್ಮದು ಬಲಿಷ್ಟ ನಾಯಕತ್ವವಿದ್ದು, ಎಲ್ಲವೂ ಸರಿಯಾಗಿದೆ. ವಿಪಕ್ಷವಾಗಿ ರಾಜ್ಯ ಸರ್ಕಾರದ ತಪ್ಪುಗಳನ್ನು ತಿದ್ದುವ ಕೆಲಸ ಮಾಡುತ್ತೇವೆ. ನಮ್ಮ ಪಕ್ಷವು ರಾಜ್ಯದಲ್ಲಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮುತ್ತಿದೆ ಎಂದು ಅವರು ತಿಳಿಸಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!